ಭಾನುವಾರ, ಮಾರ್ಚ್ 29, 2020
19 °C

ನೆನಪಿನಂಗಳದಿಂದ ‘ಪ್ರಪಂಚ ತೊರೆದ ಪಾಪು’

ಸಂಧ್ಯಾರಾಣಿ ಎಚ್‌.ಎಂ. Updated:

ಅಕ್ಷರ ಗಾತ್ರ : | |

prajavani

‘ಪಾಪು ಪ್ರಪಂಚ’ವನ್ನು ತೊರೆದಾಗಿದೆ. ಕನ್ನಡದ ಅಸ್ಮಿತೆಗಾಗಿ ಹೋರಾಡಿದ ಜೀವವೊಂದು ಏಲಕ್ಕಿಯ ನಾಡು ಹಾವೇರಿಯ ಜಿಲ್ಲೆಯಲ್ಲಿ ಶಾಶ್ವತ ನೆಲೆಕಂಡುಕೊಂಡಿದೆ. ಕನ್ನಡದ ಪಾಪು ಹುಬ್ಬಳ್ಳಿಯಲ್ಲೇ ಜೀವನ ಮಾಡಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ತೆರೆಯಲು ಶ್ರಮಿಸಿದವರಲ್ಲಿ ಪುಟ್ಟಪ್ಪ ಮುಂಚೂಣಿಯಲ್ಲಿದ್ದರು. ಅದೇ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಗ ನನಗೆ, ಅವರನ್ನು ಭೇಟಿಯಾಗಲು ಸಿಕ್ಕ ಅವಕಾಶಗಳೆಲ್ಲ ನೆನಪಿನ ಕೋಶಕ್ಕೆ ಸದಾ ಹಸಿರು.

ನಮ್ಮ ವಿಭಾಗಕ್ಕೆ ದತ್ತಿ ಉಪನ್ಯಾಸಕ್ಕೆ ಮುಖ್ಯ ಅತಿಥಿಯಾಗಿ ಪುಟ್ಟಪ್ಪ ಅವರನ್ನು ಆಹ್ವಾನಿಸಿದಾಗ ಅವರ ಆಗಮನ ವೀಲ್‌ಚೇರ್‌ನಲ್ಲಿಯೇ ಆಗಿತ್ತು. ಅಜ್ಜನ ಮಾತು, ಗತ್ತು 95ರ ವಯಸ್ಸಿನಲ್ಲೂ ಹಾಗೇ ಇತ್ತು. ತಾವು ನಡೆದ ಪತ್ರಿಕೋದ್ಯಮದ ಹಾದಿಯನ್ನು ವಿವರಿಸ ತೊಡಗಿದಾಗ ನಮಗಾದ ಅನುಭವವೇ ಬೇರೆ. ಪತ್ರಿಕೋದ್ಯಮದಲ್ಲಿ ವಿಷಯವಾರು ನಡೆಯುವ ಪಾಠ, ಪ್ರವಚನವೇ ಬೇರೆ. ಮಾಧ್ಯಮದಲ್ಲಿರುವ ವಾಸ್ತವ ಪರಿಸ್ಥಿತಿಯೇ ಬೇರೆ. ಇದರ ಅರಿವನ್ನು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಪ್ರಯತ್ನವನ್ನು ಪುಟ್ಟಜ್ಜ ಮಾಡಿದ್ದರು.

1946ರಲ್ಲಿ ದಾವಣಗೆರೆಯಲ್ಲಿ ಅಖಿಲ ಕನ್ನಡಿಗರ ಮಹಾ ಅಧಿವೇಶನ ನಡೆಯಿತು. ಅದಕ್ಕೆ ಪ್ರೇರಕ ಶಕ್ತಿ ಎಸ್. ನಿಜಲಿಂಗಪ್ಪನವರಾಗಿದ್ದರು. ಆಗ ಪಾಪು ಸಮಾವೇಶದ ಕಾರ್ಯದರ್ಶಿಯಾಗಿದ್ದರು. ಆ ಅಧಿವೇಶನದಲ್ಲಿ ‘ಕನ್ನಡದ್ದಲ್ಲದ ಒಂದು ಅಂಗುಲ ನೆಲವೂ ಬೇಡ, ಕನ್ನಡದ್ದಾದ ಒಂದಂಗುಲ ನೆಲವನ್ನೂ ನಾವು ಬಿಡುವುದಿಲ್ಲ’ ಎಂದು ವಾಗ್ದಾನ ಮಾಡಿದ ನೆನಪನ್ನು ಅವರ ಮಾತುಗಳಲ್ಲೇ ಕೇಳಿದಾಗ ಕನ್ನಡದ ಬಗೆಯಿದ್ದ ಅವರ ಅಗಾಧ ಪ್ರೀತಿ ತಿಳಿಯಿತು.

ಪತ್ರಿಕೆಯಲ್ಲಿ ಆಗಿನ್ನೂ ಕೆಲಸಕ್ಕೆ ಸೇರಿದ ದಿನಗಳಲ್ಲಿ ವಾಟಾಳ್‌ ನಾಗರಾಜ್‌, ಪಾಪು ಅವರ ಮನೆಗೆ ಬರುವ ಸುದ್ದಿಯ ವರದಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ವಾಟಾಳ್‌ ನಾಗರಾಜ್ ಬರುವುದು ಸ್ವಲ್ಪ ತಡವಾದಾಗ, ಪುಟ್ಟಜ್ಜ ತಮ್ಮ ಮನೆಯ ಒಳಗೆ ವರದಿ ಮಾಡಲು ಬಂದವರಿಗೆ ಕುಳಿತುಕೊಳ್ಳುವಂತೆ ಅವರ ಸಹಾಯಕ ಬಳಿ ಹೇಳಿ ಕಳುಹಿಸಿದರು. ನಂತಹ ವಾಟಾಳ್‌ ಬಂದು ಕುಶಲೋಪರಿ ನಡೆಸಿ, ‘ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳಿದರು. ‘ನೀವು ಹೇಳದಿದ್ದರೂ ನಾನು ನನ್ನ ಆರೋಗ್ಯ ನೋಡಿಕೊಳ್ಳತ್ತೇನೆ’ ಎಂದಾಗ ಅದನ್ನು ನೋಡುತ್ತಿದ್ದ ನಮಗೆ ನಗುವ ಸಂದರ್ಭ ಎದುರಾಯಿತು. ಪುಟ್ಟಜ್ಜ ವರ ನೇರಾನೇರ ಮಾತಿಗೆ ವಾಟಾಳ್‌ ನಾಗರಾಜ್ ಸಾವರಿಸಿಕೊಂಡು ‘ನಿಮ್ಮ ವಯಸ್ಸು ಹಿರಿದು ಎಂದು ಹೇಳಿದೆ’ ಎಂದು ಹೇಳಿದರು. ಇದು ಅವರಿಬ್ಬರಲ್ಲಿ ಯಾರನ್ನೇ ನೋಡಿದರೂ ನನಗೆ ತಕ್ಷಣ ನೆನಪಾಗುತ್ತದೆ.

ಪುಟ್ಟಜ್ಜ ಮತ್ತೊಮ್ಮೆ ತುಂಬಾ ಆಪ್ತ ಎನಿಸಿದ್ದು, ಅವರ ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದಿಂದ ಪ್ರಕಟಿಸಲಾದ ‘ಸೋವಿಯತ್‌ ದೇಶ ಕಂಡೆ’ ಪುಸ್ತಕ ಓದಿದ ಮೇಲೆ. ರಷ್ಯಾದ ಬಗ್ಗೆ ಅವರಿಗಿದ್ದ ತಪ್ಪು ಕಲ್ಪನೆಗಳನ್ನು ನಾನು ಅಂದುಕೊಂಡಿದ್ದು, ನಾನು ನೋಡಿದ್ದಕ್ಕಿಂತ ಭಿನ್ನವಾಗಿದೆ. ನಾನು ಸಮಾಜವಾದಿ ರಾಷ್ಟ್ರ ಒಂದನ್ನು ಅರಿತುಕೊಳ್ಳಲು ಈ ಪ್ರವಾಸ ಅನುಕೂಲವಾಯಿತು ಎಂದು ಅವರ ಅಂದುಕೊಂಡ ಅನಿಸಿಕೆಗಳನ್ನು ಒಂದಿನಿತೂ ಬದಲಾವಣೆ ಇಲ್ಲದೇ ಬರೆದುಕೊಂಡಿದ್ದು ಅಜ್ಜನ ಆಪ್ತತೆಯನ್ನು ಹೆಚ್ಚಿಸಲು ಕಾರಣವಾಯಿತು.

ಸೋವಿಯತ್‌ ದೇಶ ಕಂಡೆ ಪುಸ್ತಕದಲ್ಲಿ ರಷ್ಯಾದ ಮಹಿಳೆ ಒಬ್ಬರನ್ನು ಪುಟ್ಟಪ್ಪ, ಅಮೆರಿಕಾ, ರಷ್ಯಾದ ಜನರು ಸಂಕಷ್ಟದಲ್ಲಿದ್ದಾರೆ ಎಂದು ಹೇಳುತ್ತಾರಲ್ಲಾ ಎಂದು ಕೇಳುತ್ತಾರೆ. ಅದಕ್ಕೆ ರಷ್ಯಾ, ಅಮೆರಿಕಾದ ಜನರಿಗೆ ಬದುಕಲು ಯೋಗ್ಯವಾದ ದೇಶವಲ್ಲ. ಅದು ರಷ್ಯಾದವರಿಗೇ ಬದುಕಲು ಇರುವುದು. ಇಲ್ಲಿ ನಾವು ನಮಗಾಗಿ ಬದುಕುತ್ತೇವೆ. ಬೇರೆಯವರಿಗಾಗಿ ಅಲ್ಲ. ಇಲ್ಲಿ ಯಾರೂ ಬಡವರೂ ಇಲ್ಲ, ಶ್ರೀಮಂತರೂ ಇಲ್ಲ. ಇಲ್ಲಿ ನಾವೇ ಪ್ರಭುಗಳು ಎಂದ ಆ ಮಹಿಳೆಯ ಮಾತುಗಳನ್ನು ದಾಖಲಿಸಿದ್ದಾರೆ. ಇದರ ಅರ್ಥ ಪಾಪು ಅವರ ರಷ್ಯಾ ಭೇಟಿಗೂ ಮುನ್ನ, ಅವರ ಕಲ್ಪನೆಯಲ್ಲಿ ಸಮಾಜವಾದಿ ರಾಷ್ಟ್ರವೊಂದರ ಬಗೆಗೆ ತಪ್ಪು ಕಲ್ಪನೆಗಳನ್ನು ತುಂಬಿರಲಾಗಿತ್ತು. ಆದರೆ ಅವರ ಬರಹ ನನ್ನ ಕಲ್ಪನೆಗಳೇ ತಪ್ಪು ಎಂಬುದನ್ನು ಹೇಳುತ್ತವೆ ಎಂದು ನೇರವಾಗಿ ಬರೆದುಕೊಂಡಿದ್ದು ಇಷ್ಟವಾಗುತ್ತದೆ.

ಪುಟ್ಟಜ್ಜನ ಅದಮ್ಯ ಜೀವನ ಪ್ರೀತಿ, ಪುಸ್ತಕ, ಹೋರಾಟ, ಕನ್ನಡ ಸಾಹಿತ್ಯ, ವಿಮರ್ಶೆಗಳೇ ಅವರ ತುಂಬು ಜೀವನಕ್ಕೆ ಇಷ್ಟು ದಿನ ಸಾಕ್ಷಿಯಾಗಿದ್ದವು. ಕಳೆದ ವಾರ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಾದಾಗ ವರದಿಗಾರರೊಬ್ಬರ ಜತೆ ನೋಡಲು ಹೋದಾಗ, ಕೃತಕ ಉಸಿರಾಟದ ವ್ಯವಸ್ಥೆ ಇತ್ತು. ದೀರ್ಘ ದೃಷ್ಟಿಯಲ್ಲಿ ಅಜ್ಜನನ್ನು ನೋಡಲಾಗದಿದ್ದರೂ ಅಷ್ಟು ಹಿರಿಜೀವವೊಂದನ್ನು ನೋಡಿದ ತೃಪ್ತಭಾವ ನನಗಿತ್ತು. ರಕ್ತ ಸಂಬಂಧಗಳಾಚೆಗೆ ಅವರ ಕಾರ್‌ ಡ್ರೈವರ್‌ ಸೈಯದ್‌ ಅವರ ಕಣ್ಣಂಚಿನ ನೀರು ಅಜ್ಜನ ಇಲ್ಲದಿರುವಿಕೆಯನ್ನು ಸಾರುತ್ತಿತ್ತು. ಪುಟ್ಟಜ್ಜ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ಅವರು ಬರೆಯದ ಸಾಹಿತ್ಯ ಪ್ರಕಾರಗಳು ಇಲ್ಲ. ಅವರ ನುಡಿಯ ಸೇವೆಗೆ ನಾವೆಲ್ಲಾ ಕೈ ಮುಗಿಯಲೇಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು