ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಬೀಳುವ ಮರ, ಕೊಂಬೆಗಳು ತೆರವು ಯಾವಾಗ?

ಮಳೆ: ಹಲವೆಡೆ ಜೋತು ಬಿದ್ದ ಮರದ ಟೊಂಗೆ, ವಿದ್ಯುತ್ ತಂತಿ: ಅನಾಹುತಕ್ಕೂ ಮುನ್ನ ತೆರವಿಗೆ ಸಾರ್ವಜನಿಕರ ಆಗ್ರಹ
Published 10 ಜೂನ್ 2024, 5:54 IST
Last Updated 10 ಜೂನ್ 2024, 5:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿರು ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮೇ ಮೊದಲ ವಾರದಿಂದ ಆಗಾಗ್ಗೆ ಸುರಿಯುತ್ತಿರುವ ಮಳೆ ನೆಮ್ಮದಿ ತಂದಿದೆ. ಹಸಿರು ಚಿಗುರುವಂತೆ ಮಾಡಿದೆ. ಈ ನಡುವೆ ಮಳೆ, ಗಾಳಿಗೆ ರಸ್ತೆ ಬದಿಯ ಮರಗಳು, ರೆಂಬೆ– ಕೊಂಬೆಗಳು ಮುರಿದು ಬೀಳುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.

ಪ್ರತಿ ಸಲ ರಭಸವಾದ ಮಳೆ– ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಾಕಷ್ಟು ಅನಾಹುತ ಸೃಷ್ಟಿಸುತ್ತವೆ. ಮನೆ, ವಾಹನಗಳ ಮೇಲೆ ಬಿದ್ದು ಅಪಾರ ನಷ್ಟ ಉಂಟು ಮಾಡುತ್ತವೆ. ಮಳೆಯಲ್ಲಿ ಓಡಾಡುವ ಜನ, ಜಾನುವಾರುಗಳು, ಸಂಚರಿಸುವ ವಾಹನಗಳ ಮೇಲೆ ಬಿದ್ದು ಸಾವು, ನೋವುಗಳಾಗುತ್ತವೆ.

ಮುಂಗಾರು ಪೂರ್ವ ಮಳೆಗೆ ಹುಬ್ಬಳ್ಳಿ– ಧಾರವಾಡ ನಗರದಲ್ಲಿ 158 ಮರಗಳ ರೆಂಬೆ, ಕೊಂಬೆಗಳು,  35 ಮರಗಳು ಸಂಪೂರ್ಣ ನೆಲಕಚ್ಚಿದ್ದವು. ನೂರಾರು ಕಡೆಗೆ ವಿದ್ಯುತ್ ತಂತಿಗಳು ಕಿತ್ತುಬಿದ್ದು, ಕಂಬಗಳು ನೆಲಕ್ಕುರರುಳಿದ್ದವು.

ಮೇ 11ರಂದು ಸುರಿದ ಮಳೆಗೆ ಒಂದೇ ದಿನ ಹುಬ್ಬಳ್ಳಿಯ ವಿದ್ಯಾನಗರ, ಶಿರೂರು ಪಾರ್ಕ್, ಹೊಸೂರು, ಗೋಕುಲ ರಸ್ತೆ, ಹಳೆ ಹುಬ್ಬಳ್ಳಿ, ಕುಸುಗಲ್ ರಸ್ತೆ, ಕೇಶ್ವಾಪುರ, ದೇಶಪಾಂಡೆ ನಗರ, ಹೆಗ್ಗೇರಿ, ಕಿಮ್ಸ್‌ ಹಿಂಭಾಗ, ಹೊಸೂರು, ಹಳೆ ಹುಬ್ಬಳ್ಳಿ, ಸೋನಿಯಾ ಗಾಂಧಿ ನಗರ, ಬಿಡನಾಳ, ಕರ್ಕಿ ಬಸವೇಶ್ವರ ನಗರ, ಜಯನಗರ, ಜೆ.ಸಿ ನಗರ ಹಾಗೂ ಧಾರವಾಡ ಜಯನಗರ, ಸನ್ಮತಿ ನಗರ, ಮಾಳಮಡ್ಡಿ, ಸಿಟಿ ಬಸ್ ನಿಲ್ದಾಣ ಬಳಿ ಸೇರಿದಂತೆ ವಿವಿದೆಡೆ ಮುಖ್ಯರಸ್ತೆ, ಬಡಾವಣೆ ಮಾರ್ಗ ಸೇರಿ 50ಕ್ಕೂ ಹೆಚ್ಚು ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು.

ಕೆಲವೆಡೆ ಮರಗಳು ಉರುಳಿ ಬಿದ್ದು ಬೈಕ್, ಕಾರು ಜಖಂಗೊಂಡಿದ್ದವು. ಕಾಂಪೌಂಡ್, ಗ್ರಿಲ್, ಮನೆಗಳ ಚಾವಣಿ, ಪೆಟ್ಟಿಗೆ ಅಂಗಡಿಗಳಿಗೂ ಹಾನಿ ಆಗಿದ್ದವು. ಹೀಗಾಗಿ ಮಳೆ ಸಂದರ್ಭದಲ್ಲಿ ಸಾರ್ವಜನಿಕರು, ವಾಹನ ಸವಾರರು ಜೀವಭಯದಲ್ಲೇ ಸಾಗುವಂತಾಗಿದೆ.

ಸಂಪೂರ್ಣ ಮಳೆಗಾಲಕ್ಕೂ ಮುನ್ನವೇ ಮಳೆಗೆ ಇಷ್ಟು ಅವಾಂತರ ಸೃಷ್ಟಿಯಾಗಿದೆ. ಇದೀಗ ಮಳೆಗಾಲ ಶುರುವಾಗಿದ್ದು, ಜೋರು ಮಳೆಯಾದರೆ ಇನ್ನೇನು ಗತಿ ಎಂಬ ಆತಂಕ ಜನರದ್ದು. ಹೀಗಾಗಿ ಮಳೆ ಮುನ್ನವೇ ಎಚ್ಚೆತ್ತು ರಸ್ತೆ ಬದಿಯಲ್ಲಿ ಒಣಗಿರುವ, ರಸ್ತೆಗೆ ಚಾಚಿಕೊಂಡಿರುವ, ವಿದ್ಯುತ್ ತಂತಿಗೆ ತಗುಲುವ ಮರ, ಕೊಂಬೆಗಳ ತೆರವಿಗೆ ಪಾಲಿಕೆ ಮುಂದಾಗಬೇಕು ಎಂಬುದು ಜನರ ಆಗ್ರಹವಾಗಿದೆ.

‘ಮಳೆ ಸಂದರ್ಭದಲ್ಲಿ ವಿದ್ಯುತ್ ತಂತಿ, ಕಂಬಗಳು ಬೀಳುವುದರಿಂದ ಗಂಟೆಗಟ್ಟಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ. ಮುನ್ನೆಚ್ಚರಿಕೆಯಾಗಿ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಿಸುವ ಗೋಜಿಗೆ ಹೋಗದ ಹೆಸ್ಕಾಂ ಅಧಿಕಾರಿಗಳು, ವಿದ್ಯುತ್ ತಂತಿ ಹರಿದು ಬಿದ್ದಾಗ, ಅದನ್ನೇ ಜೋಡಿಸಿ ಕೈತೊಳೆದುಕೊಳ್ಳುತ್ತಿದ್ದಾರೆ’ ಎಂಬುದು ಜನರ ಆರೋಪ.

‘ವಿದ್ಯಾನಗರದ ಟೆಂಡರ್‌ಶ್ಯೂರ್ ರಸ್ತೆಯಲ್ಲಿ ಮರದ ಕೊಂಬೆಗಳು ರಸ್ತೆಗೆ ಚಾಚಿಕೊಂಡಿವೆ. ವಿದ್ಯುತ್ ತಂತಿಗೆ ತಗುಲಿವೆ. ಅನಾಹುತ ಸಂಭವಿಸುವ ಮುನ್ನ ಕೊಂಬೆಗಳನ್ನು ಕತ್ತರಿಸಬೇಕಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಮಂಜುನಾಥ.

‘ತಗಡಿನ ಮನೆಯಲ್ಲಿ ಜೀವನ ನಡೆಸುತ್ತೇವೆ. ಇತ್ತೀಚೆಗೆ ಸುರಿದ ರಭಸದ ಮಳೆಗೆ ಪಕ್ಕದಲ್ಲಿದ್ದ ಮರದ ಕೊಂಬೆ ಮನೆಯ ಮೇಲೆಯೇ ಬಿದ್ದಿದ್ದರಿಂದ ಅಪಾರ ನಷ್ಟವುಂಟಾಗಿದೆ. ಅದೃಷ್ಟವಶಾತ್ ಯಾರ ಜೀವಕ್ಕೂ ಹಾನಿಯಾಗಲಿಲ್ಲ ಎನ್ನುವುದೇ ಸಮಾಧಾನ. ಅಪಾಯಕಾರಿ ಮರಗಳನ್ನು ತೆರವು ಮಾಡದಿದ್ದರೆ ಇಂತಹ ಪರಿಸ್ಥಿತಿ ಹಲವೆಡೆ ಮತ್ತೆ ಎದುರಾಗುವುದರಲ್ಲಿ ಅನುಮಾನವಿಲ್ಲ’ ಎನ್ನುತ್ತಾರೆ ಹುಬ್ಬಳ್ಳಿಯ ಗಂಗಾಧರ ನಗರದ ರತ್ನವ್ವ ಸಂಕನಾಳ.

ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಅವರು ಹೇಳೋದೇ ಬೇರೆ. ‘ಮಳೆಯಿಂದ ಬಿದ್ದ ಮರ, ಕೊಂಬೆ ತೆರವು ಮಾಡಲು ನಮ್ಮಲ್ಲಿ ನಿರ್ವಹಣಾ ತಂಡ ಇದೆ. ಸಾರ್ವಜನಿಕರಿಂದ ದೂರು ಬಂದಾಗ ನಮ್ಮ ತಂಡ ಶೀಘ್ರವೇ ಆ ಸ್ಥಳವನ್ನು ತಲುಪಿ ತೆರವು ಮಾಡುತ್ತದೆ. ಆದರೆ ಮಳೆಗೂ ಪೂರ್ವದಲ್ಲಿ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅನುಮತಿ ಬೇಕು’ ಎನ್ನುತ್ತಾರೆ ಅವರು.

ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ, ರಮೇಶ ಓರಣಕರ

ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಳ್ಳಿ ತಾಗಿರುವುದು
ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಳ್ಳಿ ತಾಗಿರುವುದು
ಹುಬ್ಬಳ್ಳಿಯ ದೇಶಪಾಂಡೆ ನಗರದ ರಸ್ತೆಯಲ್ಲಿ ಮರಗಳ ಕೊಂಬೆಗಳು ಚಾಚಿಕೊಂಡಿರುವುದು
ಹುಬ್ಬಳ್ಳಿಯ ದೇಶಪಾಂಡೆ ನಗರದ ರಸ್ತೆಯಲ್ಲಿ ಮರಗಳ ಕೊಂಬೆಗಳು ಚಾಚಿಕೊಂಡಿರುವುದು
ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಮರವೊಂದು ಒಣಗಿದ್ದು ಭಾರಿ ಮಳೆಯಾದರೆ ಕುಸಿಯುವ ಹಂತದಲ್ಲಿದೆ
ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಮರವೊಂದು ಒಣಗಿದ್ದು ಭಾರಿ ಮಳೆಯಾದರೆ ಕುಸಿಯುವ ಹಂತದಲ್ಲಿದೆ
ಈಗಾಗಲೇ ರ್‍ಯಾಪಿಡ್ ಆ್ಯಕ್ಷನ್ ತಂಡ ನಿಯೋಜಿಸಲಾಗಿದೆ. ಅಪಾಯಕಾರಿ ಮರ ರೆಂಬೆ ಕೊಂಬೆ ಹಾಗೂ ವಿದ್ಯುತ್ ತಂತಿ ಜೋತುಬಿದ್ದಿರುವ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ
ದಿವ್ಯಪ್ರಭು ಜಿಲ್ಲಾಧಿಕಾರಿ
ಸಾರ್ವಜನಿಕರು ಮರಗಳ ಹಾಗೂ ಕೊಂಬೆಗಳ ತೆರವುಗೊಳಿಸುವಂತೆ ಮನವಿ ಸಲ್ಲಿಸುತ್ತಾರೆ. ಅರಣ್ಯ ಅಧಿಕಾರಿಗಳ ತಂಡ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಾಯಕಾರಿ ಆಗಿದ್ದರೆ ಮಾತ್ರ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ
ವಿವೇಕ ಕವರಿ ಉಪ ಅರಣ್ಯ ಸಂರಕ್ಷಣಾಧಿಕಾರಿ
ರಸ್ತೆಬದಿಯಲ್ಲಿ ಮುರಿದುಬಿದ್ದ ಮರಗಳ ಟೊಂಗೆಯನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಆದರೆ ಕೆಲವಡೆ ಉದ್ಯಾನಗಳಲ್ಲಿ ಮುರಿದ ಮರದ ಟೊಂಗೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ವಾಯುವಿಹಾರಿಗಳು ತೊಂದರೆ ಅನುಭವಿಸುವಂತಾಗಿದೆ
ಸುರೇಶ ಮಿಸ್ಕಿನ್ ಹುಬ್ಬಳ್ಳಿ ನಿವಾಸಿ
ರಸ್ತೆಬದಿಯಲ್ಲಿ ಮುರಿದುಬಿದ್ದ ಮರಗಳ ಟೊಂಗೆಯನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಆದರೆ ಕೆಲವಡೆ ಉದ್ಯಾನಗಳಲ್ಲಿ ಮುರಿದ ಮರದ ಟೊಂಗೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ವಾಯುವಿಹಾರಿಗಳು ತೊಂದರೆ ಅನುಭವಿಸುವಂತಾಗಿದೆ
ಸುರೇಶ ಮಿಸ್ಕಿನ್ ಹುಬ್ಬಳ್ಳಿ ನಿವಾಸಿ
ವಿದ್ಯಾನಗರದ ಓಲ್ಡ್ ಇನ್‌ಕಮ್ ಟ್ಯಾಕ್ಸ್ ರಸ್ತೆಯ ಬದಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದೆ. ಮಳೆಗೆ ಗೂಡಂಗಡಿ ಮೇಲೆ ಮರ ಬಿದ್ದು ಅಂಗಡಿಯೇ ಹಾಳಾಯಿತು. ಹೊಸ ಗೂಡಂಗಡಿಗಾಗಿ ಇಂದಿಗೂ ಕಷ್ಟಪಡುವಂತಾಗಿದೆ
–ಹೆಸರು ಹೇಳಲಿಚ್ಚಿಸದ ವ್ಯಾಪಾರಿ
ವಿದ್ಯುತ್ ತಂತಿಗೆ ಎಲ್ಲೆಲ್ಲಿ ಮರದ ಕೊಂಬೆಗಳು ತಗುಲುತ್ತಿವೆ ಎಂದು ಪ್ರತಿ ಮಳೆಗಾಲದ ಪೂರ್ವ ಸಮೀಕ್ಷೆ ನಡೆಸಿ ತೆರವುಗೊಳಿಸಲಾಗುತ್ತದೆ. ಈ ಬಾರಿಯೂ ವಾರ್ಡ್‌ವಾರು ಈ ಕೆಲಸ ಪ್ರಗತಿಯಲ್ಲಿದೆ
–ಹೆಸ್ಕಾಂ ಅಧಿಕಾರಿ ಹುಬ್ಬಳ್ಳಿ
ಮರದ ಕೊಂಬೆಗಳು ಬಿದ್ದರೆ ಅದನ್ನು ಪಾಲಿಕೆ ಸಿಬ್ಬಂದಿಯೇ ಬಂದು ತೆರವು ಮಾಡಬೇಕು ಎಂಬ ಮನೋಭಾವವನ್ನು ಜನರು ಬದಲಿಸಿಕೊಳ್ಳಬೇಕು. ಪಾಲಿಕೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಿದಾಗ ಮಾತ್ರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿವೆ
ಚನ್ನು ಹೊಸಮನಿ ಪರಿಸರ ಪ್ರೇಮಿ

ಮರ ಬಿದ್ದು ಸಾವು– ನೋವು

ಮಳೆ ಸಂದರ್ಭದಲ್ಲಿ ಮರಗಳು ಕೊಂಬೆಗಳು ಉರುಳಿ ಬಿದ್ದು ಹಲವು ಜನರ ಪ್ರಾಣ ತೆಗೆದಿವೆ. ಕೆಲವರು ಸಾವಿನಿಂದ ಪಾರಾದರೂ ತೀವ್ರ ಗಾಯಗೊಂಡು ಇಂದಿಗೂ ಆ ನೋವಿನಲ್ಲೇ ನರಳುವಂತಾಗಿದೆ. ಜೂನ್ 7ರಂದು ಸುರಿದ ಮಳೆಗೆ ಹುಬ್ಬಳ್ಳಿಯ ಕಾರವಾರ ರಸ್ತೆಯ ಗಿರಣಿಚಾಳ ಬಳಿ ಮರ ಬಿದ್ದು ಸ್ಥಳೀಯ ನಿವಾಸಿ ಪರಶುರಾಮ ಉಪ್ಪಾರ ಅವರನ್ನು ಬಲಿ ಪಡೆದಿದೆ. ಜೀವನಕ್ಕೆ ಆಧಾರವಾಗಿದ್ದ ಇವರನ್ನು ಕಳೆದುಕೊಂಡು ಇಡೀ ಕುಟುಂಬ ನಿತ್ಯವೂ ಕಣ್ಣೀರಿಡುವಂತಾಗಿದೆ. 2022ರ ಮೇ 5ರಂದು ಮಳೆ ಸಂದರ್ಭದಲ್ಲಿ ದೇಸಾಯಿ ವೃತ್ತದ ಪಿಂಟೊ ರಸ್ತೆ ಮಾರ್ಗದಲ್ಲಿ ಸಾಗುತ್ತಿದ್ದ ಆಟೋ ಮೇಲೆ ಮರ ಬಿದ್ದು ಪ್ರಯಾಣಿಕ ಹಳೇ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದ ನಿವಾಸಿ ರಾಬಿನ್ ಮೊರಿಸ್ ಮೃತಪಟ್ಟಿದ್ದರು. 2022 ಏಪ್ರಿಲ್ 05ರಂದು ಅಂಚಟಗೇರಿ ಬಳಿ ಮಳೆಯಿಂದ ರಸ್ತೆಗೆ ಬಿದ್ದ ಮರದ ಟೊಂಗೆಯನ್ನು ತೆರವುಗೊಳಿಸುತ್ತಿದ್ದ ಪೊಲೀಸರು ಹಾಗೂ ಸಾರ್ವಜನಿಕರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಇವು ಉದಾಹರಣೆ ಮಾತ್ರ. ಇಂಥ ಹಲವು ಘಟನೆಗಳು ಪ್ರತಿ ಸಲ ಮಳೆ ಆದಾಗ ಸಂಭವಿಸುತ್ತವೆ. ‘ಮಳೆ ಬಳಿಕ ಪಾಲಿಕೆ ಅರಣ್ಯ ಇಲಾಖೆ ಹೆಸ್ಕಾಂ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮಾಡುವ ಬದಲು ಮಳೆಗೂ ಮುನ್ನವೇ ಅಪಾಯಕಾರಿ ಗಿಡ ಮರ ಕೊಂಬೆ ಗುರುತಿಸಿ ತೆರವು ಮಾಡಬೇಕು’ ಎಂಬುದು ಜನರ ಮನವಿ

ಹರಾಜಿನಲ್ಲಿ ಭಾಗವಹಿಸಲು ನಿರಾಸಕ್ತಿ

‘ಮಳೆಗಾಲಕ್ಕೂ ಮುನ್ನ ಅರಣ್ಯ ಇಲಾಖೆಯಿಂದ ಅಪಾಯಕಾರಿ ಮರ ಕೊಂಬೆಗಳನ್ನು ಗುರುತಿಸಿ ಸರ್ವೆ ನಡೆಸಲಾಗುತ್ತದೆ. ಬಳಿಕ ಹರಾಜು ಪ್ರಕ್ರಿಯೆ ನಡೆಸಿ ಖಾಸಗಿಯವರಿಗೆ ಟೆಂಡರ್ ನೀಡಿ ಅವುಗಳನ್ನು ತೆರವುಗೊಳಿಸಲಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಹರಾಜು ಪ್ರಕ್ರಿಯೆಯಲ್ಲಿ ಮರಗಳನ್ನು ತೆರವುಗೊಳಿಸುವವರು ಸಾರ್ವಜನಿಕರು ಭಾಗವಹಿಸಲು ನಿರಾಸಕ್ತಿ ತೋರಿದ ಕಾರಣ ಅವಳಿ ನಗರದ ಹಲವೆಡೆ ಅಪಾಯಕಾರಿ ಮರಗಳ ತೆರವು ಕಾರ್ಯ ಆಗಿಲ್ಲ. ಅನಿವಾರ್ಯವಾಗಿ ಸಾರ್ವಜನಿಕರೇ ಮರ ಕೊಂಬೆ ತೆರವು ಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್ ಅವರು. ‘ಮರ ಕೊಂಬೆ ತೆರವುಗೊಳಿಸುವಂತೆ ಸಾರ್ವಜನಿಕರಿಂದ ಹಾಗೂ ಪಾಲಿಕೆಯಿಂದ 170ಕ್ಕೂ ಅಧಿಕ ಅರ್ಜಿಗಳು ಅರಣ್ಯ ಇಲಾಖೆಗೆ ಬಂದಿವೆ. ಶೀಘ್ರವೇ ಅರಣ್ಯ ಇಲಾಖೆಯಿಂದಲೇ ತಂಡವೊಂದನ್ನು ರಚಿಸಿ ಸರ್ವೇ ಮಾಡಿ ತೆರವಿಗೆ ಕ್ರಮವಹಿಸುತ್ತೇವೆ’ ಎನ್ನುತ್ತಾರೆ ಅವರು.  

‘ಸಮಸ್ಯೆಗಳಿದ್ದರೆ ಪಾಲಿಕೆಗೆ ಕರೆ ಮಾಡಿ’
‘ಈಗಾಗಲೇ ಮಹಾನಗರ ಪಾಲಿಕೆಯಿಂದ ಮಳೆಗಾಲ ನಿರ್ವಹಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಅಪಾಯಕಾರಿ ಮರ ಕೊಂಬೆಗಳ ತೆರವಿಗೆ ತಂಡ ನಿಯೋಜಿಸಲಾಗಿದೆ. ಜೋತುಬಿದ್ದ ವಿದ್ಯುತ್ ತಂತಿ ಶಿಥಿಲಗೊಂಡ ವಿದ್ಯುತ್ ಕಂಬ ಬದಲಾವಣೆಗೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಪಾಲಿಕೆ ವಾಪ್ತಿಯಲ್ಲಿ ಒಳಚರಂಡಿ ರಾಜಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಮಳೆಯಿಂದ ಹಾನಿಯಾದರೆ ಸಾರ್ವಜನಿಕರು 82778 03778 ವಾಟ್ಸ್‌ಆ್ಯಪ್ ಸಂಖ್ಯೆ ಹಾಗೂ ದೂ.ಸಂ 0836–2213888 2213889 ಹಾಗೂ 2213869ಕ್ಕೆ ಕರೆ ಮಾಡಿ ತಿಳಿಸಬಹುದು. ಇ–ಮೇಲ್‌ hdmccontrolroom@gmail.com ಮೂಲಕ ಮಾಹಿತಿ ನೀಡಬಹುದು’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ.

ಜೋತುಬಿದ್ದ ವಿದ್ಯುತ್ ತಂತಿ; ಜನರಲ್ಲಿ ಆತಂಕ

ನಗರವಷ್ಟೇ ಅಲ್ಲ ಗ್ರಾಮೀಣ ಭಾಗಗಳಲ್ಲೂ ಈ ಸಮಸ್ಯೆ ಹೆಚ್ಚಾಗಿದೆ. ಮರಗಳು ಬಿದ್ದರೆ ವಾರಗಟ್ಟಲೇ ತೆರವು ಆಗುವುದೇ ಇಲ್ಲ ಎಂದು ಜನರು ಆರೋಪಿಸುತ್ತಾರೆ. ‘ಕೆಲ ದಿನಗಳ ಹಿಂದೆ ಮಳೆಗೆ ಹೆಬ್ಬಳ್ಳಿ– ಉಣಕಲ್ಲ ಮಾರ್ಗದಲ್ಲಿ ಮರವೊಂದು ಬುಡಸಮೇತ ಉರುಳಿ ಬಿದ್ದಿತ್ತು. ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವವರು ಹಾಗೂ ನಿತ್ಯ ಕೃಷಿ ಚಟುವಟಿಕೆಗಾಗಿ ಚಕ್ಕಡಿ ಮೂಲಕ ಜಮೀನಿಗೆ ತೆರಳುವವರು ಪರದಾಡುವಂತಾಯಿತು.ಅಲ್ಲದೆ ಕೃಷಿ ಭೂಮಿ ರಸ್ತೆಯ ಅಕ್ಕಪಕ್ಕದಲ್ಲಿನ ವಿದ್ಯುತ್ ಕಂಬ ಮತ್ತು ತಂತಿಗಳಿಗೆ ಗಿಡದ ಬಳ್ಳಿ ಸುತ್ತಿಕೊಂಡಿವೆ. ಕೆಲವೆಡೆ ವಿದ್ಯುತ್ ಕಂಬದ ಪಕ್ಕ ಮರಗಳು ಬೆಳೆದು ರೆಂಬೆ-ಕೊಂಬೆಗಳು ತಾಗಿವೆ. ವಿದ್ಯುತ್ ತಂತಿಗಳು ಜೋತುಬಿದ್ದು ಟ್ರ್ಯಾಕ್ಟರ್ ಲಾರಿಗೆ ತಾಗುವಂತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತ ತಡೆಗಟ್ಟಬೇಕು’ ಎಂದು ಹೆಬ್ಬಳ್ಳಿಯ ರೈತ ಸುರೇಶ ಬನ್ನಿಗಿಡದ ಆಗ್ರಹಿಸಿದ್ದಾರೆ.

ಮನವಿಗೆ ಸಿಗದ ಸ್ಪಂದನೆ: ಆರೋಪ
ಧಾರವಾಡ: ನಗರದ ಹಲವೆಡೆ ರಸ್ತೆ ಬದಿಯ ಕೆಲವು ಮರಗಳು ಒಣಗಿವೆ.  ಕೊಂಬೆಗಳು ವಿದ್ಯುತ್‌ ಕಂಬಗಳು ಬಾಗಿದ್ದು ಮಳೆ–ಗಾಳಿಗೆ ಬೀಳುವ ಸ್ಥಿತಿಗೆ ತಲುಪಿವೆ. ಇತ್ತೀಚೆಗೆ ಸುರಿದ ಮಳೆಗೆ ಸಿಬಿಟಿ (ನಗರ ಬಸ್‌ ನಿಲ್ದಾಣ) ಸಮೀಪ‌ ರಸ್ತೆ ಬದಿಯ ಮರವೊಂದರ ದೊಡ್ಡ ಕೊಂಬೆ ಮುರಿದು ಬಿದ್ದು ಸರಕು ಸಾಗಣೆ ವಾಹನ ಎರಡು ಬೈಕ್‌ಗಳು ಜಖಂಗೊಂಡಿದ್ದವು. ಕೆಲಗೇರಿ ಕೆರೆ ಪಕ್ಕದ ಕಾಂಕ್ರೀಟ್‌ ರಸ್ತೆ (ಕೆಸಿಡಿ ಕಡೆಗಿನ ಸಂಪರ್ಕ ಮಾರ್ಗ) ಜರ್ಮನ್‌ ವೃತ್ತದಿಂದ ಕೆಲಗೇರಿ ಕಡೆಗಿನ ರಸ್ತೆ ಸಹಿತ ವಿವಿಧೆಡೆ ರಸ್ತೆ ಬದಿ ಕೆಲ ಮರಗಳ ಕೊಂಬೆಗಳು ಬಾಗಿವೆ. ಮರಗಳು ವಿದ್ಯುತ್‌ ಕಂಬಗಳಲ್ಲಿ ಕೇಬಲ್‌ (ಡಿಶ್‌ ಎಫ್‌ಟಿಟಿಎಚ್‌) ಜೋತುಬಿದ್ದಿವೆ. ಹಲವೆಡೆ ರಸ್ತೆ ಮಧ್ಯೆದಲ್ಲಿಯೇ ಬಿದ್ದಿವೆ. ಕೇಬಲ್‌ ತುಳಿದುಕೊಂಡೇ ಸಂಚರಿಸುವ ಸ್ಥಿತಿ ಇದೆ. ಹೆಸ್ಕಾಂ ಮತ್ತು ಪಾಲಿಕೆ ‘ಜಾಣ ಕುರುಡು ಮತ್ತು ಮೌನ’ ವಹಿಸಿವೆ. ‘ಬಾಗಿರುವ ಅಪಾಯದ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕತ್ತರಿಸುವುದು ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಪಾಲಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಮಂಜಾಗ್ರತೆ ವಹಿಸುವಂತೆ ಸಂಬಂ‌ಧಪಟ್ಟ ಇಲಾಖೆಯ‌ವರಿಗೆ ಮನವಿ ಪತ್ರ ನೀಡಿದ್ದೇವೆ. ಈವರೆಗೆ ಕ್ರಮ ವಹಿಸಿಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ಪರಿಸರ ನಾಗರಿಕ ಸಮಿತಿ ಅಧ್ಯಕ್ಷ ಶಂಕರ ಕುಂಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT