ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ, ಹಣಕ್ಕಿಂತ ಆತ್ಮವಿಶ್ವಾಸ ದೊಡ್ಡದು: ಸಾಧಕರಿಗೆ ಸ್ಫೂರ್ತಿ ತುಂಬಿದ ಸುಧಾಮೂರ್ತಿ

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪದವಿಪ್ರದಾನ
Last Updated 31 ಆಗಸ್ಟ್ 2019, 13:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನೀವು ಪಡೆಯುವ ಪದವಿ, ಗಳಿಸುವ ಹಣಕ್ಕಿಂತ ಆತ್ಮವಿಶ್ವಾಸ ದೊಡ್ಡದು. ಸಾವಿರ ಜನ ನಿಮ್ಮ ವಿರುದ್ಧ ಕೈ ತೋರಿಸಿದರೂ; ನಿಮ್ಮ ನಂಬಿಕೆ ಸದಾ ಗಟ್ಟಿಯಾಗಿದ್ದರೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ’ ಎಂದು ಇನ್ಫೋಸಿಸ್‌ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು.

ನಗರದ ಬಿ.ವಿ.ಬಿ. ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ನೀವು ಗಳಿಸುವ ಅಂಕಗಳಿಗೂ, ಸಂಪಾದಿಸುವ ಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪದಕ ಪಡೆದವರ ಸಾಧನೆ ಕೂಡ ಚೆಂದವೇ. ಆದರೆ, ಇದಕ್ಕಿಂತ ಜ್ಞಾನ ಮಿಗಿಲಾದದ್ದು. ಆದ್ದರಿಂದ ಸಾಧನೆ ಮಾಡಲು ಬಯಸುವವರು ಮೊದಲು ಪುಸ್ತಕಗಳನ್ನು ತಮ್ಮ ಸಂಗಾತಿಗಳನ್ನಾಗಿ ಮಾಡಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಜೀವನದಲ್ಲಿ ಅನುಭವ ಕಲಿಸುವ ಪಾಠವನ್ನು ಬೇರೆ ಯಾರೂ ಕಲಿಸುವುದಿಲ್ಲ. ಟೆನಿಸ್‌ ಆಟದೊಂದಿಗೆ ಜೀವನವನ್ನು ಒಮ್ಮೆ ಹೋಲಿಸಿಕೊಂಡು ನೋಡಿ; ವಿಂಬಲ್ಡನ್‌ನಂಥ ಟೂರ್ನಿಯಲ್ಲಿ ಒಮ್ಮೆ ಹಿಡಿತದಲ್ಲಿರುವ ಚೆಂಡು, ಕೆಲವೇ ಕ್ಷಣಗಳಲ್ಲಿ ಎದುರಾಳಿ ಆಟಗಾರನ ತೆಕ್ಕೆಗೆ ಸೇರುತ್ತದೆ. ಮತ್ತೆ ಓಡಾಡುತ್ತಲೇ ಇರುತ್ತದೆ. ಆದ್ದರಿಂದ ನಾವು ಜೀವನದ ಅನುಭವಗಳನ್ನು ಎಲ್ಲರ ಜೊತೆ ಹಂಚಿಕೊಳ್ಳುವ, ಎಲ್ಲರನ್ನೂ ಪ್ರೀತಿಸುವ, ನಂಬುವ ಗುಣ ಬೆಳೆಸಿಕೊಳ್ಳಬೇಕು. ಉಪನಿಷತ್‌ನಿಂದ ಬದುಕುವುದು ಹೇಗೆ ಎಂಬುದು ಗೊತ್ತಾಗುತ್ತದೆ’ ಎಂದರು.

‘ಹಣ, ಕೀರ್ತಿ ಸಂಪಾದಿಸಲು ಅಡ್ಡ ಹಾದಿ ಹಿಡಿಯಬೇಡಿ. ಹಣ ಮದ್ಯವಿದ್ದಂತೆ; ಬೇಗನೆ ಅಮಲೇರುತ್ತದೆ’ ಎಂದರು. 1,062 ವಿದ್ಯಾರ್ಥಿಗಳಿಗೆ ಪದವಿ ಮತ್ತು 186 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ‘ನಮ್ಮ ಕ್ಯಾಂಪಸ್‌ನಲ್ಲಿ ಕಲಿತ ವಿದ್ಯಾರ್ಥಿ ಈಗ ವರ್ಷಕ್ಕೆ ₹ 29 ಲಕ್ಷ ವೇತನ ಪಡೆಯುತ್ತಿದ್ದಾನೆ. ಎರೋಪ್ಲೇನ್‌ ವಿನ್ಯಾಸ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದೇವೆ. ಫಾರ್ಮುಲಾ ಕಾರ್‌ ರೇಸಿಂಗ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತೋರಿಸಿದ ಪ್ರಾತ್ಯಕ್ಷಿಕೆಗೆ ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಲಭಿಸಿದೆ’ ಎಂದರು.

‘ನಮ್ಮ ವಿದ್ಯಾರ್ಥಿಗಳು ಸಂಶೋಧಿಸಿದ ಚಿಪ್‌ 2024ರಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಇದಕ್ಕೆ ವಾಣಿಜ್ಯ ಸ್ವರೂಪ ನೀಡಲಾಗುತ್ತದೆ. 36 ಕಂಪನಿಗಳು ಕ್ಯಾಂಪಸ್‌ ಸಂದರ್ಶನಕ್ಕೆ ಬರುತ್ತಿವೆ. ಮಾಡಿದ ಸಾಧನೆಗಿಂತ, ಸಾಗಬೇಕಾದ ದಾರಿ ಇನ್ನೂ ದೂರವಿದೆ’ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಪರೀಕ್ಷಾ ವಿಭಾಗದ ನಿಯಂತ್ರಕ ಡಾ. ಅನಿಲ್‌ ನಂದಿ, ಅಕಾಡೆಮಿಕ್‌ ವಿಭಾಗದ ಡೀನ್‌ ಡಾ. ಪ್ರಕಾಶ ತಿವಾರಿ, ಕುಲಸಚಿವ ಪ್ರೊ. ಎನ್‌.ಎಚ್‌. ಅಯಾಚತಿ ಇದ್ದರು.

‘ಹಳೇ ನೆನಪುಗಳು ಹೆಚ್ಚು ಸುಂದರ’

ಸುಧಾಮೂರ್ತಿ ಅವರು ತಮ್ಮ ಭಾಷಣದ ನಡುವೆ ಬಿವಿಬಿಯಲ್ಲಿ ಕಳೆದ ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಂಡರು.

‘ಹಳೇ ವೈನ್‌ ಯಾವಾಗಲೂ ರುಚಿ. ಅದರಂತೆ ಹಳೇ ಗೆಳೆಯರು ಮತ್ತು ಅವರ ಜೊತೆಗಿನ ನೆನಪುಗಳು ಕೂಡ ಸುಂದರವಾಗಿರುತ್ತವೆ. ಆಗ ನಾನು ಕಾಲೇಜಿನ ಏಕೈಕ ವಿದ್ಯಾರ್ಥಿನಿಯಾಗಿದ್ದೆ. ಆಗ ವಿದ್ಯಾರ್ಥಿಯಾಗಿ ಇದೇ ವೇದಿಕೆಯಲ್ಲಿದ್ದೆ. ಈಗ ಮುಖ್ಯ ಅತಿಥಿಯಾಗಿ ಬಂದಿದ್ದೇನೆ. ಆಗ ನನ್ನ ಸೀನಿಯರ್‌ಗಳು ಕಾಡಿಸುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಯಾರು ಏನೇ ಹೇಳಿದರೂ ನಿಮ್ಮ ಸಾಧನೆಯ ಹಾದಿ ನಿಶ್ಚಿತವಾಗಿರಲಿ. ನಿಮಗೆ ನೀವೇ ಉತ್ತಮ ಸ್ನೇಹಿತರು. ನನ್ನ ಬದುಕು ಸುಂದರವಾಗಿ ರೂಪಗೊಳ್ಳಲು ಬಿವಿಬಿಯಲ್ಲಿ ಆದ ಅನುಭವ ಕಾರಣ. ಅನುಭವವೇ ನಿಜವಾದ ಜೀವನ’ ಎಂದರು.

ಪದಕ ಪಡೆದವರು

ಆಟೊಮೆಷಿನ್‌ ಆ್ಯಂಡ್‌ ರೊಬಿಟಿಕ್‌: ಜಿ. ಅಂಜಲಿ–ಚಿನ್ನ, ಯಶ್‌ ಎಂ. ಬಫ್ನಾ–ಬೆಳ್ಳಿ. ಬಯೊಟೆಕ್ನಾಲಜಿ: ಜಿ. ಹರಿಪ್ರಿಯಾ–ಚಿನ್ನ, ಶಿವಾನಿ ಕುಲಕರ್ಣಿ–ಬೆಳ್ಳಿ. ಸಿವಿಲ್‌ ಎಂಜಿನಿಯರಿಂಗ್‌: ವಿನಾಯಕ ಗೊಂದಿ–ಚಿನ್ನ, ಅಶ್ವಿನಿ ಉಮಚಗಿ–ಬೆಳ್ಳಿ. ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌: ಸಿಂಧು ಬಾಲಚಂದ್ರ ಹೆಗ್ಡೆ–ಚಿನ್ನ, ಸ್ಫೂರ್ತಿ ವೈದ್ಯ–ಬೆಳ್ಳಿ.

ಎಲೆಕ್ಟ್ರಿಕಲ್‌ ಆ್ಯಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌: ಶಾಂಭವಿ ಇಂದರಗಿ–ಚಿನ್ನ, ಎನ್‌. ಕಾವ್ಯಾ–ಬೆಳ್ಳಿ, ಗಾಲಿ ಆಶಾ–ಬೆಳ್ಳಿ. ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌: ರೋಹಿಣಿ ದೇವಗಿರಿ–ಚಿನ್ನ, ಕೇದಾರನಾಥ ಗಂಗಾಧರಯ್ಯ ಸಾಲಿಮಠ–ಬೆಳ್ಳಿ. ಮೆಕ್ಯಾನಿಕಲ್‌ ಎಂಜನಿಯರಿಂಗ್‌: ಶುಭಮ್‌ ರಾಜರಾಮ ಪಾಟೀಲ–ಚಿನ್ನ, ಸಂಗಮೇಶ ಸುಭಾಷ ಶೆಟ್ಟರ್–ಬೆಳ್ಳಿ.

ಮಾಸ್ಟರ್‌ ಆಫ್‌ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌: ಸುನಿತಾ ಲಕ್ಷ್ಮೇಶ್ವರ–ಚಿನ್ನ, ಜಿ.ಪಿ. ವಿಜಯ ಕುಮಾರ–ಬೆಳ್ಳಿ. ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಡ್ಮಿನಿಸ್ಟ್ರೇಷನ್‌: ಸ್ವಾತಿ ಸತೀಶ ಕುಲಕರ್ಣಿ–ಚಿನ್ನ, ಎಚ್‌.ಎನ್‌. ವಿಜಯ ಕುಮಾರ–ಬೆಳ್ಳಿ. ಎಂಟೆಕ್‌ ಇನ್‌ ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌: ಉನ್ನತಿ ಕೊಪ್ಪಿಕರ–ಚಿನ್ನ, ಬಿ.ಎಲ್‌. ಪೂಜಾ–ಬೆಳ್ಳಿ. ಎಂಟೆಕ್‌ ಇನ್ ಡಿಜಿಟಲ್‌ ಎಲೆಕ್ಟ್ರಾನಿಕ್ಸ್‌: ಶ್ರದ್ಧಾ ಜಿ. ರೇವಣಕರ್–ಚಿನ್ನ, ಜ್ಯೋತಿ ಮುತಾಲಿಕ ದೇಸಾಯಿ–ಬೆಳ್ಳಿ.

ಎಂಟೆಕ್‌ ಇನ್‌ ಎನರ್ಜಿ ಸಿಸ್ಟಮ್‌ ಎಂಜಿನಿಯರಿಂಗ್‌: ಅಶ್ಚಿನಿ ಹಿರೇಮಠ–ಚಿನ್ನ, ವೆಂಕಟ ವಿಕ್ರಮದಾಸ್‌ ಕಡಿಯಾಲ–ಬೆಳ್ಳಿ. ಎಂಟೆಕ್‌ ಇನ್‌ ಮಿಷೆನ್‌ ಡಿಸೈನ್: ಎಸ್‌. ಅಂಕಿತ ಕುಮಾರ–ಚಿನ್ನ, ಈರಣ್ಣ ಎಂ. ಜವಳಗಡ್ಡಿ–ಬೆಳ್ಳಿ. ಎಂಟೆಕ್‌ ಇನ್‌ ಸ್ಟ್ರಕ್ಟರಲ್‌ ಎಂಜಿನಿಯರಿಂಗ್‌: ಬೀಬಿ ಉಮೇರಾ ನವಲಗುಂದ–ಚಿನ್ನ, ಅಕ್ಷತಾ ಕುಷ್ಟಗಿ–ಬೆಳ್ಳಿ. ಎಂಟೆಕ್‌ ಇನ್‌ ವಿಎಲ್‌ಎಸ್‌ಐ ಡಿಸೈನ್‌ ಆ್ಯಂಡ್‌ ಎಂಬೆಡೆಡ್‌ ಸಿಸ್ಟಮ್‌: ರಾಕೇಶ ಶಿವಾನಂದ ಚಂದು–ಚಿನ್ನ, ಐಶ್ವರ್ಯಾ ಕೇಣಿ–ಬೆಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT