ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ಬೆಳೆ ಪರಿಹಾರ: 6083 ರೈತರಿಗೆ ಬಾಕಿ

10 ಹಂತಗಳಲ್ಲಿ 1.06 ಲಕ್ಷ ರೈತರ ಖಾತೆಗೆ ಬೆಳೆ ಪರಿಹಾರ ಜಮೆ: ಜಿಲ್ಲಾಧಿಕಾರಿ
Published 23 ಮೇ 2024, 15:45 IST
Last Updated 23 ಮೇ 2024, 15:45 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯಲ್ಲಿ 6083 ರೈತರಿಗೆ ತಾಂತ್ರಿಕ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರ ಪಾವತಿಯಾಗಿಲ್ಲ. ಈ ಪೈಕಿ 4918 ರೈತರ ತಾಂತ್ರಿಕ ದೋಷ ಸರಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 660 ರೈತರು ಮೃತಪಟ್ಟಿದ್ದು, ಇನ್ನು 505 ಮಂದಿ ಪರಸ್ಥಳಗಳಲ್ಲಿ ನೆಲೆಸಿದ್ಧಾರೆ. ತಾಂತ್ರಿಕದೋಷ ಸರಿಪಡಿಸಿಕೊಳ್ಳುವಂತೆ ಪರಸ್ಥಳಗಳಲ್ಲಿ ನೆಲೆಸಿರುವ ರೈತರಿಗೆ ಗ್ರಾಮ ಆಡಳಿತ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ ಎಂದರು.

ಆಧಾರ್‌ ಕಾರ್ಡ್‌ ಮತ್ತು ‘ಫ್ರೂಟ್ಸ್’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಐಡಿಯಲ್ಲಿ ಹೆಸರು ವ್ಯತ್ಯಾಸ, ಬ್ಯಾಂಕ್ ಖಾತೆಗೆ ಆಧಾರ ಮ್ಯಾಪ್ ಆಗದಿರುವುದು,

ಬ್ಯಾಂಕ್ ಖಾತೆ ನಿಷ್ಕ್ರಿಯ ಮೊದಲಾದ ತಾಂತ್ರಿಕ ಕಾರಣಗಳಿಂದ ಪರಿಹಾರ ಪಾವತಿಯಾಗಿಲ್ಲ. ತಾಂತ್ರಿಕ ದೋಷದಿಂದ ಪರಿಹಾರ ಮೊತ್ತ ಜಮೆಯಾಗದೆ ಇರುವ ರೈತರು ಕೂಡಲೇ ಸಮೀಪದ ತಹಶೀಲ್ದಾರ್‌ ಕಚೇರಿ, ಬ್ಯಾಂಕ್‌ ಸಂಪರ್ಕಿಸಿ ತಾಂತ್ರಿಕ ದೋಷ ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದು ಎಂದರು.

ಬೆಳೆ ಹಾನಿ ಪರಿಹಾರ ಈವರೆಗೆ ಒಟ್ಟು 10 ಹಂತಗಳಲ್ಲಿ 1.06 ಲಕ್ಷ ರೈತರಿಗೆ (1.23 ಲಕ್ಷ ಹೆಕ್ಟೇರ್‌ ಜಮೀನು) ಒಟ್ಟು ₹ 108 ಕೋಟಿ ಪಾವತಿಯಾಗಿದೆ. ಮಳೆಯಾಶ್ರಿತ ಜಮೀನಿಗೆ ಹೆಕ್ಟೇರ್‌ಗೆ (ಎರಡೂವರೆ ಎಕರೆ) ₹ 8500 ಹಾಗೂ ನೀರಾವರಿ ಜಮೀನಿಗೆ ಹೆಕ್ಟೇರ್‌ಗೆ ₹ 17 ಸಾವಿರ ‍ಪರಿಹಾರ ನಿಗದಿಯಾಗಿದೆ. ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಬೆಳೆ ಹಾನಿ ನೀಡಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.

ಸಹಾಯವಾಣಿಗೆ ಈವರೆಗೆ 1292 ದೂರು ದಾಖಲಾಗಿವೆ. ದೂರುಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಪಡೆದು ಪರಿಹರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಈ ವರ್ಷ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಪ್ರವಾಹ ಉಂಟಾಗುವ ಸಾಧ್ಯತೆ ಪ್ರದೇಶಗಳನ್ನು ಗುರುತಿಸಿ ಮುಂಜಾಗ್ರಾ ಕ್ರಮ ವಹಿಸಲು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್‌ ಪಾಲ್ಗೊಂಡಿದ್ದರು.

‘ವಾಡಿಕೆಗಿಂತ ಹೆಚ್ಚು ಮಳೆ’

ಜಿಲ್ಲೆಯ ವಾಡಿಕೆ ಮಳೆ (ಏಪ್ರಿಲ್‌ ಮತ್ತು ಮೇ 21ರವರೆಗೆ) 81 ಮಿ.ಮೀ. ಈ ವರ್ಷ 112 ಮಿ.ಮೀ ಮಳೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ 56ರಷ್ಟು ಹೆಚ್ಚು ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಆರಂಭವಾಗಿವೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ 2.70 ಲಕ್ಷ ಹೆಕ್ಟೇರ್‌ನಲ್ಲಿ ಗುರಿ ಇದೆ. ಹೆಸರು 67150 ಹತ್ತಿ 59000 ಮುಸುಕಿನಜೋಳ 57175 ಸೋಯಾಅವರೆ 33100 ಶೇಂಗಾ 25000 ಉದ್ದು 7350 ಹಾಗೂ ಭತ್ತ 11522 ಹೆಕ್ಟೇರ್‌ ಬಿತ್ತನೆ ಗುರಿ ಇದೆ ಎಂದರು.

31 ಬಿತ್ತನೆ ಬೀಜ ವಿತರಣೆ ಕೇಂದ್ರ: ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ 20681 ಕ್ವಿಂಟಲ್‌ ವಿವಿಧ ಬಿತ್ತನೆ ಬೀಜ ವಿತರಣೆ ಬೇಡಿಕೆ ಇದೆ. ಹೆಸರು ಭತ್ತ ಉದ್ದು ಮುಸುಕಿನಜೋಳ ಸಹಿತ ವಿವಿಧ ಬೆಳೆಗಳ ಒಟ್ಟಾರೆ 6568 ಕ್ವಿಂಟಲ್ ಬಿತ್ತನೆ ಬೀಜಗಳು ದಾಸ್ತಾನು ಇವೆ. 14 ರೈತ ಸಂಪರ್ಕ ಕೇಂದ್ರ ಹಾಗೂ 17 ಹೆಚ್ಚುವರಿ ಕೇಂದ್ರ ಒಟ್ಟಾರೆ 31 ವಿತರಣಾ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ವಹಿಸಲಾಗಿದೆ. ರೈತರು ಆಯಾ ಹೋಬಳಿ ವಿತರಣಾ ಕೇಂದ್ರಗಳಿಂದ ಬಿತ್ತನೆ ಬೀಜಗಳನ್ನು ಖರೀದಿಸಬಹುದು ಎಂದರು.

33240 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನು:

ಮುಂಗಾರು ಹಂಗಾಮಿನಲ್ಲಿ 56243 ಮೆಟ್ರಿಕ್‌ ಟನ್‌ ವಿವಿಧ ರಸಗೊಬ್ಬರಗಳ ಅವಶ್ಯಕತೆ ಇದೆ. ಮೇ ಅಂತ್ಯದವರೆಗೆ 16749 ಮೆಟ್ರಿಕ್‌ ಟನ್ ಬೇಡಿಕೆ ಇದೆ. ಈಗ 33240 ಮೆಟ್ರಿಕ್‌ ಟನ್ (ಯೂರಿಯಾ: 11726 ಡಿಎಪಿ: 5672 ಎಂಒಪಿ: 1559 ಕಾಂಪ್ಲೆಕ್ಸ್‌:13785 ಎಸ್ಎಸ್ಪಿ: 499 ಮೆಟ್ರಿಕ್‌ ಟನ್‌) ದಾಸ್ತಾನು ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT