ಭಾನುವಾರ, ಏಪ್ರಿಲ್ 2, 2023
32 °C

ಹುಬ್ಬಳ್ಳಿಯಲ್ಲಿ ನರೇಂದ್ರ ಮೋದಿ‌ ರೋಡ್ ಶೋ: ಹರ ಹರ ಮೋದಿ, ಜಯ ಜಯ ಮೋದಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು 26ನೇ ರಾಷ್ಟ್ರೀಯ ಯುವ ಜನೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, 8 ಕಿ.ಮೀ ಉದ್ದದ ರೋಡ್‌ಷೋನಲ್ಲಿ ಪಾಲ್ಗೊಂಡರು. ಗುರುವಾರ ಸಂಜೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೂ ರಸ್ತೆಯ ಎರಡೂ ಬದಿಯಲ್ಲಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸುತ್ತ ಬಂದ ಮೋದಿ ಅವರು ವೇದಿಕೆಗೆ ತಲುಪುವಾಗ ನಿಗದಿತ ಸಮಯಕ್ಕಿಂತ ಒಂದೂ ಕಾಲು ಗಂಟೆ ವಿಳಂಬವಾಯಿತು.

‘ಹರ ಹರ ಮೋದಿ, ಮೋದಿಗೆ ಜಯವಾಗಲಿ, ಜಯ ಜಯ ಮೋದಿ‘  ಎಂದು ಜಯಕಾರ ಹಾಕುತ್ತ ರಸ್ತೆಯ ಇಕ್ಕೆಲಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. 

ವಿಮಾನ ನಿಲ್ದಾಣದಿಂದ ವೇದಿಕೆವರೆಗೂ ರಸ್ತೆಯ ಮೇಲೆ ರಂಗೋಲಿ ಹಾಕಿದ್ದರು. ಜನರು ಪುಷ್ಪವೃಷ್ಟಿಗರೆದರು. ಮಹಿಳೆಯರು ದೂರದಿಂದಲೇ ಆರತಿ ಬೆಳಗಿದರು.  

ಕಣ್ಣು ಹಾಯಿಸಿದೆಡೆಯೆಲ್ಲ ಬಿಜೆಪಿ ಧ್ವಜಗಳು ರಾರಾಜಿಸುತ್ತಿದ್ದವು, ರಸ್ತೆಯ ನಡುವಿನ ದೀಪದ ಸ್ತಂಭಗಳಿಗೆ ಕೇಸರಿ ವಸ್ತ್ರವನ್ನು ಕಟ್ಟಿದ್ದರು. ನೆರೆದ ಜನರೆಲ್ಲ ಕೇಸರಿ ಬಣ್ಣದ ಸ್ಕಾರ್ಫ್‌ ಸುತ್ತಿಕೊಂಡು, ಎಲ್ಲೆಡೆಯೂ ಕೇಸರಿಮಯ ವಾತಾವರಣ ಸೃಷ್ಟಿಯಾಗಿತ್ತು. ಮೋದಿ ಅಭಿಮಾನದ ಬಣ್ಣದಲ್ಲಿ ಹುಬ್ಬಳ್ಳಿಯು ಮಿಂದೆದ್ದಂತೆ ಭಾಸವಾಗುತ್ತಿತ್ತು.

ನರೇಂದ್ರ ಮೋದಿ ಅವರಿದ್ದ ವಿಮಾನ ಮಧ್ಯಾಹ್ನ 3.20ಕ್ಕೆ ಹುಬ್ಬಳ್ಳಿಗೆ ಬಂದಿತು. ವಿಮಾನ ನಿಲ್ದಾಣದಿಂದ ತಮ್ಮ ವಾಹನದಲ್ಲಿಯೇ ಚಾಲಕರ ಬದಿಯ ಮುಂದಿನ ಸಾಲಿನಲ್ಲಿ ನಿಂತು ಪ್ರಧಾನಿ ಜನರತ್ತ ಕೈ ಬೀಸಿದರು.  

ಮೋದಿ ಅವರು ವೇದಿಕೆಗೆ ಆಗಮಿಸಿದಾಗ ಜನರು ಹೆಚ್ಚಾಗಿ ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸುವುದರಲ್ಲಿ ಮುಳುಗಿದ್ದರು.  

ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ ಕಾಲೇಜಿನ ವಿದ್ಯಾರ್ಥಿಗಳು ಬೆಳಗ್ಗೆ ಹತ್ತೂವರೆಯಿಂದಲೇ ರೈಲ್ವೆ ಮೈದಾನಕ್ಕೆ ಬಂದು ಕುಳಿತಿದ್ದರು.

ಪ್ರಧಾನಿ ಮೋದಿ ವೇದಿಕೆಗೆ ತಲುಪುವವರೆಗೂ ಇತರ ರಾಜ್ಯಗಳ ಪ್ರತಿನಿಧಿಗಳು ತಮ್ಮ ರಾಜ್ಯದ ನೃತ್ಯ ಪ್ರದರ್ಶಿಸಿದರು.

ವಿವೇಕಾನಂದ ಚಿತ್ರವೇ ಇರಲಿಲ್ಲ!
ಉದ್ಘಾಟನಾ ಸಮಾರಂಭದ ವೇದಿಕೆಯಿಂದ ಆರಂಭಿಸಿ, ಸಾಂಸ್ಕೃತಿಕ ಹಾಗೂ ಇತರ ಸಮಾರಂಭಗಳನ್ನು ಆಯೋಜಿಸಿರುವ ವೇದಿಕೆಯ ಮೇಲೆ ಇರುವ ಬ್ಯಾಕ್‌ಡ್ರಾಪ್‌ಗಳಲ್ಲಿ ವಿವೇಕಾನಂದರ ಚಿತ್ರವೇ ಇರಲಿಲ್ಲ. ಹಿನ್ನೆಲೆ ಪರದೆಗಳ ಮೇಲೆಲ್ಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರಗಳೇ ರಾರಾಜಿಸುತ್ತಿವೆ. ಪ್ರಚಾರಕ್ಕೆ ಬಳಸಿರುವ ಫ್ಲೆಕ್ಸ್‌ಗಳಲ್ಲಿಯೂ ರಾಜಕೀಯ ನಾಯಕರೇ ರಾರಾಜಿಸುತ್ತಿದ್ದಾರೆ.

ಹಾರ ಹಾಕಲು ಯತ್ನಿಸಿದ ಬಾಲಕ
ಮೋದಿ ಅವರ ರೋಡ್‌ ಷೋ ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೊ ಬಳಿ ಬಂದಾಗ, ಬಾಲಕನೊಬ್ಬ ಬ್ಯಾರಿಕೇಡ್‌ ಹಾರಿ ರಸ್ತೆಗೆ ಬಂದ. ಬಂದೋಬಸ್ತ್‌ನಲ್ಲಿದ್ದ ಸಂಚಾರ ಪೊಲೀಸರು ಮತ್ತು ಮೋದಿ ಅವರ ಭದ್ರತಾ ಸಿಬ್ಬಂದಿ ಅವರಿಂದ ನುಣುಚಿಕೊಂಡು, ಹಾರದೊಂದಿಗೆ ವಾಹನದತ್ತ ಜಿಗಿದ. ಮೋದಿ ಅವರು ಎಡಗೈನಿಂದ ಹಾರ ಪಡೆದು, ತಮ್ಮ ಸಿಬ್ಬಂದಿಗೆ ಕೊಡುತ್ತಿದ್ದಂತೆ, ಇತರ ಸಿಬ್ಬಂದಿ ಬಾಲಕನನ್ನು ಪಕ್ಕಕ್ಕೆ ತಳ್ಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು