ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆ ಅನುಷ್ಠಾನ ನಮ್ಮಿಂದಲೇ: ಸಚಿವ ಪ್ರಹ್ಲಾದ ಜೋಶಿ

Published 29 ಅಕ್ಟೋಬರ್ 2023, 8:46 IST
Last Updated 29 ಅಕ್ಟೋಬರ್ 2023, 8:46 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಅಣ್ಣಿಗೇರಿ: 'ಮಹಾದಾಯಿ ಯೋಜನೆ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಬಳಿ ಪರಿಸರ ಮತ್ತು ವನ್ಯಜೀವಿ ಮಂಡಳಿಯಿಂದ ಕೆಲವು ಸ್ಪಷ್ಟೀಕರಣದ ವರದಿ ಕೇಳಿದೆ. ಈವರೆಗೂ ಅದು ನೀಡದ ಕಾರಣ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ' ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪ್ರಹ್ಲಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಅಣ್ಣಿಗೇರಿ ತಾಲ್ಲೂಕಿನ ಶಲವಡಿ ಗ್ರಾಮದ ಪಬ್ಲಿಕ್ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

'ಮಹದಾಯಿ ಯೋಜನೆ ಅನುಷ್ಠಾನದ ಕುರಿತು ಈಗಾಗಲೇ ಕೇಂದ್ರದ ಅಧಿಕಾರಿಗಳ ಜೊತೆ ನಾವು ಚರ್ಚಿಸಿದ್ದೇವೆ. ಯೋಜನೆಯ ಸಮಗ್ರ ವಿಸ್ತ್ರತಾ ವರದಿ(ಡಿಪಿಆರ್) ಸಿದ್ಧಪಡಿಸಿ ಒಪ್ಪಿಗೆ ನೀಡಿದ್ದೇ ಬಿಜೆಪಿ ಸರ್ಕಾರ. ಅದರ ಅನುಷ್ಠಾನ ಸಹ ನಾವೇ ಮಾಡುತ್ತೇವೆ' ಎಂದು ಭರವಸೆ ನೀಡಿದರು.

ಹುಲಿ ಉಗುರು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಶಿ, 'ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಹುಲಿ ಉಗುರು ಪ್ರಕರಣವನ್ನು ಮುನ್ನೆಲೆಗೆ ತರುತ್ತಿದ್ದಾರೆ' ಎಂದು ಆರೋಪಿಸಿದರು.

‘ಬೆಳೆ ಪರಿಹಾರ ನೀಡಲು ಕೇಂದ್ರ ಸಿದ್ದ’

'ಬೆಳೆ ವಿಮೆ ಪರಿಹಾರದ ಹಣ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರ 2022ರ ವರದಿಯನ್ನು ತಪ್ಪಾಗಿ ನೀಡಿತ್ತು. ಅದನ್ನು ಸರಿಪಡಿಸಿ ಕಳುಹಿಸುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಜೊತೆಯೂ ಮಾತನಾಡಲಾಗಿದೆ. ವರದಿ ಬಂದ ನಂತರ ಪರಿಹಾರ ಹಣ ವಿತರಿಸಲಾಗುವುದು' ಎಂದರು.

'ರಾಜ್ಯ ಸರ್ಕಾರ ಖಾಸಗಿ ವಿಮಾ ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರಕ್ಕೆ ಸುಳ್ಳು ವರದಿ ನೀಡಿದೆ. ಶೀಘ್ರವಾಗಿ ಸಮರ್ಪಕ ವರದಿ ನೀಡದಿದ್ದರೆ, ರಾಜ್ಯದಾದ್ಯಂತ ಬಿಜೆಪಿ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು' ಎಂದು‌ ಎಚ್ಚರಿಸಿದರು.

‘ವಿದ್ಯುತ್ ಖರೀದಿಸಲು ರಾಜ್ಯದ ಬಳಿ ಹಣವಿಲ್ಲ’

'2017/18ರಿಂದ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾನೆಗೆ ಹೆಚ್ಚು ಒತ್ತು ನೀಡಿದೆ. ಇದೀಗ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾನೆಯಾಗುತ್ತಿದ್ದು, ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಮಾರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಬೇಡಿಕೆ ಇಟ್ಟಷ್ಟು ವಿದ್ಯುತ್ ಪೂರೈಸಲು ನಾವು ಸಿದ್ಧರಿದ್ದೇವೆ. ಆದರೆ, ಖರೀದಿಸಲು ಅವರಲ್ಲಿ ಹಣವಿಲ್ಲ. ಏಕೆಂದರೆ, ವಿದ್ಯುತ್ ಸೇರಿದಂತೆ ಉಚಿತ ಯೋಜನೆ ನಿಭಾಯಿಸಲು ಸಾಧ್ಯವಾಗದೆ ಪರದಾಡುತ್ತ, ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನವರು ಮಹಾನಿಸ್ಸೀಮರು' ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT