ಮಂಗಳವಾರ, ಜನವರಿ 26, 2021
24 °C

ಅಕಾಲಿಕ ಮಳೆ: ಮಾವು, ಜೋಳ ಬೆಳೆಗಾರರಲ್ಲಿ ಆತಂಕ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯು ಜಿಲ್ಲೆಯ ಪ್ರಮುಖ ಬೆಳೆಗಳಾದ ಮಾವು, ಜೋಳ ಹಾಗೂ ಕಡಲೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ 8,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮಾವಿನ ಗಿಡಗಳು ಈಗ ಹೂ ಬಿಟ್ಟಿದ್ದು, ಕೆಲವು ಕಡೆಗಳಲ್ಲಿ ಪಿಚು ಕಾಯಿಗಳೂ ಆಗಿವೆ. ಸಾಕಷ್ಟು ಹೂ ಬಿಟ್ಟಿರುವುದರಿಂದ ಮಾವು ಬೆಳೆಗಾರರು ಖುಷಿಯಲ್ಲಿದ್ದರು. ಕಳೆದ ಬಾರಿ ಮಾರ್ಚ್‌ ನಂತರ ಉತ್ತಮ ಫಸಲು ಬಂದಿತ್ತಾದರೂ, ಕೋವಿಡ್‌–19 ಕಾರಣ ಲಾಕ್‌ಡೌನ್‌ ಆಗಿದ್ದರಿಂದ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ.

ಈ ಬಾರಿಯಾದರೂ ಮಾವು ಕೈ ಹಿಡಿಯಲಿದೆ ಎಂದು ರೈತರು ಕಾದು ಕುಳಿತಿದ್ದರು. ಈಗ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದ ಅನುಕೂಲಕ್ಕಿಂತ ರೈತರಿಗೆ ಅನಾನುಕೂಲವೇ ಜಾಸ್ತಿ ಆಗಲಿದೆ.

ಮಾವಿನ ಗಿಡಗಳಿಗೆ ಬೂದಿ ರೋಗ ಹಾಗೂ ಕರಿಜಿಗಿ ರೋಗ ಬರಲಿದೆ. ಇದು ಮಾವಿನ ಇಳುವರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಮಾವಿನಲ್ಲಿ ಜಿಗಿ ಹುಳುವಿನ ಬಾಧೆ ಕಂಡು ಬಂದಲ್ಲಿ ಹತೋಟಿಗಾಗಿ 4 ಗ್ರಾಂ ಕಾರ್ಬರಿಲ್ 50 ಡಬ್ಲ್ಯು.ಪಿ. ಅಥವಾ 2 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹುಬ್ಬಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ನಿರ್ದೇಶಕ ವಿಜಯಕುಮಾರ ರ‍್ಯಾಗಿ.

ಮಾವಿನ ಎಲೆಗಳ ಮೇಲೆ ಬೂದಿಯಂತಹ (ಬೂದಿರೋಗ) ಬೆಳವಣಿಗೆ ಕಂಡು ಬಂದರೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 1 ಮಿ.ಲೀ ಹೆಕ್ಸಾಕೊನಾಜೋಲ್ 5 ಇ.ಸಿ. ಅಥವಾ 1 ಗ್ರಾಂ ಕಾರ್ಬನ್ ಡೈಜಿಮ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವ ಮೂಲಕ ರೋಗ ನಿಯಂತ್ರಿಸಬಹುದಾಗಿದೆ ಎನ್ನುತ್ತಾರೆ ಅವರು.

ಜೋಳ ಕಡಲೆಗೂ ಆತಂಕ: ಜಿಲ್ಲೆಯಲ್ಲಿ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಹಾಗೂ 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಮಳೆಯಿಂದ ಈ ಬೆಳೆಗಳೂ ಹಾನಿಯಾವು ಆತಂಕ ಕಾಡುತ್ತಿದೆ.

ಜೋಳ ತೆನೆಗಟ್ಟಿದ್ದು, ಈಗ ಮಳೆ ಸುರಿದರೆ ಕಾಡಿಗೆಯಾಗಲಿದೆ. ಇದರಿಂದ ಮಾರುಕಟ್ಟೆಯಲ್ಲಿ ಜೋಳಕ್ಕೆ ಬೆಲೆ ಸಿಗುವುದಿಲ್ಲ. ಕಡಲೆಯೂ ಕಾಯಿಗಟ್ಟುವ ಹಂತದಲ್ಲಿದೆ. ಜಾಸ್ತಿ ಮಳೆಯಾದರೆ, ಕಡಲೆಕಾಯಿ ಮೊಳಕೆಯಾಗುವ ಸಾಧ್ಯತೆಗಳಿವೆ.

ಜಾಸ್ತಿ ಮಳೆಯಾದರೆ ಜೋಳ, ಕಡಲೆ ಬೆಳೆಗೆ ಹಾನಿಯಾಗುವ ಸಾಧ್ಯತೆಗಳಿವೆ. ಜೋಳ ತೆನೆಗಟ್ಟುವ ಹಂತದಲ್ಲಿದೆ. ಕಾಡಿಗೆಯಾಗಿ ಜೋಳ ಕಪ್ಪಾಗಲಿದೆ ಎಂದು ಕೃಷಿ ಇಲಾಖೆ ಧಾರವಾಡ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.