ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲಿಯೇ ಕೊಳೆಯುತ್ತಿದೆ ಮೂಲಂಗಿ!

ಗಾಮನಗಟ್ಟಿ: ಅಕಾಲಿಕ ಮಳೆಗೆ ತುತ್ತಾದ ಮೂಲಂಗಿ ಬೆಳೆ
Last Updated 24 ಮೇ 2022, 4:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ದಿನ ಸುರಿದ ಅಕಾಲಿಕ ಮಳೆಗೆ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದ ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಮೂಲಂಗಿ ಬೆಳೆ ಸಂಪೂರ್ಣ ಹಾಳಾಗಿದೆ. ಗಡ್ಡೆಗಳೆಲ್ಲ ಕೊಳೆತು ಗೊಬ್ಬರವಾಗುತ್ತಿದೆ.

ಗ್ರಾಮದಲ್ಲಿನ ಅನೇಕ ರೈತರು ಬೇಸಿಗೆಯಲ್ಲಿ ಮೂಲಂಗಿ ಬೆಳೆದಿದ್ದರು. ಒಂದೂವರೆ ತಿಂಗಳ ಆರೈಕೆಯಲ್ಲಿ ಮೂಲಂಗಿ ಹುಲುಸಾಗಿಯೇ ಬೆಳೆದಿತ್ತು. ವಾರ ಕಳೆದರೆ ಸೊಪ್ಪು ಸಹಿತ ಗಡ್ಡೆಗಳನ್ನು ಕಿತ್ತು ಮಾರಾಟ ಮಾಡುತ್ತಿದ್ದರು. ಅಷ್ಟರಲ್ಲಿಯೇ ಅಕಾಲಿಕ ಮಳೆ ಸುರಿದು, ಬೆಳೆಯನ್ನೆಲ್ಲ ಆಪೋಶನ ತೆಗೆದುಕೊಂಡಿತು. ಹೊಲದಲ್ಲಿ ನೀರು ನಿಂತು ಗಡ್ಡೆಗಳೆಲ್ಲ ಕೊಳೆಯುತ್ತಿವೆ. ಇನ್ನೊಂದೆರಡು ದಿನಗಳಲ್ಲಿ ರೈತರು ಹೊಲಕ್ಕೆ ಕುಂಟೆ ಹೊಡೆದು, ಮತ್ತೊಂದು ಬೆಳೆಗೆ ಭೂಮಿ ಹದಗೊಳಿಸಲು ಮುಂದಾಗಿದ್ದಾರೆ.

ಗ್ರಾಮದ ರೈತರು ಮೂಲಂಗಿ ಜೊತೆ ಪಾಲಾಕ್‌, ಪುದೀನಾ, ಹರಗಿ ಸೊಪ್ಪು ಸಹ ಬೆಳೆದಿದ್ದಾರೆ. ಅವುಗಳ ಕಥೆಯೂ ಮೂಲಂಗಿ ಬೆಳೆಗಿಂತ ಭಿನ್ನವಾಗಿಲ್ಲ. ಮಳೆಗೆ ಅವು ಸಹ ನೆಲಕಚ್ಚಿವೆ. ಹುಲುಸಾಗಿ ಬೆಳೆದ ಪಾಲಾಕ್‌, ಹುಣಚೆ ಸೊಪ್ಪು ನೀರಿನ ಹರಿವಿನ ರಭಸಕ್ಕೆ ಮಣ್ಣಿನಡಿ ಹೂತು ಹೋಗಿವೆ. ಜತೆಗೆ ಕೀಟಬಾಧೆ ಸಹ ಕಾಡುತ್ತಿದೆ. ಅವುಗಳಲ್ಲಿಯೇ ಉತ್ತಮವಾಗಿರುವುದನ್ನು ಆಯ್ದು, ಕಟ್ಟು ಕಟ್ಟಿ ಮಾರುಕಟ್ಟೆಗೆ ಒಯ್ಯುತ್ತಿದ್ದಾರೆ.

‘ಮೂವತ್ತು ವರ್ಷಗಳಿಂದ ತರಕಾರಿ, ಸೊಪ್ಪು ಬೆಳೆಯುತ್ತಿದ್ದೇವೆ. ಮಳೆಗಾಲದಲ್ಲಿ ಹೊಲದಲ್ಲಿ ನೀರು ನಿಂತು ಮೂಲಂಗಿ ಗಡ್ಡೆ ಕೊಳೆಯುತ್ತದೆ ಎಂದು, ಬೇಸಿಗೆಯಲ್ಲಿಯೇ ಅದನ್ನು ಹೆಚ್ಚಾಗಿ ಬೆಳೆಯುತ್ತೇವೆ. ಆದರೆ, ಈ ವರ್ಷ ಅನಿರೀಕ್ಷಿತವಾಗಿ ಮಳೆ ಸುರಿದು ಹೊಲದಲ್ಲಿ ನೀರು ನಿಲ್ಲುವಂತಾಯಿತು. ಪರಿಣಾಮ, ಕೊಯ್ಲಿಗೆ ಬಂದ ಮೂಲಂಗಿ ಬೆಳೆ ಅಲ್ಲಿಯೇ ಕೊಳೆಯುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ’ ಎಂದು ರೈತ ಶಿವಾನಂದ ಮಾಳಣ್ಣವರ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಎರಡು ಎಕರೆ ಜಾಗದಲ್ಲಿ ಒಂದು ಕೆ.ಜಿ. ಮೂಲಂಗಿ ಬೀಜಕ್ಕೆ ₹2 ಸಾವಿರದಂತೆ ₹6 ಸಾವಿರ ವೆಚ್ಚ ಮಾಡಿ ಮೂರು ಕೆ.ಜಿ. ಬೀಜ ಬಿತ್ತನೆ ಮಾಡಿದ್ದೆ. ಗೊಬ್ಬರ, ಆಳು, ಕೀಟನಾಶಕ ಔಷಧ ಎಂದು ಅಂದಾಜು ₹30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಬೆಳೆ ಚೆನ್ನಾಗಿಯೇ ಬಂದಿತ್ತು. ಅಂದಾಜು 60 ಸಾವಿರ ಗಡ್ಡೆಗಳು ಸಿಗುವ ನಿರೀಕ್ಷೆ ಇತ್ತು. ಒಂದೊಂದು ಗಡ್ಡೆ ₹3 ರಿಂದ ₹5ಗೆ ಮಾರಾಟವಾಗುತ್ತಿತ್ತು. ಆದರೆ, ಅಕಾಲಿಕ ಮಳೆ ಅವೆಲ್ಲವನ್ನು ಕಸಿದುಕೊಂಡಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆಯುವ ಪ್ರದೇಶ ಹುಬ್ಬಳ್ಳಿ ಭಾಗದಲ್ಲಿ ಇದೆ ಎಂದರೆ ಅದು ಗಾಮನಗಟ್ಟಿ ಗ್ರಾಮ ಮಾತ್ರ. ವರ್ಷಪೂರ್ತಿ ಇಲ್ಲಿ ಹದಿನೈದು ಬಗೆಯ ತರಕಾರಿ, ಸೊಪ್ಪು ಬೆಳೆಯುತ್ತೇವೆ. ಅತಿವೃಷ್ಟಿ ಹಾಗೂ ಕೀಟಬಾಧೆಯಿಂದ ಪ್ರತಿವರ್ಷ ಐದಾರು ಬೆಳೆಗಳು ಹಾಳಾಗುತ್ತವೆ. ಈ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನವಿಲ್ಲ. ಒಮ್ಮೆ ಗ್ರಾಮಕ್ಕೆ ಬಂದು ಮಣ್ಣು, ಬೆಳೆ ಪರಿಶೀಲಿಸಿದರೆ ಉತ್ತಮ ಬೆಳೆ ಬೆಳೆಯಲು ಮಾರ್ಗೋಪಾಯಗಳಾದರೂ ದೊರೆಯುತ್ತಿತ್ತು’ ಎಂದು ಗ್ರಾಮದ ರೈತ ಇಬ್ರಾಹಿಮ್‌ ಹೇಳುತ್ತಾರೆ.

‘ಪರಿಹಾರ ನೀಡಿದರೆ ರೈತರ ಖಾತೆಗೆ ಜಮಾ’

‘ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬೇಸಿಗೆ ಅವಧಿಯಲ್ಲಿ ಯಾವ ಭಾಗದಲ್ಲಿ, ಯಾವ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೋ ಅವೆಲ್ಲವನ್ನೂ ಈಗಾಗಲೇ ಸಮೀಕ್ಷೆ ಮಾಡಿ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಿದ್ದೇವೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿಗಾಗಿರುವುದಕ್ಕೆ ಸರ್ಕಾರ ಪರಿಹಾರವೇನಾದರೂ ಘೋಷಣೆ ಮಾಡಿದರೆ, ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗುತ್ತದೆ’ ಎಂದು ಹುಬ್ಬಳ್ಳಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ ರಾಗಿ ತಿಳಿಸಿದರು.

***

ಅಕಾಲಿಕ ಮಳೆಯಿಂದ ನೀರು ಹೆಚ್ಚಾಗಿ ಪುದೀನಾ ಬೆಳೆಯ ಕಾಂಡ ಕುಂಠಿತಗೊಂಡಿದೆ. ಏಳು–ಎಂಟು ಗಿಡಗಳನ್ನು ಒಂದು ಕಟ್ಟು ಮಾಡುವ ಬದಲು, ದುಪ್ಪಟ್ಟು ಗಿಡಗಳನ್ನು ಸೇರಿಸಿ ಕಟ್ಟು ಮಾಡಬೇಕಾಗಿದೆ
–ಇಬ್ರಾಹಿಮ್‌, ರೈತ, ಗಾಮನಗಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT