ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಆದ್ಯತೆ: ಸಿ.ಕೆ. ರಾಮೇಗೌಡ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆ ಆಕಾಂಕ್ಷಿ ಹೇಳಿಕೆ
Last Updated 12 ಮಾರ್ಚ್ 2021, 9:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಆಯ್ಕೆಯಾದರೆ ಪ್ರಾದೇಶಿಕ ಅಸಮತೋಲನ ನಿವಾರಣೆ ಜತೆಗೆ, ಜಾತಿ ಮತ್ತು ಹಣದ ಪ್ರಾಬಲ್ಯವನ್ನು ಹೋಗಲಾಡಿಸಲು ಆದ್ಯತೆ ನೀಡುವೆ. ನಾಡು–ನುಡಿ ವಿಷಯದಲ್ಲಿ ಪರಿಷತ್ ಸದಾ ಕನ್ನಡಿಗರ ಪರವಾಗಿ ನಿಲ್ಲುವಂತೆ ಮಾಡಲಾಗುವುದು’ ಎಂದು ಪರಿಷತ್ ಚುನಾವಣೆ ಆಕಾಂಕ್ಷಿ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಹೇಳಿದರು.

‘ಪರಿಷತ್‌ನಲ್ಲಿ ದಕ್ಷಿಣ ಕರ್ನಾಟಕದವರದ್ದೇ ಪ್ರಾಬಲ್ಯ ಎಂಬ ಮಾತು ಇದೆ. ಅದಕ್ಕಾಗಿ, ಉತ್ತರ ಕರ್ನಾಟಕ ಭಾಗದವರನ್ನು ಪರಿಷತ್‌ಗೆ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಕಾರ್ಯಕಾರಿ ಸಮಿತಿ ನೇಮಕದಲ್ಲೂ ಇದೇ ಮಾನದಂಡ ಅನುಸರಿಸಲಾಗುವುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗ್ರಾಮಕ್ಕೊಂದು ವಾಚನಾಲಯ, ಪಂಚಾಯ್ತಿಗೊಂದು ಗ್ರಂಥಾಲಯ, ಹೋಬಳಿ ಮಟ್ಟದಲ್ಲಿ ಹಳೆಗನ್ನಡದ ಮರು ಓದು ಹಾಗೂ ಗಮಕ ವಾಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಾಣ ಹಾಗೂ ಜನಪದ ಕಲಾ ಪ್ರದರ್ಶನ ಏರ್ಪಡಿಸಲಾಗುವುದು. ಯುವ ಬರಹಗಾರರಿಗಾಗಿ ವಿಶೇಷ ಸಾಹಿತ್ಯ ಕಮ್ಮಟ, ನಾಲ್ಕೂ ಕಂದಾಯ ವಿಭಾಗಗಳಲ್ಲಿ ಪುಸಕ್ತ ಮಹಾಮೇಳವನ್ನು ಏರ್ಪಡಿಸಲಾಗುವುದು’ ಎಂದರು.

‘ಗ್ರಾಮೀಣ ಹಾಗೂ ಗಡಿ ಭಾಗಗಳಲ್ಲಿರುವ ಕನ್ನಡ ಶಾಲೆಗಳನ್ನು ದತ್ತು ಪಡೆದು ಸಬಲೀಕರಣ ಮಾಡಲಾಗುವುದು. ನಗರ ಹಾಗೂ ಪಟ್ಟಣಗಳ ಪ್ರಮುಖ ರಸ್ತೆಗಳಿಗೆ ಕನ್ನಡಕ್ಕಾಗಿ ದುಡಿದ ಹಾಗೂ ಹೋರಾಡಿದವರ ಹೆಸರನ್ನು ಇಡಲಾಗುವುದು. ಕನ್ನಡದ ಮೇರು ಕೃತಿಗಳನ್ನು ಮರು ಮುದ್ರಣ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು’ ಎಂದು ಹೇಳಿದರು.

ಕರ್ನಾಟಕ ಸ್ವಾಭಿಮಾನಿ ವೇದಿಕೆ ಪ್ರಧಾನ ಕಾರ್ಯದರ್ಶಿ ಶಂಕರ ಹೂಗಾರ ಮಾತನಾಡಿ, ‘ಪರಿಷತ್ ಚಟುವಟಿಕೆಗಳು ಕೆಲ ಪ್ರದೇಶಗಳಿಗಷ್ಟೇ ಸೀಮಿತವಾಗದೆ, ರಾಜ್ಯದ ಮೂಲೆ ಮೂಲೆಯನ್ನು ತಲುಪಬೇಕಿದೆ. ಈ ನಿಟ್ಟಿನಲ್ಲಿ ರಾಮೇಗೌಡರು ಆರಂಭದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ, ಅವರನ್ನು ಚುನಾವಣೆಯಲ್ಲಿ ಬೆಂಬಲಿಸಬೇಕಿದೆ’ ಎಂದರು.

ಸಾಹಿತಿ ಸೋಮು ರೆಡ್ಡಿ ಮಾತನಾಡಿ, ‘ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿ ಹಾಗೂ ಬೆಂಗಳೂರು ನಗರ ಘಟಕದ ಅಧ್ಯಕ್ಷರಾಗಿ ರಾಮೇಗೌಡ ಅವರು ಕೆಲಸ ಮಾಡಿದ್ದಾರೆ. ಪರಿಷತ್‌ ಅನ್ನು ತಳಮಟ್ಟದವರೆಗೆ ಕೊಂಡೊಯ್ಯುವ ಅವರ ಕಾರ್ಯಕ್ರಮಗಳು ಉತ್ತಮವಾಗಿವೆ. ಇಂತಹವರು ಚುನಾವಣೆಯಲ್ಲಿ ಗೆದ್ದರೆ ಪರಿಷತ್ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT