ಶುಕ್ರವಾರ, ಏಪ್ರಿಲ್ 3, 2020
19 °C

ಖಾದಿ ಬಟ್ಟೆಯಲ್ಲ, ಅದೊಂದು ಶಕ್ತಿ

ನಾಗರಾಜ ಬಿ.ಎನ್. Updated:

ಅಕ್ಷರ ಗಾತ್ರ : | |

prajavani

ಖಾದಿ ಕೇವಲ ಬಟ್ಟೆಯಾಗಿರದೆ ಅದೊಂದು ದೇಶದ ಶಕ್ತಿ. ಖಾದಿ ಬಟ್ಟೆ ಧರಿಸುವ ಮೂಲಕ ಗ್ರಾಮೀಣ ಭಾಗದ ಜನರ ಬದುಕು ಹಸನು ಮಾಡಬೇಕು ಎಂದು ಹೇಳುತ್ತಿದ್ದ ಪಾಟೀಲ ಪುಟ್ಟಪ್ಪ ಈಗ ನೆನಪು ಮಾತ್ರ. ಆದರೆ, ನಗರದ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಅವರು ಸದಾ ಜೀವಂತ.

ಪುಟ್ಟಪ್ಪ ಅವರು, ನೂಲು ಹೆಣೆದು ಖಾದಿ ಬಟ್ಟೆ ತಯಾರಿಸುವ ಬಡ ಕುಟುಂಬ ವರ್ಗದ ಕಣ್ಮಣಿಯಾಗಿದ್ದರು. ಖಾದಿ ಗ್ರಾಮೋದ್ಯೋಗ ಮತ್ತು ಅಲ್ಲಿಯ ನೇಕಾರ ವರ್ಗದವರ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದರು. ಖಾದಿ ಸಂಘ–ಸಂಸ್ಥೆಗಳಿಗೆ ಸರ್ಕಾರದಿಂದ ಬರಬೇಕಾದ ಬಾಕಿ ಹಣ ಪಡೆಯಲು, ತಾವೇ ಖುದ್ದಾಗಿ ಮುಖ್ಯಮಂತ್ರಿ, ಸಚಿವರನ್ನು ಭೇಟಿಯಾಗುತ್ತಿದ್ದರು. ಪತ್ರ ಬರೆದು, ಹಣ ಬಿಡುಗಡೆಗೆ ಒತ್ತಾಯಿಸುತ್ತಿದ್ದರು. ಅಭಿವೃದ್ಧಿಯ ಬೆನ್ನೆಲುಬಾಗಿದ್ದ ಪಾಪು ಅವರನ್ನು ಕಳೆದುಕೊಂಡಿರುವ ಸಂಘ ಅಕ್ಷರಶಃ ಅನಾಥವಾಗಿದೆ.

‘ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರಧ್ವಜ ತಯಾರಿಸುವ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹1 ಕೋಟಿ ಅನುದಾನ ದೊರಕಿಸಿಕೊಟ್ಟಿದ್ದರು. 2016ರಿಂದ ಇಲ್ಲಿವರೆಗೆ ಸಂಘದ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ವಾರಕ್ಕೆ ಎರಡು ಬಾರಿ ಬಂದು, ಭೇಟಿ ನೀಡಿ ಅಭಿವೃದ್ಧಿ ಕುರಿತು ಚರ್ಚಿಸುತ್ತಿದ್ದರು. ಏನಾದರೂ ಸಮಸ್ಯೆಯಿದೆ ಎಂದರೆ, ಚಿಕ್ಕ ಮಗು ಬಂದ ಹಾಗೆ ಬರುತ್ತಿದ್ದರು. ಖಾದಿ ಹೊರತು ಬೇರೇನೂ ಚರ್ಚಿಸುತ್ತಿರಲಿಲ್ಲ’ ಎಂದು ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ ಅವರ ಖಾದಿ ಪ್ರೇಮಿದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.

‘1992ರಲ್ಲಿ ನೂಲು ನೇಯುವವರಿಗೆ ಒಂದು ಲಡಿಗೆ 10 ಪೈಸೆ, ಒಂದು ಮೀಟರ್‌ ಬಟ್ಟೆಗೆ 25 ಪೈಸೆ ನೀಡಲಾಗುತ್ತಿತ್ತು. ಅದರಿಂದ ಜೀವನ ನಿರ್ವಹಣೆ ಕಷ್ಟವೆಂದು ಅರಿತ ಪುಟ್ಟಪ್ಪನವರು, ಖಾದಿ ಸಲಹಾ ಸಮಿತಿ ರಚನೆ ಮಾಡಿಕೊಂಡು ಅನುದಾನ ಹೆಚ್ಚಿಸಲು ಒತ್ತಾಯಿಸಿದ್ದರು. ಅಂದಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಜೊತೆ ಚರ್ಚಿಸಿ, ಒಂದು ಲಡಿಗೆ 70 ಪೈಸೆ ಹಾಗೂ ಒಂದು ಮೀಟರ್‌ ಬಟ್ಟೆಗೆ ₹1 ಹೆಚ್ಚಿಸುವಲ್ಲಿ ಯಶಸ್ವಿಯಾದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಒಂದು ಲಡಿಗೆ ₹3 ಹಾಗೂ ಒಂದು ಮೀಟರ್‌ ಬಟ್ಟೆಗೆ ₹7 ಹೆಚ್ಚಿಗೆ ಮಾಡಿಸಿದರು. ಅದರಿಂದಾಗಿ ನೇಕಾರಿಕೆ ನಂಬಿ ಬದುಕುವ ಕುಟುಂಬ ತುಸು ನಿಟ್ಟುಸಿರು ಬಿಡುವ ಹಾಗಾಯಿತು’ ಎಂದು ಪುಟ್ಟಪ್ಪರ ಕಾರ್ಯದ ಬಗ್ಗೆ ತಿಳಿಸಿದರು.

ಪಾಟೀಲ ಪುಟ್ಟಪ್ಪ, ಕಿಮ್ಸ್‌ಗೆ ದಾಖಲಾಗುವ ಒಂದು ವಾರದ ಮೊದಲು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿ ಜೊತೆ ಚರ್ಚಿಸಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ, ಕಷ್ಟ ಸುಖ ವಿಚಾರಿಸಿಕೊಂಡು ಬಂದಿದ್ದರು. ರಾಷ್ಟ್ರಧ್ವಜ ತಯಾರಿಸುವುದನ್ನು ನರೇಗಾ ಯೋಜನೆಗೆ ಸೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದರು. 2016ರಿಂದ ಖಾದಿ ಗ್ರಾಮೋದ್ಯೋಗದ 152 ಸಂಘ–ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡಿಸಲು, ಹೋರಾಟ ನಡೆಸಲು ನಿರ್ಧರಿಸಿದ್ದರು. ಆದರೆ, ಈಗ ಹೋರಾಟದ ಶಕ್ತಿಯೇ ಇಲ್ಲವಾಗಿದ್ದು, ಖಾದಿ ಕೇಂದ್ರಕ್ಕೆ ಹೆಡೆಮುರಿ ಕಟ್ಟಿದಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು