ಹುಬ್ಬಳ್ಳಿ: ‘ಪರಿಶಿಷ್ಟ ಜಾತಿ ಒಳಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಹಾಗೂ ದೇಶವ್ಯಾಪಿ ಹೋರಾಟಕ್ಕೆ ರಾಜ್ಯ ಕೊರಮ, ಕೊರಚ, ಭೋವಿ, ಬಂಜಾರ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ನಿರ್ಧರಿಸಿದೆ’ ಎಂದು ಸಮಿತಿ ಮುಖಂಡ ಪಾಂಡುರಂಗ ಪಮ್ಮಾರ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಲ್ಮನವಿ ಸ್ವೀಕಾರವಾಗಿದ್ದು, 9 ನ್ಯಾಯಾಧೀಶರ ಪೀಠದ ಮುಂದೆ ಶೀಘ್ರವೇ ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್ ಒಳ ಮೀಸಲಾತಿಗೆ ಸಹಮತ ವ್ಯಕ್ತಪಡಿಸಿರುವುದು ಸರಿಯಲ್ಲ. ನ್ಯಾಯಾಲಯದ ಅಭಿಪ್ರಾಯ ಸ್ವಾಗತಿಸಿ ಆ. 14ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಮಾದಿಗರ ವಿಜಯೋತ್ಸವದಲ್ಲಿ ನಮ್ಮ ಸಂಘಟನೆ ಪಾಲ್ಗೊಳ್ಳುತ್ತಿಲ್ಲ’ ಎಂದರು.
‘ಒಳಮೀಸಲಾತಿ ಜಾರಿಯಾದರೆ ಮುಂದಿನ ಪೀಳಿಗೆಗೆ ಅನ್ಯಾಯವಾಗಲಿದೆ. ಈ ಕುರಿತು ಪರಿಶಿಷ್ಟ ಜಾತಿಯ ನಾಯಕರು ಹಾಗೂ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದು ಸ್ವಾಗತಾರ್ಹ’ ಎಂದು ಹೇಳಿದರು.
ಪ್ರಕಾಶ ಕ್ಯಾರಕಟ್ಟಿ, ಶಶಿಕಾಂತ ಬಿಜವಾಡ, ಸುಭಾಸ ಮಲ್ಲಾಡದ, ಶಿವಾನಂದ ಕೊಣ್ಣೂರ ಇದ್ದರು.