ಭಾನುವಾರ, ಜನವರಿ 19, 2020
27 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಪ್ರಾಣಿ ಪ್ರಿಯೆ, ಹುಬ್ಬಳ್ಳಿ ಬೆಡಗಿ ರೂಪದರ್ಶಿ ಪ್ರಿಯಾಂಕ

ಗೌರಮ್ಮ ಭೀ. ಕಟ್ಟಿಮನಿ Updated:

ಅಕ್ಷರ ಗಾತ್ರ : | |

Prajavani

ತರಬೇತಿ ಪಡೆಯದೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಪಡೆಯುವುದು ಸುಲಭವಲ್ಲ. ಅದಕ್ಕಾಗಿ ತರಬೇತಿ ಬೇಕೆ ಬೇಕು. ಆದರೆ ಯಾರ ಸಹಾಯವಿಲ್ಲದೆ, ಫಿಟ್ನೆಸ್‌, ಕಾಸ್ಟ್ಯೂಮ್‌, ವಾಕಿಂಗ್‌ ಸ್ಟೈಲ್‌ ಎಲ್ಲವನ್ನು ಇಂಟರ್‌ನೆಟ್‌ನಲ್ಲಿ ನೋಡಿ ಕಲಿತಿದ್ದೇನೆ ಎನ್ನುವ ಪ್ರಿಯಾಂಕ, ಎಂಟು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿದ್ದು, ದೇಶದಾದ್ಯಂತ ನಡೆದ ಅನೇಕ ಫ್ಯಾಷನ್‌ ಷೋಗಳಲ್ಲಿ ಸ್ಪರ್ಧಿಸಿ, ಸಾಕಷ್ಟು ಅವಾರ್ಡ್‌ಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಎಂ.ಇ ಮತ್ತು ಎಂ.ಬಿ.ಎ ಪದವೀಧರೆಯಾಗಿರುವ ಅವರು ಹುಟ್ಟಿದ್ದು, ಬೆಳೆದ್ದದ್ದು, ಶಿಕ್ಷಣ ಪಡೆದುಕೊಂಡಿದ್ದು ಹುಬ್ಬಳ್ಳಿಯಲ್ಲೇ. ತಂದೆ ಗಣಪತಿ ಅಕ್ಕಸಾಲಿಗ ಮತ್ತು ತಾಯಿ ಮಂಗಲಾ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ. ಸದ್ಯ ಮುರಾರ್ಜಿ ಕಾಲೊನಿಯಲ್ಲಿ ವಾಸಿಸುತ್ತಿರುವ ಪ್ರಿಯಾಂಕ, ಗೋಕುಲ ರಸ್ತೆಯಲ್ಲಿರುವ ಅಪ್ಟೆಕ್‌ ಏವಿಯೇಷನ್‌ನಲ್ಲಿ ಸೆಂಟ್ರಲ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರಶಿಕ್ಷಣದ ಮೂಲಕ ಸೈಕಾಲಜಿ ಕಲಿತಿದ್ದು, ವಿದ್ಯಾನಗರದಲ್ಲಿ ‘ಬ್ರೇನ್‌ ಚೆಕರ್‌’ ಎಂಬ ತಮ್ಮದೇ ಆದ ಸ್ವಂತ ಕೌನ್ಸಲಿಂಗ್‌ ಸೆಂಟರ್‌ ನಡೆಸುತ್ತಾ, ಮಕ್ಕಳ ಆಪ್ತ ಸಮಾಲೋಚಕಿ ಆಗಿಯೂ ಕಾರ್ಯನಿರ್ವವಹಿಸುತ್ತಿದ್ದಾರೆ.

‘ಚಿಕ್ಕಂದಿನಿಂದಲೂ ಮೇಕಪ್‌ ಮಾಡಿಕೊಳ್ಳುವುದು, ವಿಭಿನ್ನವಾದ ಬಟ್ಟೆ ಹಾಕಿಕೊಳ್ಳುವುದೆಂದರೆ ತುಂಬಾ ಇಷ್ಟ. ಮಾಡೆಲ್‌ ಆಗಬೇಕೆನ್ನುವುದು ಕನಸಾಗಿತ್ತು. ಹಾಡು ಕೇಳುವುದು ಮತ್ತು ನೃತ್ಯ ಮಾಡುವುದು ಕೂಡ ತುಂಬಾ ಇಷ್ಟ. ಚಿಕ್ಕಂದಿನಿಂದಲ್ಲೆ ನೃತ್ಯ ಮಾಡುವುದು ಹವ್ಯಾಸ ಆಗಿದೆ. ನವರಾತ್ರಿ, ಗಣೇಶೋತ್ಸವ ಮತ್ತಿತ್ತರ ಹಬ್ಬ ಮತ್ತು ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದೆ. ಹಾಗಾಗಿ ಸಹಜವಾಗಿಯೇ ಸ್ಟೇಜ್‌ ಕ್ರೇಜ್‌ ಬೆಳೆಯಿತು. ಅದೇ ಇಂದು ಸಹಾಯವೂ ಆಗಿದೆ’ ಎಂದು ನಗೆಯರಳಿಸಿದರು.

ನಿರೂಪಣೆಯಲ್ಲೂ ಸೈ

ಕನ್ನಡ, ಇಂಗ್ಲಿಷ್‌, ಹಿಂದಿ, ಕೊಂಕಣಿ, ಮರಾಠಿ, ಸಾವಜಿ ಭಾಷೆ ಪರಿಣತಳಾಗಿರುವ ಪ್ರಿಯಾಂಕ ಎಂಟು ವರ್ಷಗಳಿಂದ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದು, ಈಗಾಗಲೇ 300 ಕ್ಕೂ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ದೆಹಲಿ, ಮುಂಬೈ, ಕೊಚ್ಚಿ, ಉದಯಪುರ, ಚಿತ್ರದುರ್ಗ, ರಾಯಚೂರು ಸೇರಿದಂತೆ ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.

ಪ್ರಶಸ್ತಿಗಳು

2016ರಲ್ಲಿ ‘ಮಿಸ್‌ ಇಂಡಿಯಾ ಸೌಥ್‌ ಬ್ಯೂಟಿಫೂಲ್‌ ಸ್ಮೈಲ್‌’, ‘ಮಿಸ್‌ ಭಾರತ ಅರ್ಥ್‌ 2018’, ‘ಇಂಡಿ ರಾಯಲ್‌ ಪ್ರೈಡ್‌ ಆಫ್‌ ನೇಷನ್‌’, ‘ಎಲೈಟ್‌ ಮಿಸ್‌ ಇಂಡಿಯಾ ಅಡ್ವೆಂಚರ್‌ 2015’ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

2012ರಲ್ಲಿ ಮಂಗಳೂರಿನಲ್ಲಿ ನಡೆದ ‘ಮಿಸ್‌ ಮಂಗಳೂರು’ ಮತ್ತು 2014ರಲ್ಲಿ ‘ಮಣಪುರಂ ಮಿಸ್‌ ಸೌಥ್‌ ಇಂಡಿಯಾ’ ಸ್ಪರ್ಧೆಗಳಲ್ಲಿ ಸೆಮಿಫೈನಲಿಸ್ಟ್‌ ಆಗಿ ಭಾಗವಹಿಸಿದ್ದರು.

ಅವಕಾಶಗಳ ಕೊರತೆ

ಕಾಲೇಜಿನ ದಿನಗಳಲ್ಲೇ ಫ್ಯಾಷನ್‌ ಷೋ ಆಯೋಜನೆಗಳ ಬಗ್ಗೆ ಸಿಗುತ್ತಿದ್ದ ಮಾಹಿತಿಯ ಮೇರೆಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಮುಂದೆ ಸೀರಿಯಲ್‌ ಮತ್ತು ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ನಟಿಸುವ ಆಸೆ ಇದೆ. ಆದರೆ ಮಾಹಿತಿಯ ಕೊರತೆಯಿಂದ ಅವಕಾಶಗಳು ಕೈತಪ್ಪುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಾಣಿ ಪ್ರಿಯೆ

ಕಳೆದ 8 ವರ್ಷದಿಂದ ದಿನ ಬೆಳಿಗ್ಗೆ 7ರಿಂದ 10ಗಂಟೆವೆರೆಗೆ ವಿದ್ಯಾನಗರದಿಂದ ಗೋಕುಲ ರಸ್ತೆಯಲ್ಲಿರುವ ಸುಮಾರು 50ರಿಂದ 70 ಬೀದಿ ನಾಯಿಗಳಿಗೆ ಆಹಾರ ಹಾಕುವುದು ಮತ್ತು ಗೋವುಗಳಿಗೆ ಮೇವಿನ ಕೊರತೆಯಿದ್ದಾಗ ಮೇವು ತರಿಸಿಕೊಡುವುದು ಪ್ರಿಯಾಂಕ ಅವರ ದಿನಚರಿ. ಅದೇ ರೀತಿ ಆಕಳ, ನಾಯಿ, ಹಂದಿ, ಪಕ್ಷಿ, ಬೆಕ್ಕು ಯಾವುದೇ ಪ್ರಾಣಿಗಳಿಗೆ ತೊಂದರೆ ಆದರೂ, ಜನರು ಪ್ರಿಯಾಂಕ ಅವರಿಗೆ ಕರೆ ಮಾಡಿ ತಿಳಿಸುತ್ತಾರೆ. ಸ್ವಂತ ಖರ್ಚಿನಲ್ಲಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸುತ್ತಾರೆ.

ಅವರ ಈ ಕಾರ್ಯ ಮೆಚ್ಚಿ 2018ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿಶ್‌ ಚಿಂಚೊರೆ ಮೆಮೊರಿಯಲ್‌ ಫೌಂಡೆಷನ್‌ ವತಿಯಿಂದ ‘ಆ್ಯನಿಮಲ್‌ ಆ್ಯಕ್ಟಿವಿಸ್ಟ್‌’ ಎಂಬ ಅವಾರ್ಡ್‌ ನೀಡಿ ಗೌರವಿಸಿದೆ.

6 ವರ್ಷಗಳ ಹಿಂದೆ ಸಂಜೆ ಕಾಲೇಜಿನಿಂದ ಮನೆಗೆ ಹೋಗುವಾಗ ವಿಷ ಪದಾರ್ಥ ಸೇವಿಸಿದ ನಾಯಿ ಸಾವು–ಬದುಕಿನ ಮಧ್ಯೆ ಹೋರಾಡುತ್ತಿತ್ತು. ಅದರ ಪ್ರಾಣ ಉಳಿಸಲು ಸಹಾಯಕ್ಕಾಗಿ ಕೂಗಿದಾಗ ಯಾರೊಬ್ಬರು ಬರಲಿಲ್ಲ. ಏನು ಮಾಡಬೇಕಂತ ತಿಳಿಯದೇ ರಸ್ತೆ ಮಧ್ಯೆನೇ ಅಳುತ್ತಾ ಕುಳಿತುಬಿಟ್ಟೆ. ಹೇಗಾದ್ರೂ ಮಾಡಿ ಅದರ ಪ್ರಾಣ ಉಳಿಸಬೇಕಂತ ತೀರ್ಮಾನಿಸಿ ಒಬ್ಬಳೆ ಅದನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದೆ. ಅದು ಬದುಕಿತು ಒಂದು ಜೀವ ಉಳಿಸಿದ ಸಾರ್ಥಕತೆ, ನೆಮ್ಮದಿ ಸಿಕ್ಕಿತು ಎಂದು ಮಾತಿಗೆ ವಿರಾಮವಿಟ್ಟರು.

ಪ್ರಾಣಿಗಳಿಗೆ ಶೇ 95ರಷ್ಟು ಸಂಬಳ

ಬಹುಮುಖ ಪ್ರತಿಭೆಯಾಗಿರುವ ಪ್ರಿಯಾಂಕ, ಯಾರಿಂದಲೂ ಆರ್ಥಿಕ ಸಹಾಯ ಪಡೆಯದೇ, ತಮ್ಮ ತಿಂಗಳಿನ ಸಂಬಳದ ಶೇ 95ರಷ್ಟನ್ನು ಪ್ರಾಣಿಗಳ ಸೇವೆಗೆ ಮತ್ತು ಸಮಾಜ ಸೇವೆಗಾಗಿ ಖರ್ಚು ಮಾಡಿ, ಉಳಿದದ್ದನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಳ್ಳುತ್ತೇನೆ ಎನ್ನುತ್ತಾರೆ.

ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭೆಗಳಿವೆ ಆದರೆ ಸರಿಯಾದ ವೇದಿಕೆನೂ ಸಿಗುತ್ತಿಲ್ಲ, ಪ್ರೋತ್ಸಾಹನೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪ್ರಿಯಾಂಕ, ಇಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅವರನ್ನು ದೇಶಕ್ಕೆ ಪರಿಚಯಿಸುವುದು ನನ್ನ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಮುಂದೆ ಎನ್‌ಜಿಒ ಒಂದನ್ನು ಆರಂಭಿಸಿ ಆ ಮೂಲಕ ಪ್ರೋತ್ಸಾಹ ನೀಡಬೇಕೆಂಬ ಆಸೆಯೂ ಇದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು