25 ವರ್ಷ ದುಡಿದಿರುವ ಎತ್ತಿಗೂ ಜನ್ಮದಿನದ ಸಂಭ್ರಮ

ಶನಿವಾರ, ಜೂಲೈ 20, 2019
27 °C
ಕೇಕ್ ಕತ್ತರಿಸಿ ಆಚರಣೆ

25 ವರ್ಷ ದುಡಿದಿರುವ ಎತ್ತಿಗೂ ಜನ್ಮದಿನದ ಸಂಭ್ರಮ

Published:
Updated:
Prajavani

ಹುಬ್ಬಳ್ಳಿ: ಆ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಕುಟುಂಬದ ಕೃಷಿ ಚಟುವಟಿಕೆಗಳಿಗೆ ಹೆಗಲು ಕೊಟ್ಟು, ಮನೆಯ ಕಣಜ ತುಂಬಿಸಿದ್ದ ಎತ್ತಿನ 25ನೇ ವರ್ಷದ ಜನ್ಮದಿನ ಇದಕ್ಕೆ ಕಾರಣ. ಒಕ್ಕಲುತನದ ಒಡನಾಡಿಯಾದ ಎತ್ತನ್ನು ಸಿಂಗರಿಸಿ, ಪೂಜಿಸಿ ಹಾಗೂ ಕೇಕ್ ಕತ್ತರಿಸುವ ಮೂಲಕ ಅದರ ಜನ್ಮದಿನವನ್ನು ಆ ಕುಟುಂಬ ಸ್ಮರಣೀಯಗೊಳಿಸಿತು.

ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದ ಅಶೋಕ ಗಾಮನಗಟ್ಟಿ ಅವರ ಕುಟುಂಬ, ಶುಕ್ರವಾರ ಎತ್ತಿನ ಜನ್ಮದಿನ ಆಚರಿಸುವ ಮೂಲಕ ಗಮನ ಸೆಳೆದಿದೆ.

ವಯಸ್ಸಾದ ಎತ್ತುಗಳನ್ನು ಸಿಕ್ಕಷ್ಟು ಹಣ ಸಿಗಲಿ ಎಂದು ಕಸಾಯಿಖಾನೆಗೊ ಅಥವಾ ಸಾಕುವುದಕ್ಕೆ ಭಾರ ಎಂದು ಗೋಶಾಲೆಗಳಿಗೆ ಬಿಟ್ಟು ಬರುವವರೇ ಹೆಚ್ಚು. ಆದರೆ, ಗಾಮನಗಟ್ಟಿ ಕುಟುಂಬ ಇದಕ್ಕೆ ತದ್ವಿರುದ್ಧವಾಗಿದ್ದು, ಒಂಬತ್ತು ವರ್ಷಗಳಿಂದ ಎತ್ತಿನ ಜನ್ಮದಿನದಂದು ವಿಶೇಷ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ. 

1994ರ ಜುಲೈ 12ರಂದು ತಮ್ಮ ಮನೆಯಲ್ಲಿ ಜನಿಸಿದ ಎತ್ತಿನ ಬಗ್ಗೆ ಅಶೋಕ ಅವರಿಗೆ ಇನ್ನಿಲ್ಲದ ಪ್ರೀತಿ. ‘ರಾಮ’ ಎಂದು ಅದಕ್ಕೆ ನಾಮಕರಣ ಮಾಡಿರುವ ಅವರು, ಕರುವಾಗಿದ್ದಾಗಿನಿಂದಲೂ ಅದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿಯೇ ಅವರಿಬ್ಬರ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿದೆ.

ಅದೃಷ್ಟದ ಎತ್ತು:

‘ರಾಮ ಜನಿಸುವುದಕ್ಕೆ ಮುಂಚೆ ನಮ್ಮ ಕುಟುಂಬದ ಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಅದರ ಜನನ ನಮ್ಮ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಿತು. ರಾಮ ಉತ್ತಿದ ಭೂಮಿಯಲ್ಲಿ ಬಂಪರ್ ಬೆಳೆ ಜತೆಗೆ, ಒಳ್ಳೆಯ ಬೆಲೆಯೂ ಸಿಕ್ಕಿದೆ. ಇದರಿಂದಾಗಿ ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ. ನಮ್ಮ ದರಿದ್ರವನ್ನು ಹೋಗಲಾಡಿಸಿದ ಎತ್ತು ಇದು’ ಎಂದು ರೈತ ಅಶೋಕ ಗಾಮನಗಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಾಮನನ್ನು ನಾವು ಕೇವಲ ಒಂದು ಎತ್ತು ಆಗಿ ನೋಡದೆ, ಕುಟುಂಬದ ಸದಸ್ಯನನ್ನಾಗಿ ಕಾಣುತ್ತೇವೆ. ಆತನಿಗೆ ಹುಷಾರು ತಪ್ಪಿದಾಗ ತಕ್ಷಣವೇ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿ, ಆತನ ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇವೆ. ಮನೆಯಲ್ಲಿ ಬೇರೆ ಎತ್ತುಗಳಿದ್ದರೂ, ಹಿರಿಕನಾದ ರಾಮನೆಂದರೆ ನಮಗೆಲ್ಲಾ ಪ್ರಾಣ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 29

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !