ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾರ್ಥ ಸೇವಾ ಸಿಬ್ಬಂದಿಗೆ ನೋಟಿಸ್

ಸಾರಿಗೆ ಮುಷ್ಕರ: ಕರ್ತವ್ಯಕ್ಕೆ ಹಾಜರಾಗುವಂತೆ ನಿಯಂತ್ರಣಾಧಿಕಾರಿ ಸೂಚನೆ
Last Updated 16 ಏಪ್ರಿಲ್ 2021, 15:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಆರಂಭವಾದಾಗಿನಿಂದಲೂ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿರುವ 233 ಸಿಬ್ಬಂದಿಗೆ, ಮುಷ್ಕರ ಕೈಬಿಟ್ಟು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಶುಕ್ರವಾರ ಸೂಚನಾ ಪತ್ರ ನೀಡಲಾಗಿದೆ. ಗೈರು ಹಾಜರಿ ಕುರಿತು ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದೆ.

ಪರೀಕ್ಷಾರ್ಥ ಅವಧಿಯಲ್ಲಿ ತಪ್ಪದೆ ಕರ್ತವ್ಯ ನಿರ್ವಹಿಸಬೇಕು. ಆದರೆ, ಪರೀಕ್ಷಾರ್ಥ ನೌಕರರು ಕೆಲಸದಿಂದ ದೂರವುಳಿದು ಕಾನೂನುಬಾಹಿರ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ನಿಯೋಜನಾ ಆದೇಶದಲ್ಲಿನ ಷರತ್ತುಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಸಂಸ್ಥೆಯ ಪರೀಕ್ಷಾರ್ಥ ಸೇವೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2,110 ನೌಕರರಿದ್ದು ಈ ಪೈಕಿ, 258 ಮಂದಿ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ನಾಲ್ವರ ಅಮಾನತು

ಮುಷ್ಕರನಿರತ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಮುಂದುವರಿಸಿರುವ ಸಂಸ್ಥೆಯು ಕರ್ತವ್ಯಕ್ಕೆ ಗೈರಾದ ನಾಲ್ವರನ್ನು ಅಮಾನತು ಮಾಡಿ, 71 ಮಂದಿಯನ್ನು ವರ್ಗಾವಣೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

179 ಬಸ್ಸುಗಳ ಕಾರ್ಯಾಚರಣೆ

ಮುಷ್ಕರದ ನಡುವೆಯೂ ಶುಕ್ರವಾರ ಸಂಜೆಯವರೆಗೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ಹಾಗೂ ಹುಬ್ಬಳ್ಳಿ–ಧಾರವಾಡ ನಗರ ವಿಭಾಗದಿಂದ ಒಟ್ಟು 179 ಬಸ್‌ಗಳು ಕಾರ್ಯಾಚರನೆ ನಡೆಸಿವೆ.

ಗ್ರಾಮಾಂತರ ವಿಭಾಗದ ಒಂದನೇ ಡಿಪೋದಿಂದ 22 ಬಸ್ಸು, ಎರಡನೇ ಡಿಪೋದಿಂದ 44, ಮೂರನೇ ಡಿಪೋದಿಂದ 26, ನವಲಗುಂದದಿಂದ 4 ಹಾಗೂ ಕಲಘಟಗಿಯಿಂದ 3 ಬಸ್ಸು ಸೇರಿದಂತೆ ಒಟ್ಟು 99 ಬಸ್ಸುಗಳು ಹಾಗೂ ನಗರ ಸಾರಿಗೆ ವಿಭಾಗದಿಂದ ಒಟ್ಟು 80 ಬಸ್‌ಗಳು ಸಂಚಾರ ಮಾಡಿವೆ. ಅವಳಿನಗರದ ಮಧ್ಯೆ 23 ಬಿಆರ್‌ಟಿಎಸ್ ಬಸ್‌ಗಳು ಸಂಚರಿಸಿವೆ

ಕರ್ತವ್ಯ ನಿರತರಿಗೆ ಅಭಿನಂದನೆ

ಮುಷ್ಕರದ ನಡುವೆಯೂ ಸಂಸ್ಥೆಯ ಕರೆಗೆ ಓಗೊಟ್ಟು ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ವಿಭಾಗೀಯ ಸಂಚಾರ ಅಧಿಕಾರಿ ಎಸ್‌.ಎಸ್. ಮುಜುಂದಾರ ಹಾಗೂ ಎಚ್‌. ರಾಮನಗೌಡರ ಅವರು ಅಭಿನಂದನೆ ಸಲ್ಲಿಸಿದರು.

ಹಳೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ‘ಸಿಬ್ಬಂದಿಯ ಕರ್ತವ್ಯ ನಿಷ್ಠೆ ಹಾಗೂ ಬದ್ಧತೆ ಶ್ಲಾಘನೀಯ. ದಿನ ಕಳೆದಂತೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಏರಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚಾರ ಪುನರಾರಂಭಿಸಲು ಸಾಧ್ಯವಾಗಿದೆ. ನಿಮ್ಮ ಕರ್ತವ್ಯಪರತೆ ಇತರ ಸಹೋದ್ಯೋಗಿಗಳಿಗೆ ಪ್ರೇರಣೆಯಾಗಲಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT