ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಕ್ಸೊ: ಧಾರವಾಡ ಜಿಲ್ಲೆಯಲ್ಲಿ 8 ತಿಂಗಳಲ್ಲಿ 56 ಪ್ರಕರಣ

Published : 7 ಸೆಪ್ಟೆಂಬರ್ 2024, 7:55 IST
Last Updated : 7 ಸೆಪ್ಟೆಂಬರ್ 2024, 7:55 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಸಾಕಷ್ಟು ಜಾಗೃತಿ, ಕಠಿಣ ಕಾನೂನು ಮಧ್ಯೆಯೂ ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಲೇ ಇವೆ. ಜಿಲ್ಲೆಯಲ್ಲಿ ಕಳೆದ 8 ತಿಂಗಳಲ್ಲೇ 56 ಪ್ರಕರಣಗಳು ದಾಖಲಾಗಿವೆ.

ಕಳೆದ ಮೂರೂವರೆ ವರ್ಷಗಳಲ್ಲಿ ಒಟ್ಟು 186 ಪ್ರಕರಣಗಳು ದಾಖಲಾಗಿದ್ದು, ಈ ವರ್ಷವೇ ಅತ್ಯಧಿಕ ಪ್ರಕರಣಗಳು ಕಂಡುಬಂದಿದ್ದು ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮೀಣ ಭಾಗಗಳಿಗಿಂತ ಹುಬ್ಬಳ್ಳಿ– ಧಾರವಾಡ ಅವಳಿ ನಗರದಲ್ಲಿ ಹೆಚ್ಚು ಪ್ರಕರಣಗಳು ನಡೆದಿವೆ. ಅವಳಿನಗರ ವ್ಯಾಪ್ತಿಯಲ್ಲಿ ಕಳೆದ 8 ತಿಂಗಳಲ್ಲಿ 38 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 42, 2023ರಲ್ಲಿ 45 ಸೇರಿ ಕಳೆದ ಎರಡೂವರೆ ವರ್ಷಗಳಲ್ಲಿ ಈವರೆಗೆ 125 ಪೋಕ್ಸೊ ಪ್ರಕರಣಗಳು ವರದಿಯಾಗಿವೆ.

ಆಟವಾಡಿಸುವ ನೆಪದಲ್ಲಿ ಲಾರಿ ಚಾಲಕನಿಂದ ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಮದುವೆಯಾಗುವುದಾಗಿ ನಂಬಿಸಿ, ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿ ಕೃತ್ಯ, ಮೊಬೈಲ್‌ ಕೊಡಿಸುವುದಾಗಿ ಕರೆದೊಯ್ದು 17 ವರ್ಷದ ಬಾಲಕಿ ಮೇಲೆ ನಾಲ್ವರಿಂದ ಅತ್ಯಾಚಾರ, ಪಾಠ ಮಾಡುವ ನೆಪದಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ.. ಹೀಗೆ ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ದೌರ್ಜನ್ಯಕ್ಕೆ ಒಳಗಾದವರಲ್ಲಿ ಶಾಲಾ– ಕಾಲೇಜಿನ ಬಾಲಕಿಯರೇ ಹೆಚ್ಚಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಅಕ್ಕಪಕ್ಕದ ಮನೆಯವರು, ಸಂಬಂಧಿಕರು, ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯ ನಡೆದಿವೆ. ನಾನಾ ರೀತಿಯ ಆಸೆ, ಆಮಿಷಗಳನ್ನೊಡ್ಡಿ, ಪ್ರೀತಿ ಹೆಸರಿನಲ್ಲಿ ನಂಬಿಸಿ ಕೃತ್ಯವೆಸಗಿದ ಪ್ರಕರಣಗಳು ಕಂಡುಬಂದಿವೆ.

‘ಇಂದಿನ ದಿನಗಳಲ್ಲಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸುವುದಿಲ್ಲ. ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್ ಸಿಗುತ್ತಿದ್ದು, ಅದನ್ನು ಕೆಲವರು ದುರುಪಯೋಗ ಮಾಡಿಕೊಂಡು ಇಂಟರ್‌ನೆಟ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಲೈಂಗಿಕ ದೌರ್ಜನ್ಯ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡಬಾರದು. ಒಳ್ಳೆಯವರೊಂದಿಗೆ ಗೆಳೆತನ ಮಾಡಿಸಬೇಕು. ಈ ಮೂಲಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಹುದು’ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್.

‘ಪೋಕ್ಸೊ ಪ್ರಕರಣ ತಡೆಗಟ್ಟಲು ಇನ್ನಷ್ಟು ಬಿಗಿಯಾದ ಕಾನೂನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ದೌರ್ಜನ್ಯ ಎಸಗುವ ಆರೋಪಿಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆ ಆಗಬೇಕು. ಆದರೆ, ಹಲವು ಬಾರಿ ಸೂಕ್ತ ಸಾಕ್ಷ್ಯಾಧಾರ ಸಿಗುವುದಿಲ್ಲ. 2–3 ವರ್ಷವಾದರೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಲೇ ಇರುತ್ತವೆ. ಕೊನೆಗೆ ದೂರು ನೀಡಿದವರು ಹೊಂದಾಣಿಕೆಯಿಂದ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಕಾನೂನಾತ್ಮಕವಾಗಿ ಪೋಕ್ಸೊ ಗಂಭೀರ ಪ್ರಕರಣ. ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಪೋಕ್ಸೊ ಪ್ರಕರಣಗಳ ತಡೆಗೆ ಪೊಲೀಸರ ಜೊತೆಗೆ ಶಿಕ್ಷಣ ಇಲಾಖೆ ಪೋಷಕರ ಜವಾಬ್ದಾರಿಯೂ ಮುಖ್ಯವಾಗಿದೆ
-ಎನ್‌.ಶಶಿಕುಮಾರ್ ಹು–ಧಾ ಮಹಾನಗರ ಪೊಲೀಸ್ ಆಯುಕ್ತರು
ಮಕ್ಕಳು ದೌರ್ಜನ್ಯ ತೊಂದರೆ ಎದುರಾದರೆ 1098 ಸಹಾಯವಾಣಿ ಅಥವಾ 112ಗೆ ಕರೆ ಮಾಡಿ ರಕ್ಷಣೆ ಪಡೆಯಬಹುದು. ಯಾವಾಗಲೂ ಧೈರ್ಯವಾಗಿರಬೇಕು. ಸಮಸ್ಯೆಗಳನ್ನು ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು
- ನೀತಾ ವಾಡಕರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT