ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕಿಮ್ಸ್‌ ಸಿಬ್ಬಂದಿಗೆ ಕಳಪೆ ಕಿಟ್‌

ಪ್ರಾಣ ಭೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‌
Last Updated 1 ಆಗಸ್ಟ್ 2020, 20:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕಿತರ ಆರೈಕೆಗಾಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಗರದ ಕಿಮ್ಸ್‌ ವೈದ್ಯಕೀಯ ಸಿಬ್ಬಂದಿಗೆ ದೋಷಪೂರಿತ ಸುರಕ್ಷತಾ ಕಿಟ್‌ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಗುಣಮಟ್ಟದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್‌), ಎನ್‌ 95 ಮಾಸ್ಕ್‌ ಧರಿಸಬೇಕಾಗುತ್ತದೆ. ಆದರೆ, ಕಿಮ್ಸ್‌ನ ಕೆಲ ಸಿಬ್ಬಂದಿಗೆ ನೀಡಲಾದ ಪಿಪಿಇ ಕಿಟ್‌ಗಳು ಹರಿದು ಹೋಗಿವೆ.

ಕಿಮ್ಸ್‌ನಲ್ಲಿರುವ ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ 250 ಹಾಸಿಗೆಗಳ ಸೌಲಭ್ಯವಿದೆ. ರೋಗಿಗಳ ಆರೈಕೆಗಾಗಿ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಕೆಲಸ ಮಾಡುತ್ತಿರುವ 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಇದುವರೆಗೂ ಸೋಂಕು ದೃಢಪಟ್ಟಿದೆ. ಕಿಮ್ಸ್‌ ಸಿಬ್ಬಂದಿಗಾಗಿ ಮೀಸಲಿಟ್ಟಿರುವ 30 ಹಾಸಿಗೆಗಳು ಕಳೆದ ಒಂದು ತಿಂಗಳಿಂದ ನಿತ್ಯ ಭರ್ತಿಯಾಗುತ್ತಲೇ ಇವೆ ಎಂದು ಕಿಮ್ಸ್‌ನ ಮೂಲಗಳು ತಿಳಿಸಿವೆ.

ಕೋವಿಡ್‌ ವಾರ್ಡ್‌ನ ಐಸಿಯು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಗುಣಮಟ್ಟದ ಕಿಟ್‌ಗಳನ್ನು ನೀಡಲಾಗಿದೆ. ಸೋಂಕಿತರ ಸಾಮಾನ್ಯ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಶುಶ್ರೂಷಕರಿಗೆ ಎರಡು, ಮೂರನೇ ದರ್ಜೆಯ ಸುರಕ್ಷತಾ ಕಿಟ್‌ಗಳನ್ನು ನೀಡಲಾಗಿದೆ ಎಂದು ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ಹರಿದ ಪಿಪಿಇ ಕಿಟ್‌ಗಳು, ಮಧ್ಯದಲ್ಲಿ ಕಿಂಡಿ ಬಿದ್ದಿರುವ ಮಾಸ್ಕ್‌ಗಳ ಚಿತ್ರಗಳನ್ನು ಕಿಮ್ಸ್‌ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ಸದಸ್ಯರೇ ಬಹಿರಂಗಪಡಿಸಿದ್ದಾರೆ.

’ಜಿಲ್ಲೆಯಲ್ಲಿ ಸೋಂಕಿತರ ಪ್ರಕರಣಗಳು ಮೊದಲ ಸಲ ಪತ್ತೆಯಾದಾಗ ಎಲ್ಲ ವೈದ್ಯಕೀಯ ಸಿಬ್ಬಂದಿಗೂ ದೋಷವಿಲ್ಲದ ಸುರಕ್ಷಿತಾ ಕಿಟ್‌ಗಳನ್ನು ನೀಡಲಾಗಿತ್ತು. ದಿನದಿಂದ ದಿನಕ್ಕೆ ಅಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಸುರಕ್ಷತಾ ಕಿಟ್‌ಗಳ ಗುಣಮಟ್ಟ ಕಡಿಮೆಯಾಗುತ್ತಾ ಹೋಯಿತು. ಕೆಲ ಪಿಪಿಇ ಕಿಟ್‌ಗಳಂತೂ ಟಿಶ್ಯೂ ಪೇಪರ್‌ನಷ್ಟು ತೆಳ್ಳಗಿವೆ. ಇನ್ನೂ ಕೆಲ ಕಿಟ್‌ಗಳು ಧರಿಸಲು ಕಷ್ಟವಾಗುವಷ್ಟು ದಪ್ಪಗಿವೆ. ಇವುಗಳನ್ನು ಧರಿಸಿ ಅಪಾಯಕಾರಿ ಜಾಗದಲ್ಲಿ ಆರರಿಂದ ಎಂಟು ತಾಸು ಕೆಲಸ ಮಾಡುವುದು ಅಸಾಧ್ಯ’ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಹೇಳಿದರು.

ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಉಸ್ತುವಾರಿ ಡಾ. ರಾಜಶೇಖರ ದ್ಯಾಬೇರಿ ಈ ಕುರಿತು ಪ್ರತಿಕ್ರಿಯಿಸಿ ‘ಕೆಲ ಸುರಕ್ಷತಾ ಪರಿಕರಗಳು ದೋಷಯುಕ್ತವಾಗಿವೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಒಂದು ಸಾವಿರ ಕಿಟ್‌ಗಳಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಈ ರೀತಿ ಆಗಿರಬಹುದು. ಜಿಲ್ಲಾಡಳಿತವು ನಮ್ಮ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಿಟ್‌ಗಳನ್ನು ನೀಡುತ್ತಿದೆ’ ಎಂದರು.

ಸುರಕ್ಷತಾ ಪರಿಕರಗಳು ಒಂದೇ ಒಂದು ದೋಷಪೂರಿತವಾಗಿದ್ದರೂ ಅವುಗಳನ್ನು ವಾಪಸ್‌ ನೀಡುವಂತೆ ಹೇಳಿದ್ದೇನೆ. ಇವುಗಳನ್ನು ನೀಡಿದವರಿಗೆ ವೇತನ ಪಾವತಿಸದಂತೆ ಸೂಚಿಸಿದ್ದೇನೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿನಿತೇಶ್‌ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT