ಧಾರವಾಡ: ‘ರಾಯಾಪುರದ ಕೆಎಲ್‍ಇ ಶಾಲೆಯಲ್ಲಿ ಆಗಸ್ಟ್ 31ರಿಂದ ಸೆಪ್ಪೆಂಬರ್ 1ರವರೆಗೆ ಮಾದರಿ ವಿಶ್ವಸಂಸ್ಥೆ ಸಮ್ಮೇಳನ’ ನಡೆಯಲಿದೆ ಎಂದು ಪ್ರಾಚಾರ್ಯೆ ಶುಭಾಂಗಿ ಮೋರೆ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ದಿನ ಬೆಳಿಗ್ಗೆ 8.30ರಿಂದ ಸಂಜೆ 6 ಗಂಟೆವರೆಗೆ ಸಮ್ಮೇಳನ ನಡೆಯಲಿದೆ. ಉದ್ಯಮಿ ಹಿಮಾಂಶು ಕೊಠಾರಿ ಉದ್ಘಾಟಿಸುವರು. ಐಐಟಿ ಪ್ರಾಧ್ಯಾಪಕ ಸುಭಾಷ್ ಪಾಲ್ಗೊಳ್ಳುವರು. ಒಟ್ಟು 380 ವಿದ್ಯಾರ್ಥಿಗಳು ಭಾಗವಹಿಸುವರು’ ಎಂದರು.
‘ವಿಶ್ವಸಂಸ್ಥೆಯ ಮಾದರಿಯಲ್ಲಿ ಒಂಬತ್ತು ಸಮಿತಿ ರಚಿಸಲಾಗಿದೆ. ಸಮ್ಮೇಳನವನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಅಂತರರಾಷ್ಟ್ರೀಯ ಮಟ್ಟದ ಪ್ರಚಲಿತ ವಿದ್ಯಮಾನಗಳ ಕುರಿತು ವಿದ್ಯಾರ್ಥಿಗಳು ವಿಷಯ ಮಂಡಿಸುವರು. ಅಂತರರಾಷ್ಟ್ರೀಯ ಸಂಸ್ಥೆಗಳ ಕಾರ್ಯ ವಿಧಾನ ತಿಳಿದುಕೊಳ್ಳಲು, ನಾಯಕತ್ವ ಮೈಗೂಡಿಸಿಕೊಳ್ಳಲು ಸಮ್ಮೇಳನ ಸಹಕಾರಿಯಾಗಲಿದೆ’ ಎಂದರು.
ಧಾರವಾಡ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕರಣ ದೊಡವಾಡ, ಮಹೇಶ್ವರಿ ಸೊಬರದ, ವಿದ್ಯಾರ್ಥಿಗಳಾದ ಸೂರ್ಯಾಕ್ಷ ಅಕಳವಾಡಿ, ಹರ್ಷದ್ ಪಾಲ್ಗೊಂಡಿದ್ದರು.