ಬುಧವಾರ, ಆಗಸ್ಟ್ 21, 2019
24 °C

ಧಾರವಾಡ ಜಿಲ್ಲೆಯಲ್ಲಿ ಮಳೆ ತಂದ ನೋವಿನ ಕಥೆ...

Published:
Updated:
Prajavani

ಇತ್ತೀಚೆಗಷ್ಟೇ ಮಗಳ ಮದುವೆ ಮಾಡಿರುವ ಹುಬ್ಬಳ್ಳಿಯ ಎಸ್‌.ಎಂ.ಕೃಷ್ಣ ನಗರದ ಫರೀದಾ ಅವರು, ಮಗಳ ಮನೆಗೆ ಕೊಡಬೇಕಿದ್ದ ಹಾಸಿಗೆ, ಬಟ್ಟೆ ಮತ್ತು ಅಡುಗೆ ಸಾಮಗ್ರಿಗಳನ್ನು ತಮ್ಮ ಮನೆಯಲ್ಲಿ ಜೋಪಾನವಾಗಿ ಎತ್ತಿಟ್ಟಿದ್ದರು. ಒಂದೆರೆಡು ದಿನಗಳಲ್ಲಿ ಅವುಗಳನ್ನು ಬೀಗರ ಮನೆಗೆ ಕಳುಹಿಸುವ ಯೋಚನೆಯಲ್ಲಿದ್ದರು. ಆದರೆ, ರಾತ್ರೋ ರಾತ್ರಿ ಭೋರ್ಗೆರೆದು ಬಂದ ಕರ್ಕಿಹಳ್ಳದ ನೀರಿನಲ್ಲಿ ಆ ಸಾಮಾನುಗಳೆಲ್ಲವೂ ಕೊಚ್ಚಿ ಹೋಗಿವೆ.

ಮೂರು ವರ್ಷಗಳಿಂದ ಕಾಳುಗಳ ವ್ಯಾಪಾರ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದ ಅದೇ ಕಾಲೊನಿಯ ನೂರ್‌ ಅಹ್ಮದ್‌ ಹಾಗೂ ಶಹನಾಜ್‌ ದಂಪತಿಯ ಬದುಕಿನ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಗುಬ್ಬಚ್ಚಿ ಗೂಡಿನಂತ ಮನೆಯಲ್ಲಿ 12 ಚೀಲಗಳಲ್ಲಿ ಕಡ್ಲೆಕಾಳು, ಹುರಳಿಕಾಳು, ಬಟಾಣೆ, ಹೆಸರು ಕಾಳುಗಳನ್ನು ಸಂಗ್ರಹಿಸಿಟ್ಟಿದ್ದರು. ಶರವೇಗದಲ್ಲಿ ನುಗ್ಗಿ ಬಂದ ಮಳೆ ನೀರಿನ ಅಬ್ಬರದಲ್ಲಿ ಕಾಳುಗಳೆಲ್ಲವೂ ದಿಕ್ಕಾಪಾಲಾದವು.

ಇದು ಒಂದಿಬ್ಬರ ಬದುಕಿನ ಕಥೆಯಷ್ಟೇ ಅಲ್ಲ; ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬದುಕು ಮೂರಾಬಟ್ಟೆಯಾಗಿದೆ. ನಿತ್ಯ ಬೆಳಗಾದರೆ ಸಾಕು ‘ಈ ಮಳೆ ನಿಲ್ಲುವಂತೆ ಮಾಡು ಭಗವಂತ’ ಎಂದು ಪ್ರಾರ್ಥಿಸುವಂತಾಗಿದೆ.

ಉಣಕಲ್‌ ಕೆರೆ ಕೋಡಿ ಬಿದ್ದ ನೀರು, ಕರ್ಕಿಹಳ್ಳದ ನೀರು ಮತ್ತು ಹಳೇ ಹುಬ್ಬಳ್ಳಿ ಭಾಗದಿಂದ ಬರುವ ಚರಂಡಿಯ ನೀರು ಪುಣೆ–ಬೆಂಗಳೂರು ಹೆದ್ದಾರಿ ಭಾಗದಲ್ಲಿ ಸೇರುತ್ತದೆ. ಇದರ ಹಿಂಭಾಗದಲ್ಲಿರುವ ಎಸ್‌.ಎಂ.ಕೃಷ್ಣ ನಗರದಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಉಣಕಲ್‌ ಕೆರೆ ನೀರು ಲಿಂಗರಾಜ ನಗರ, ದೇವಿ ನಗರ, ಹೊಸೂರು, ಭಾರತ್‌ ಮಿಲ್‌, ಚನ್ನಪೇಟೆ, ಇಸ್ಲಾಂಪುರ ಬ್ರಿಡ್ಜ್‌ (ಇಂದ್ರಾನಗರ), ಹಳೇ ಗಬ್ಬೂರು ಮಾರ್ಗವಾಗಿ ಕರ್ಕಿಹಳ್ಳಕ್ಕೆ ಸೇರುತ್ತದೆ. ಈ ಮೂರು ದಿಕ್ಕಿನಿಂದ ಬರುವ ನೀರಿನಿಂದ ಎಸ್‌.ಎಂ.ಕೃಷ್ಣನಗರ ಪ್ರತಿ ಸಣ್ಣಮಳೆಗೂ ಪ್ರವಾಹ ಪೀಡಿತ ಪ್ರದೇಶದಂತಾಗುತ್ತದೆ.

ತೊರವಿ ಹಕ್ಕಲ, ಗೌಸಿಯಾ ನಗರ, ಸೋನಿಯಾ ಗಾಂಧಿ ನಗರ, ಪ್ರಧಾನ ಹಕ್ಕಲ, ಬುಲ್ಡೋಜರ ನಗರ, ಬನಶಂಕರಿ ಬಡಾವಣೆ, ದೇವಿ ನಗರ, ಕರೀಂ ಲಾಲ್‌ ಬಡಾವಣೆಗಳಲ್ಲಿಯೂ ಇದೇ ಪರಿಸ್ಥಿತಿ. ಅಲ್ಲಿನ ಮನೆಗಳಲ್ಲಿದ್ದ ಅಕ್ಕಿ, ಗೋಧಿ, ಕಾಯಿಪಲ್ಲೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಈ ಪ್ರದೇಶಗಳಿಗೆ ಭೇಟಿ ನೀಡಿದ ಎಂಥವರ ಮನ ಕರಗದೇ ಇರದು. ನಾಲ್ಕೈದು ಅಡಿವರೆಗೆ ಮನೆ ಹೊಕ್ಕ ನೀರನ್ನು ಹೊರಹಾಕಲು ರಾತ್ರಿಪೂರ್ತಿ ಜಾಗರಣೆ ಮಾಡಿದ್ದಾರೆ. ಗುರುವಾರ ಸಂಜೆಯಾದರೂ ಮನೆ ಸ್ವಚ್ಛ ಮಾಡುವ ಕೆಲಸ ಮುಗಿದಿರಲಿಲ್ಲ.

ಕರ್ಕಿಹಳ್ಳದಿಂದ ನೂರು ಮೀಟರ್‌ ದೂರದಲ್ಲಿರುವ ಫರೀದಾ ಅವರ ಮನೆಯಲ್ಲಿ ಟಾಕಿಯಲ್ಲಿ ತುಂಬಿ ಮಂಚದ ಮೇಲೆ ಎತ್ತಿಟ್ಟಿದ್ದ ಅಕ್ಕಿ ನೀರು ಪಾಲಾಗಿದೆ.

ಗೌಸಿಯಾ ನಗರದ ಕೊನೆಯ ಭಾಗದ ಸಮೀರ್‌ ಅಹ್ಮದ್‌ ಅವರ ತಗಡಿನ ಮನೆಯೊಳಗಿನ ನೆಲದಿಂದ ನೀರು ಪುಟಿದೇಳುತ್ತಿದೆ. ಇದರ ಅಬ್ಬರಕ್ಕೆ ದಿನಸಿಗಳು ನೀರು ಪಾಲಾಗಿವೆ. ನೆಲದ ಹಾಸು ಕೂಡ ಕಿತ್ತು ಕಿತ್ತು ಹೋಗಿದೆ.

‘ಬುಧವಾರ ಮಧ್ಯರಾತ್ರಿಯಿಂದ ಈ ತನಕ (ಗುರುವಾರ ಸಂಜೆ ತನಕ) ನಿದ್ದೆ ಮಾಡಿಲ್ಲ. ಏನೂ ತಿಂದಿಲ್ಲ. ಜಿಲ್ಲಾಡಳಿತ ಹಾಗೂ ಅಂಜುಮನ್‌ ಸಮಿತಿಯವರು ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ, ಮನೆ ಸೇರಿದ ನೀರು ಹೊರ ಹಾಕಲು ಸಾಧ್ಯವಾಗುತ್ತಿಲ್ಲ; ಇನ್ನು ಊಟದ ಬಗ್ಗೆ ಯೋಚಿಸುವುದಾದರೂ ಹೇಗೆ’ ಎಂಬುದು ಅವರ ಪ್ರಶ್ನೆ.

ಲಿಂಗರಾಜನಗರದ ದೇವಿನಗರ ಬಡಾವಣೆ ಕಥೆಯೂ ಇದಕ್ಕಿಂತ ಹೊರತಾಗಿರಲಿಲ್ಲ. ರಾಜ ಕಾಲುವೆ ಮೂಲಕ ಹರಿದು ಬಂದ ನೀರು ಅಲ್ಲಿದ್ದ ಸುಮಾರು ಐವತ್ತು ಮನೆಯೊಳಗೆ ನುಗ್ಗಿತ್ತು. ಮನೆಯೊಳಗಿದ್ದ ಚಾಪೆ, ಬಟ್ಟೆ, ದಿನಸಿಗಳೆಲ್ಲ ನೀರು ಪಾಲಾಗಿದ್ದವು.

‘ಇಲ್ಲಿ ಬಂದು ಹತ್ತು ವರ್ಷವಾಗಿವೆ. ಒಂದು ಬಾರಿಯೂ ಹೀಗೆ ನೀರು ನುಗ್ಗಿದ್ದು ನೋಡಿಲ್ಲ. ರಾತ್ರಿ ಏಕಾಏಕಿ ನೀರು ಬಂದು ಬದುಕನ್ನೇ ಹಾಳು ಮಾಡಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಬ್ರಿಡ್ಜ್‌ನಿಂದಾಗಿಯೇ ಮನೆಯೊಳಗೆ ಕಾಲುವೆ ನೀರು ನುಗ್ಗುವಂತಾಗಿತ್ತು’ ಎಂದು ಗೀತಾ ಕಟಾವಕರ್‌ ಹೇಳಿದರು.

ಯಾಸ್ಮೀನ್‌ ಬಾನು ಅವರಿಗೆ ಮಳೆ ನೀರಿನಲ್ಲಿ ತಮ್ಮ ಮನೆ ಸಾಮಗ್ರಿಗಳು ಕೊಚ್ಚಿ ಹೋದ ಬಗ್ಗೆ ಹೆಚ್ಚು ಚಿಂತೆಯಿಲ್ಲ. ಅವರಿಗೆ ತಮ್ಮ ಮಕ್ಕಳ ಪುಸ್ತಕ, ನೋಟ್‌ಬುಕ್‌ ಮತ್ತು ಸ್ಕೂಲ್‌ ಬ್ಯಾಗ್‌ ನೀರು ಪಾಲಾಗಿದ್ದಕ್ಕೆ ಅತೀವ ಬೇಸರವಿದೆ.


ಹಳೆ ಹುಬ್ಬಳ್ಳಿಯ ಸತತವಾಗಿ ಮಳೆ ಸುರಿಯುತ್ತಿದು ಗುರುವಾರ ಪಂಡುರಂಗ ಕಾಲೋನಿಯಲ್ಲಿ ಮಳೆಗೆ ಮನೆಗಳು ಜಲವೃತಗೊಂಡಿದು ಜನರ ಜೀವನ ಅಸ್ಥವ್ಯಸವಾಗಿದೆ ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

 

Post Comments (+)