ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಹೇಳಿಕೆ ನೀಡಿದ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಂದು ಹು–ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ವಾದ್ಯ–ಮೇಳ ಮತ್ತು ಭಜನಾ ತಂಡದೊಂದಿಗೆ ಕುಮಾರಸ್ವಾಮಿ ಅವರ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಸಭೆ ನಡೆಸಿ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಹರಿಹಾಯ್ದರು. ನಂತರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ‘ಸಚಿವ ಜೋಶಿ ಅವರನ್ನು ಉದ್ದೇಶಪೂರ್ವಕವಾಗಿ ಕುಮಾರಸ್ವಾಮಿ ಜಾತಿ ಹೆಸರಲ್ಲಿ ನಿಂದನೆ ಮಾಡಿದ್ದಾರೆ. ಪೇಶ್ವೆ ವಂಶಾವಳಿಯವರು ಎನ್ನುವ ಅವರ ಹೇಳಿಕೆ ಎಲ್ಲಿಂದಲೋ ನಕಲು ಮಾಡಿದಂತಿದೆ. ಮೂವತ್ತು ಸ್ಥಾನದಲ್ಲಿ ಗೆದ್ದು ಬಂದು ಮುಖ್ಯಮಂತ್ರಿಯಾಗುವ ಕನಸು ಕಾಣುವ ಕುಮಾರಸ್ವಾಮಿ, ವೈಯಕ್ತಿಕ ಹಾಗೂ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿರುವುದು ಖಂಡನೀಯ’ ಎಂದರು.
ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಅಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗದೆ ಇದ್ದಿದ್ದರೆ, ಇಂದು ಅವರನ್ನು ಹುಡುಕಬೇಕಿತ್ತು. ಅಧಿಕಾರ ಹಸ್ತಾಂತರ ಮಾಡದೆ ದ್ರೋಹ ಎಸಗಿರುವ ಅವರು, ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಪಕ್ಷದ ವಿಚಾರಧಾರೆ ಇಟ್ಟುಕೊಂಡು ಮಾತನಾಡಬೇಕೇ ಹೊರತು, ವೈಯಕ್ತಿಕ ಹಾಗೂ ಜಾತಿ ವಿಷಯ ಇಟ್ಟುಕೊಂಡು ಮಾತನಾಡಬಾರದು. ಜನತೆ ನಿಮ್ಮನ್ನು ಕ್ಷಮಿಸದೆ, ವಿಳಾಸವಿಲ್ಲದೆ ಕಿತ್ತೊಗೆಯುತ್ತದೆ’ ಎಂದು ಹೇಳಿದರು.
ಶಿವಾನಂದ ಮುತ್ತಣ್ಣವರ, ಡಾ. ಕ್ರಾಂತಿಕಿರಣ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ವೆಂಕಟೇಶ ಮೇಸ್ತ್ರಿ ಮಾತನಾಡಿದರು. ಶಂಕರಣ್ಣ ಬಿಜವಾಡಿ, ಬಸವರಾಜ ಅಮ್ಮಿನಭಾವಿ, ಶಶಿಕುಮಾರ ಬಿಜವಾಡ, ಮಾರುತಿ ಚಾಕಲಬ್ಬಿ, ಶಿವಯ್ಯ ಸ್ವಾಮೀಜಿ, ಲಕ್ಷ್ಮಿಕಾಂತ ಘೋಡಕೆ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.