ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಸೀಮಿತವಾದ ಹೊಸ ವರ್ಷಾಚರಣೆ

ಕೋವಿಡ್‌ ಕಾರಣಕ್ಕೆ ನಡೆಯದ ಸಾಮೂಹಿಕ ಆಚರಣೆ; ಪೊಲೀಸ್ ಬಂದೋಬಸ್ತ್
Last Updated 1 ಜನವರಿ 2021, 2:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ವರ್ಷಾಂತ್ಯದ ಸಂಭ್ರಮಾಚರಣೆ ಈ ಬಾರಿ ಕಳೆಗುಂದಿತ್ತು. ಕೊರೊನಾ ಕಾರಣಕ್ಕಾಗಿ ಸಾಮೂಹಿಕ ಆಚರಣೆಗೆ ಜಿಲ್ಲಾಡಳಿತ ನಿಷೇಧ ಹೇರಿದ ಕಾರಣ ಹೊಸ ವರ್ಷದ ಸ್ವಾಗತದ ಸಂಭ್ರಮ ಮನೆಗಷ್ಟೇ ಸೀಮಿತವಾಯಿತು.

ಪ್ರತಿ ವರ್ಷ ಹೊಸ ವರ್ಷದ ಸ್ವಾಗತಕ್ಕೆ ಡಿ. 31ರಂದು ಮಧ್ಯರಾತ್ರಿ ಕಿಕ್ಕಿರಿದು ತುಂಬಿರುತ್ತಿದ್ದ ಹೋಟೆಲ್‌ಗಳು, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಭಣಗುಡುತ್ತಿತ್ತು. ದೂರದ ಊರುಗಳಿಗೆ ಹೋಗುವ ಕೆಲ ಪ್ರಯಾಣಿಕರನ್ನು ಹೊರತುಪಡಿಸಿದರೆ, ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಹೊಸ ವರ್ಷವನ್ನು ಕೇಕ್ ಕತ್ತರಿಸಿ ಸ್ವಾಗತಿಸುವ ಪರಿಪಾಠ ಇರುವುದರಿಂದ, ನಗರದ ಬಹುತೇಕ ಬೇಕರಿಗಳಲ್ಲಿ ಕೇಕ್‌ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು. ಸಂಜೆಯಿಂದಲೇ ಬೇಕರಿಗಳ ಮುಂದೆ ಜಮಾಯಿಸಿದ್ದ ಜನ, ಬಗೆ ಬಗೆಯ ಕೇಕ್‌ಗಳನ್ನು ಮನೆಗೆ ಕೊಂಡೊಯ್ದರು. ಮದ್ಯದ ಅಂಗಡಿಗಳಲ್ಲಿ ಸಂಜೆಯಿಂದಲೇ ಖರೀದಿ ಭರಾಟೆ ಹೆಚ್ಚಾಗಿತ್ತು.

ಚರ್ಚ್‌ಗಳಲ್ಲಿ ಕಾಣದ ಸಂಭ್ರಮ: ನಗರದ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದರೂ, ರಾತ್ರಿ ಅಲ್ಲಿ ಜನರ ಸುಳಿವಿರಲಿಲ್ಲ. ಹೊಸ ವರ್ಷದ ಅಂಗವಾಗಿ ನಡೆಯುತ್ತಿದ್ದ ಕೃತಜ್ಞತಾ ಆರಾಧನೆಯನ್ನು ರದ್ದುಗೊಳಿಸಿ, ಬೆಳಿಗ್ಗೆ ಆರಾಧನೆಯನ್ನಷ್ಟೇ ನಡೆಸಲಾಯಿತು.

ರಾತ್ರಿ 10.30ರ ಹೊತ್ತಿಗೆ ನಗರದ ಹೋಟೆಲ್‌, ಕ್ಲಬ್, ಬಾರ್ ಅಂಡ್ ರೆಸ್ಟೊರೆಂಟ್, ಪಾರ್ಟಿ ಹಾಲ್‌, ಮನರಂಜನಾ ಕೇಂದ್ರಗಳಲ್ಲೂ ಸಂಭ್ರಮಾಚರಣೆ ಇರಲಿಲ್ಲ. ಭೋಜನ ವ್ಯವಸ್ಥೆ ಸೇರಿದಂತೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡದಂತೆ ನಿಷೇಧ ಹೇರಿದ್ದರಿಂದ, ನಿಗದಿತ ಸಮಯಕ್ಕೆ ಎಲ್ಲವೂ ಬಾಗಿಲು ಮುಚ್ಚಿದವು. ಡಿ.ಜೆ ಸಂಗೀತದ ನೃತ್ಯ ಕಾರ್ಯಕ್ರಮಗಳು ಬಂದ್ ಆಗಿದ್ದವು. ಬಡಾವಣೆಗಳಲ್ಲಿ ಸ್ಥಳೀಯ ಯುವಜನ ನಡೆಸುತ್ತಿದ್ದ ಸಂಭ್ರಮಾಚರಣೆಗೂ ಬ್ರೇಕ್ ಬಿದ್ದಿತ್ತು.

ಬಿಗಿ ಬಂದೋಬಸ್ತ್: ಚನ್ನಮ್ಮನ ವೃತ್ತ, ಹೊಸೂರು ವೃತ್ತ, ಕೋರ್ಟ್ ವೃತ್ತ, ಕೇಶ್ವಾಪುರ ವೃತ್ತ, ಗೋಕುಲ ರಸ್ತೆ ಸೇರಿದಂತೆ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಪಾಯಕಾರಿ ಮೋಜಿನ ರೇಸ್ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು, ವಾಹನ ಸವಾರರನ್ನು ತಡೆದು ತಪಾಸಣೆ ನಡೆಸಿ ಕಳಿಸುತ್ತಿದ್ದರು. ಜನ ಗುಂಪುಗೂಡದಂತೆ ಧ್ವನಿವರ್ಧಕದಲ್ಲಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದ ಚಿತ್ರಣ ಅಲ್ಲಲ್ಲಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT