ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಹುಬ್ಬಳ್ಳಿ ಧಾರವಾಡ ಪಾಲಿಕೆ ಪೌರ ಕಾರ್ಮಿಕರ ಆಗ್ರಹ

ಪಾಲಿಕೆ ಕಚೇರಿ ಎದುರು ಪ್ರತಿಭಟನೆ; ಮುಖಂಡರೊಂದಿಗೆ ಆಯುಕ್ತ ಸಭೆ
Last Updated 9 ಆಗಸ್ಟ್ 2021, 13:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿವೇಶನ ಒದಗಿಸುವುದು, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ಸದಸ್ಯರು ಆಯುಕ್ತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನವನಗರದಲ್ಲಿಪೌರ ಕಾರ್ಮಿಕರಿಗೆ ಈಗಾಗಲೇ ಮಂಜೂರಾಗಿರುವ 122 ನಿವೇಶನಗಳನ್ನು ನೋಂದಣಿ ಮಾಡಿಕೊಡಬೇಕು. 700 ಮಂದಿಗೆ ಒಬ್ಬ ಪೌರ ಕಾರ್ಮಿಕನ ಬದಲಿಗೆ 500 ಮಂದಿಗೆ ಒಬ್ಬರನ್ನು ನೇಮಕ ಮಾಡಬೇಕು. ಕಾರ್ಮಿಕರ ಕರ್ತವ್ಯದ ವೇಳಾಪಟ್ಟಿಯನ್ನು ಸಂಘಕ್ಕೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಂಟೂರ ರಸ್ತೆಯಲ್ಲಿ ಗೃಹ ಭಾಗ್ಯ ಯೋಜನೆಯಡಿ ನಿರ್ಮಾಣವಾಗುತ್ತಿರುವ 320 ಮನೆಗಳ ಕಾಮಗಾರಿಯನ್ನು ಬೇಗ ಮುಗಿಸಬೇಕು. ಪಾಲಿಕೆಯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು. ಕರ್ತವ್ಯದ ಸಂದರ್ಭದಲ್ಲಿ ನೀಡುವ ಉಪಾಹಾರ ವ್ಯವಸ್ಥೆ ರದ್ದುಪಡಿಸಬೇಕು. ಅನುಕಂಪ ಆಧಾರಿತ ನೇಮಕಾತಿಯನ್ನು ತ್ವರಿತವಾಗಿ ಮಾಡಬೇಕು. ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದರು.

ಕಾರ್ಮಿಕರಿಗೆ ಆರೋಗ್ಯ ಮತ್ತು ಜೀವ ವಿಮೆ ಒದಗಿಸಬೇಕು. ಪ್ರತಿ ತಿಂಗಳು ಒಂದನೇ ತಾರೀಖಿಗೆ ವೇತನ ಪಾವತಿಸಬೇಕು. ಸಂಘದ ಕಚೇರಿಯನ್ನು ದುರಸ್ತಿ ಮಾಡಿಕೊಡಬೇಕು. ನೇರ ವೇತನದಿಂದ ಹೊರಗುಳಿದಿರುವ ಇತರ ಹೊರಗುತ್ತಿಗೆ ಕಾರ್ಮಿಕರನ್ನೂ ಆ ವ್ಯವಸ್ಥೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಆಯುಕ್ತ ಸಭೆ:

ಕಚೇರಿ ಹೊರಗೆ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರ ಸಂಘದ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಸಭೆ ನಡೆಸಿ, ಅವರ ಬೇಡಿಕೆಗಳನ್ನು ಆಲಿಸಿದರು.

‘500 ಮಂದಿಗೆ ಒಬ್ಬ ಪೌರ ಕಾರ್ಮಿಕನ ನೇಮಕಾತಿ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ನಿರ್ಧಾರ. ಅದು ಸ್ಥಳೀಯವಾಗಿ ಸಾಧ್ಯವಿಲ್ಲ. ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಬಸಪ್ಪ ಮಾದಾರ, ಗೌರವಾಧ್ಯಕ್ಷರಾದ ಗಂಗಾಧರ ಟಗರಗುಂಟಿ, ನಿಂಗಪ್ಪ ಮೊರಬದ, ದುರಗಪ್ಪ ವೀರಾಪುರ, ಉಪಾಧ್ಯಕ್ಷರಾದ ಬಿ.ಬಿ. ಕೆಂಪಣ್ಣವರ, ವೆಂಕಟೇಶ ಟಗರಗುಂಟಿ, ಪ್ರಧಾನ ಕಾರ್ಯದರ್ಶಿ ಹೊನ್ನುರಪ್ಪ ದೇವಗಿರಿ, ಸಹ ಕಾರ್ಯದರ್ಶಿ ಅಶೋಕ ವಂಕರಾಜ, ಕೋಶಾಧ್ಯಕ್ಷ ರಮೇಶ ರಾಮಯ್ಯನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT