ಶನಿವಾರ, ಜುಲೈ 2, 2022
25 °C
ವಿಮಾನ ನಿಲ್ದಾಣ ಅಭಿವೃದ್ಧಿಗೆ ಮನೆ ಕಳೆದುಕೊಂಡವರಿಗೆ ಮನೆ ನೀಡಲು ಆಗ್ರಹ

ಹುಬ್ಬಳ್ಳಿ: ಬೆಲ್ಲದ ಮನೆ ಮುಂದೆ ನಿವಾಸಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಮನೆ ಕಳೆದುಕೊಂಡ 188 ಮಂದಿಗೆ ಆಶ್ರಯ ಮನೆಗಳನ್ನು ನೀಡಬೇಕು ಹಾಗೂ ಸ್ಥಳೀಯ ನಿವಾಸಿಗಳಿಗೆ ಮನೆಯನ್ನು ನೋಂದಣಿ ಮಾಡಿಕೊಡಬೇಕು ಎಂದು ಆಗ್ರಹಿಸಿ, ಧಾರವಾಡ ಜಿಲ್ಲಾ ಆಶ್ರಯ ಮನೆ ಬಡಾವಣೆಗಳ ಸಂಘದ ಸದಸ್ಯರು ಗೋಕುಲ ರಸ್ತೆಯಲ್ಲಿರುವ ಶಾಸಕ ಅರವಿಂದ ಬೆಲ್ಲದ ಮನೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಬೆಲ್ಲದ ಅವರ ಮನೆ ಎದುರು ಜಮಾಯಿಸಿದ ಗೋಕುಲದ ಜಗದೀಶನಗರ, ತಾರಿಹಾಳದ ವಾಜಪೇಯಿ ನಗರ ಹಾಗೂ ರಾಮನಗರದ ನಿವಾಸಿಗಳು ಬೆಲ್ಲದ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

‘ಬೇಡಿಕೆಗಳ ಕುರಿತು ಈಗಾಗಲೇ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ನಾಲ್ಕೈದು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸಂಘದ ಅಧ್ಯಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಅಸಮಾಧಾನ ವ್ಯಕ್ತಪಡಿಸಿದರು.

‘ವಸತಿ ಯೋಜನೆಯ ಎಲ್ಲಾ ಫಲಾನುಭವಿಗಳ ಸಾಲಮನ್ನಾ ಪತ್ರ ವಿತರಿಸಬೇಕು, ಹೊಸದಾಗಿ ನಿರ್ಮಿಸುತ್ತಿರುವ ಆಶ್ರಯ ಮನೆಗಳ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಆ ಕುರಿತು ಸಿಐಡಿಯಿಂದ ತನಿಖೆ ನಡೆಸಬೇಕು, ಈಗಾಗಲೇ ನಿಧನರಾಗಿರುವ ಫಲಾನುವಿಗಳ ಹೆಸರಿನಲ್ಲಿರುವ ಮನೆಗಳನ್ನು ಅವರ ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಹಾಗೂ ಆಶ್ರಯ ಕಾಲೊನಿಯಗಳಲ್ಲಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ವಾರದ ಹಿಂದೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದಾಗ, ಸ್ಥಳದಲ್ಲಿದ್ದ ಬೆಲ್ಲದ ಅವರು ಮೇ 19ರಂದು ಮನೆಗೆ ಬಂದು ಮನವಿ ಸಲ್ಲಿಸಲು ಸೂಚಿಸಿದ್ದರು. ಇಂದು ಮನವಿ ಕೊಡಲು ಹೋದಾಗ ನಮ್ಮನ್ನು ನಿರ್ಲಕ್ಷಿಸಿದರು. ಅದನ್ನು ಖಂಡಿಸಿ ಮನೆ ಎದುರೇ ಕುಳಿತು ಪ್ರತಿಭಟಿಸಿದೆವು. ನಂತರ ಮನವಿ ಸ್ವೀಕರಿಸಿದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಿದೆವು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು