ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರಕ್ಕೆ ಹುಬ್ಬಳ್ಳಿ ತತ್ತರ; ಮರ ಬಿದ್ದು ಆಟೊ ಪ್ರಯಾಣಿಕ ಸಾವು

ಜಖಂಗೊಂಡ ವಾಹನಗಳು; ಕುಸಿದ ಮನೆಯ ಗೋಡೆಗಳು
Last Updated 5 ಮೇ 2022, 2:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆ ಆರ್ಭಟಕ್ಕೆ ಆಟೊ ಮೇಲೆ ಮರ ಬಿದ್ದಿದ್ದರಿಂದ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ. ಧರೆಗುಳಿದ ಮರಗಳು, ಕೊಂಬೆಗಳು ಹಾಗೂ ವಿದ್ಯುತ್ ಕಂಬಗಳಿಂದಾಗಿ ಅನೇಕ ವಾಹನಗಳು ಜಖಂಗೊಂಡಿವೆ. ಕೆಲವೆಡೆ ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ಗೋಡೆಗಳು ನೆಲಕ್ಕುರುಳಿವೆ.

ಹಳೇ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದ ರಾಬಿನ್ ಮೊರಿಸ್ ಮೃತಪಟ್ಟವರು. ಪೇಂಟರ್ ಆಗಿರುವ ಅವರು ಸಂಜೆ ಕೆಲಸ ಮುಗಿಸಿಕೊಂಡು ದೇಸಾಯಿ ವೃತ್ತದ ಪಿಂಟೊ ರಸ್ತೆ ಮಾರ್ಗವಾಗಿ ಆಟೊದಲ್ಲಿ ಮನೆಗೆ ಹೋಗುವಾಗ ಘಟನೆ ನಡೆದಿದ್ದು, ಚಾಲಕ ಗಾಯಗೊಂಡಿದ್ದಾರೆ.

ಆಟೊ ಹಿಂದೆಯೇ ಬರುತ್ತಿದ್ದ ಕಾರಿನ ಮೇಲೂ ಮರ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಚಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶಶಿಧರ ಮಾಡ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಜೆ 6ರ ಸುಮಾರಿಗೆ ಭಾರೀ ಗಾಳಿ, ಗುಡುಗು ಹಾಗೂ ಮಿಂಚಿನೊಂದಿಗೆ ಶುರುವಾದ ಮಳೆ ಅರ್ಧ ತಾಸು ಸುರಿಯಿತು. ಗಾಳಿಯ ಅಬ್ಬರಕ್ಕೆ ಪ್ಲೆಕ್ಸ್‌ಗಳು ನೆಲ ಕಚ್ಚಿದವು. ಮನೆಗಳ ಹೆಂಚುಗಳ ಹಾಗೂ ಕೆಲ ಗೂಡಂಗಡಿಗಳಿಗೆ ಹಾಕಿದ್ದ ತಗಡುಗಳು ಹಾರಿ ಹೋದವು. ಛತ್ರಿ ಹಿಡಿದು ಸಹ ಸಾಗಲು ಸಾಧ್ಯವಾಗದಂತೆ ಗಾಳಿ ಬೀಸಿತು. ನೀರು ಕಟ್ಟಿಕೊಂಡಿದ್ದರಿಂದ ಕೆಲ ರಸ್ತೆಗಳು ಹಳ್ಳಗಳಾಗಿ ಮಾರ್ಪಟ್ಟವು.

ವಿದ್ಯುತ್ ಕಂಬಗಳು ನೆಲಕ್ಕೆ:

ಶಾಂತಿ ಕಾಲೊನಿಯಲ್ಲಿ ಬೃಹತ್ ಮರವೊಂದು ಧರೆಗುರುಳಿರುವುದರಿಂದ, ಮೂರು ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡವಾಗಿ ನೆಲಕ್ಕುರುಳಿವೆ. ಈ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಜೊತೆಗೆ, ಕಿಮ್ಸ್ ಹಿಂಭಾಗವೂ ಕಂಬವೊಂದು ಮುರಿದು ಹೋಗಿದೆ. ಗೋಕುಲ ರಸ್ತೆಯಲ್ಲಿಯೂ ನಾಲ್ಕೈದು ಕಂಬಗಳು ಮುರಿದಿರುವ ವರದಿಯಾಗಿದೆ.

ಹಳೇ ಹುಬ್ಬಳ್ಳಿಯಲ್ಲಿ ಮೂರ್ನಾಲ್ಕು ಮನೆಗಳ ಗೋಡೆಗಳು ಮಳೆಗೆ ಕುಸಿದಿದ್ದು, ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿವೇಕಾನಂದ ನಗರದಲ್ಲಿಸಿಡಿಲು ಬಡಿದಿದ್ದರಿಂದ ಎರಡು ತೆಂಗಿನ ಮರಗಳು ಹೊತ್ತಿ ಉರಿದಿವೆ. ತತ್ವದರ್ಶಿ ಆಸ್ಪತ್ರೆಯ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದ್ದು, ಕಾರಿನಲ್ಲಿದ್ದವರು ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ.

ಮರದಡಿ ಸಿಲುಕಿದ ಗೂಡಂಗಡಿ:

ವಿದ್ಯಾನಗರದ ಓಲ್ಡ್ ಇನ್‌ಕಮ್ ಟ್ಯಾಕ್ಸ್ ರಸ್ತೆಯ ಬದಿ ಪಾನಿಪೂರಿ ಮಾರಾಟ ಮಾಡುವ ಗೂಡಂಗಡಿ ಮೇಲೆ ಮರ ಬಿದ್ದಿದೆ. ಮಳೆಯಿಂದಾಗಿ ಅಂಗಡಿಯವರು ಪಕ್ಕದ ಕಟ್ಟಡದ ಬಳಿ ಆಶ್ರಯ ಪಡೆದಿದ್ದರಿಂದಾಗಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಇನ್ನು ಹೊಸ ಕೋರ್ಟ್ ಸಂಕೀರ್ಣದ ಹಿಂಭಾಗ ಬೀಡು ಬಿಟ್ಟಿದ್ದ ಹುಬ್ಬಳ್ಳಿ ವಸ್ತು ಪ್ರದರ್ಶನದ ಸ್ಥಳದಲ್ಲಿದ್ದ ಅಂಗಡಿಗಳು ಹಾಗೂ ಆಟಿಕೆಗಳು ಮಳೆ ಮತ್ತು ಗಾಳಿ ಆರ್ಭಟಕ್ಕೆ ಚೆಲ್ಲಾಪಿಲ್ಲಿಯಾಗಿವೆ. ಘಟನೆಯಲ್ಲಿ ಅಲ್ಲಿದ್ದ ಕಾರ್ಮಿಕರೊಬ್ಬರ ಕಾಲಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಚಾರ ಅಸ್ತವ್ಯಸ್ಥ:

ವಿವಿಧೆಡೆ ಮರಗಳು ಧರೆಗುರುಳಿದ್ದರಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ಥವಾಯಿತು. ದೇಶಪಾಂಡೆ ನಗರ, ಪಿಂಟೊ ರಸ್ತೆ, ವಿದ್ಯಾನಗರ, ಹಬ್ಬಳ್ಳಿ–ಧಾರವಾಡ ರಸ್ತೆ, ಶಿರೂರು ಪಾರ್ಕ್, ಗೋಕುಲ ರಸ್ತೆ, ಕೇಶ್ವಾಪುರ, ಗೋಪನಕೊಪ್ಪ, ಅಶೋಕನಗರ, ವಿಶ್ವೇಶ್ವರ ನಗರ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು. ಕೆಲವೆಡೆ ಮರಗಳ ತೆರವು ತಡವಾಗಿದ್ದರಿಂದಾಗಿ ಸವಾರರು ರಸ್ತೆಯಲ್ಲೇ ಕೆಲ ಹೊತ್ತು ಕಳೆಯಬೇಕಾಯಿತು.

70ಕ್ಕೂ ಹೆಚ್ಚು ಮರಗಳು ಧರೆಗೆ

ಮಳೆ ಅಬ್ಬರಕ್ಕೆ ದೇಶಪಾಂಡೆ ನಗರ, ಪಿಂಟೊ ರಸ್ತೆ, ದೇಸಾಯಿ ವೃತ್ತ, ವಿದ್ಯಾನಗರ, ಶಾಂತಿ ಕಾಲೊನಿ, ಹಳೇ ಹುಬ್ಬಳ್ಳಿ, ಗುಜರಾತ್ ಭವನ, ರಾಜನಗರ, ಗುರುದೇವನಗರ, ಅಶೋಕ ನಗರ, ವಿಶ್ವೇಶ್ವರ ನಗರ, ಕೇಶ್ವಾಪುರ, ಶಕ್ತಿ ಕಾಲೊನಿ ಸೇರಿದಂತೆ ಹಲವೆಡೆ 70ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

ಬಹುತೇಕ ಕಡೆ ರಸ್ತೆ ಬದಿ, ಮನೆ ಹಾಗೂ ಕಟ್ಟಡಗಳ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರ ವಾಹನಗಳ ಮೇಲೆ ಮರಗಳು ಬಿದ್ದಿದ್ದರಿಂದ ವಾಹನಗಳು ಜಖಂಗೊಂಡಿವೆ. ಕೆಲ ವಾಹನಗಳು ಸಂಪೂರ್ಣ ಹಾನಿಯಾಗಿದ್ದರೆ, ಉಳಿದವು ಭಾಗಶಃ ಹಾನಿಗೊಂಡಿವೆ. ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಮರಗಳಡಿಯಿಂದ ಎಳೆಯುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

‘ವಿವಿಧೆಡೆ 70ಕ್ಕೂ ಹೆಚ್ಚು ಮರಗಳು ಧರೆಗುರುಳಿರುವೆ. ಎಲ್ಲಾ ಕಡೆಗೂ ತುರ್ತು ನಿರ್ವಹಣಾ ಸಿಬ್ಬಂದಿಯನ್ನು ಕಳಿಸಿ, ರಸ್ತೆಗೆ ಅಡ್ಡವಾಗಿ ಮತ್ತು ವಾಹನಗಳ ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕರು ಕೂಡ ಕರೆ ಮಾಡಿ ವಿಷಯ ತಿಳಿಸುತ್ತಿದ್ದು, ಹೆಚ್ಚಿನ ಹಾನಿಯಾಗಿರುವ ಸ್ಥಳಗಳಲ್ಲಿ ಮೊದಲಿಗೆ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ’ ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT