ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ಮನೆಮಾಡಿದ ರಂಜಾನ್‌ ಸಂಭ್ರಮ

ಆಹಾರ ಪದಾರ್ಥ, ದಿನಸಿ, ಹಣ್ಣುಗಳ ಖರೀದಿ ಭರಾಟೆ ಜೋರು; ‘ಈದ್‌ ಉಲ್‌ ಫಿತರ್‌’ ಆಚರಣೆಗೆ ಸಿದ್ಧತೆ
Published 8 ಏಪ್ರಿಲ್ 2024, 7:34 IST
Last Updated 8 ಏಪ್ರಿಲ್ 2024, 7:34 IST
ಅಕ್ಷರ ಗಾತ್ರ

ದಾವಣಗೆರೆ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ‘ಪವಿತ್ರ ರಂಜಾನ್‌’ ಹಬ್ಬದ ಸಂಭ್ರಮ ಮನೆಮಾಡಿದೆ. ಮುಸ್ಲಿಮರು ಮಾರ್ಚ್‌ 12ರಿಂದ ಉಪವಾಸ ಆಚರಿಸುತ್ತಿದ್ದು, ಚಂದ್ರ ಕಂಡ ಮರು ದಿನವೇ (ಏಪ್ರಿಲ್‌ 11 ಇಲ್ಲವೇ 12ರಂದು) ‘ಈದ್‌ ಉಲ್‌ ಫಿತರ್‌’ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ಮುಸ್ಲಿಮರು ರಂಜಾನ್‌ ಉಪವಾಸವನ್ನು ಅತ್ಯಂತ ಶ್ರದ್ಧೆ ಹಾಗೂ ಕಟ್ಟುನಿಟ್ಟಿನಿಂದ ಪಾಲಿಸುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಯೊಳಗೆ ಊಟ ಸೇವಿಸಿದರೆ, ಸಂಜೆ 6.43ರ ಬಳಿಕವೇ ಊಟ ಮಾಡುವುದು. ಸೂರ್ಯಾಸ್ತ ಹಾಗೂ ಸೂರ್ಯೋದಯದ ಸಮಯದಲ್ಲಿ ಕೊಂಚ ವ್ಯತ್ಯಾಸ ಆಗುವುದರಿಂದ ಸಹರಿ ಹಾಗೂ ಇಫ್ತಾರ್‌ನ ಸಮಯದಲ್ಲೂ ಸ್ವಲ್ಪ ಬದಲಾವಣೆ ಆಗುತ್ತಿರುತ್ತದೆ. ಮುಸ್ಲಿಮರು ಬೆಳಿಗ್ಗೆಯಿಂದ ಸಂಜೆಯವರೆಗೂ ಒಂದು ಹನಿ ನೀರನ್ನೂ ಸೇವಿಸದೇ ಉಪವಾಸ ಆಚರಿಸುತ್ತಾರೆ.

10 ವರ್ಷದೊಳಗಿನ ಮಕ್ಕಳು, ಅನಾರೋಗ್ಯ ಪೀಡಿತರು ಹಾಗೂ ವೃದ್ಧರು ಉಪವಾಸದಿಂದ ದೂರ ಉಳಿಯುತ್ತಾರೆ. ಉಳಿದಂತೆ ಸಮುದಾಯದ ಬಹುತೇಕ ಜನರು ಉಪವಾಸ ಆಚರಿಸುತ್ತಿದ್ದಾರೆ.

ಖರೀದಿ ಭರಾಟೆ:

ರಂಜಾನ್‌ ಮಾಸದ ಹಿನ್ನೆಲೆಯಲ್ಲಿ ನಗರದಲ್ಲಿ ಅದರಲ್ಲೂ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಬಟ್ಟೆ, ಆಹಾರ ಪದಾರ್ಥ, ದಿನಸಿ, ಹಣ್ಣುಗಳ ಖರೀದಿ ಭರಾಟೆ ಜೋರಾಗಿಯೇ ಇದೆ. ಸಂಜೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಣ್ಣು, ಆಹಾರ ಪದಾರ್ಥವನ್ನು ಖರೀದಿಸಿ ಮನೆಗೆ ಕೊಂಡೊಯ್ದು ಕುಟುಂಬದ ಸದಸ್ಯರೊಂದಿಗೆ ಸೇವಿಸುತ್ತಿದ್ದಾರೆ.

ಇಲ್ಲಿನ ಭಾಷಾನಗರ, ಮದೀನಾ ಸರ್ಕಲ್‌, ಕೆ.ಟಿ.ಜೆ. ನಗರ, ವಿನೋಬನಗರ, ಆಜಾದ್ ನಗರ, ಎಸ್‌.ಎಸ್‌.ಎಂ. ನಗರ, ಅಹಮದ್ ನಗರ, ಇಮಾಮ್ ನಗರ, ನರಸರಾಜಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಸಂಜೆ ವೇಳೆ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹಬ್ಬಕ್ಕೆಂದು ಹೊಸ ಬಟ್ಟೆ, ಬಳೆ, ಚಪ್ಪಲಿ, ಶೂ, ಟೋಪಿ, ಬುರ್ಖಾ, ಅಲಂಕಾರಿಕ ವಸ್ತುಗಳು, ಸುಗಂಧ ದ್ರವ್ಯಗಳು, ಮೆಹೆಂದಿ ಖರೀದಿ ಕೂಡ ಜೋರಾಗಿದೆ.

ವಿವಿಧ ಖಾದ್ಯ:

ರಂಜಾನ್‌ ಹಿನ್ನೆಲೆಯಲ್ಲಿ ಮನೆಗಳು ಹಾಗೂ ಹೋಟೆಲ್‌ಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ನಗರದ ವಿವಿಧೆಡೆಯ ಹೋಟೆಲ್‌ಗಳಲ್ಲಿ ಮಟನ್‌ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಫಿಶ್ ಕಬಾಬ್, ಲಿವರ್‌ ಫ್ರೈ, ಚಿಕನ್ ಫ್ರೈ, ಕೈಮಾ, ಪರೋಟಾ, ಎಗ್‌ ಮಸಾಲಾ, ಚಿಕನ್‌ 65 ಸೇರಿದಂತೆ ಹಲವು ಖಾದ್ಯಗಳ ಮಾರಾಟ ಜೋರಾಗಿದೆ. ಉಪವಾಸ ಆಚರಿಸುತ್ತಿರುವವರು ಕೆಲವು ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿದರೆ, ಇನ್ನೂ ಕೆಲವು ಖಾದ್ಯಗಳನ್ನು ಹೋಟೆಲ್‌ಗಳಿಂದ ಖರೀದಿಸಿ ಸವಿಯುತ್ತಿದ್ದಾರೆ. ಹೋಟೆಲ್‌ಗಳಲ್ಲದೇ ಬೀದಿಬದಿಗಳಲ್ಲಿ ಸಮೋಸಾ ಹಾಗೂ ಇನ್ನಿತರ ಸಿಹಿ ಪದಾರ್ಥಗಳ ಮಾರಾಟವೂ ಹೆಚ್ಚಾಗಿದೆ.

ಹಳೇ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದವರು ಟೋಪಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸುತ್ತಿರುವುದು
ಹಳೇ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದವರು ಟೋಪಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸುತ್ತಿರುವುದು
ನನಗೀಗ 67 ವರ್ಷ. ಬಿ.ಪಿ. ಶುಗರ್‌ ಇದ್ದರೂ ಉಪವಾಸ ಆಚರಿಸುತ್ತೇನೆ. ಬಿಸಿಲು ಮಳೆ ಸೇರಿದಂತೆ ಪ್ರಕೃತಿಯಲ್ಲಾಗುವ ಯಾವುದೇ ಬದಲಾವಣೆಗಳೂ ಉಪವಾಸದ ಮೇಲೆ ಪರಿಣಾಮ ಬೀರುವುದಿಲ್ಲ. ಒಮ್ಮೆ ಅಭ್ಯಾಸವಾದರೆ ಅದು ಬದುಕಿನ ಭಾಗವೇ ಆಗುತ್ತದೆ
ಕೆ.ಚಮನ್‌ಸಾಬ್‌ ಮುಸ್ಲಿಂ ಸಮುದಾಯದ ಮುಖಂಡ
ಸಮುದಾಯದವರು ಹೆಚ್ಚಾಗಿ ಸೇರುವ ಮಸೀದಿ ಬಳಿಯೇ ಹಣ್ಣುಗಳ ಮಾರಾಟ ಮಾಡುತ್ತೇವೆ. ರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಣ್ಣುಗಳನ್ನು ಇಲ್ಲಿಯೇ ಸೇವಿಸುವವರಿಗಿಂತ ಮನೆಗೆ ಕೊಂಡೊಯ್ಯುವವರು ಜಾಸ್ತಿ
ಜಮೀರ್ ಖಾನ್ ಹಣ್ಣಿನ ವ್ಯಾಪಾರಿ
ವರ್ಷವಿಡೀ ದುಡಿಯುತ್ತೇವೆ ಇದೊಂದು ತಿಂಗಳು ಶ್ರದ್ಧೆಯಿಂದ ಉಪವಾಸ ಆಚರಿಸುತ್ತೇವೆ. ಮಟನ್ ಬಿರಿಯಾನಿ ಪರೋಟ ಸೇರಿದಂತೆ ಇನ್ನಿತರ ಮಾಂಸಹಾರ ಖಾದ್ಯಗಳ ಮಾರಾಟ ಸಂಜೆ ವೇಳೆ ಹೆಚ್ಚಾಗಿರುತ್ತದೆ
ರೆಹಮಾನ್ ಸಾಬ್‌ ಹೋಟೆಲ್‌ ವ್ಯಾಪಾರಿ
ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ
ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳ ಮಾರಾಟ ನಗರದೆಲ್ಲೆಡೆ ಹೆಚ್ಚಾಗಿದೆ. ರಂಜಾನ್‌ ಉಪವಾಸದ ಹಿನ್ನೆಲೆಯಲ್ಲಿ ವಿವಿಧ ಹಣ್ಣುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಕಲ್ಲಂಗಡಿ ಪೈನಾಪಲ್‌ ಪಪ್ಪಾಯ ಬಾಳೆಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಂಜೆ 5ರಿಂದ 8ರ ಗಂಟೆ ವರೆಗೂ ಹಣ್ಣಿನ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ಹಣ್ಣುಗಳ ಒಂದು ಪ್ಲೇಟ್‌ (ಮಿಕ್ಸ್‌) ₹ 30ರಿಂದ ₹ 50ರ ವರೆಗೆ ಇದೆ. ಹಬ್ಬದಲ್ಲಿ ಖರ್ಜೂರಕ್ಕೆ ವಿಶೇಷ ಮಹತ್ವ ಇದೆ. ಇದಕ್ಕೆ ಹೆಚ್ಚಿನ ಪ್ರಾತಿನಿಧ್ಯ ಇದೆ. ಉಪವಾಸ ಮಾಡಿದವರು ಖರ್ಜೂರ ತಿಂದು ಉಪವಾಸ ಅಂತ್ಯಗೊಳಿಸುತ್ತಾರೆ. ನಂತರ ಆಹಾರ ಸ್ವೀಕರಿಸುತ್ತಾರೆ.
ಜಕಾತ್‌ ದಾನ– ಧರ್ಮ
ತಮ್ಮ ಆದಾಯ ಹಾಗೂ ವ್ಯವಹಾರಕ್ಕೆಂದು ಮೀಸಲಿಟ್ಟ ಆಸ್ತಿಯಲ್ಲಿ ಶೇ 2.5 ರಷ್ಟು ಜಕಾತ್ ಅನ್ನು ಸಹೋದರ – ಸಹೋದರಿಯರಿಗೆ ನೀಡುತ್ತಿದ್ದು ಒಂದು ವೇಳೆ ಅವರು ಆರ್ಥಿಕವಾಗಿ ಉತ್ತಮವಾ‌ಗಿದ್ದರೆ ಅನಾಥ ಶಾಲೆಯ ಮಕ್ಕಳಿಗೆ ಅರ್ಹ ಬಡವರಿಗೆ ನೀಡಲಾಗುತ್ತದೆ. ಇನ್ನು ಬಡವರು ಅಶಕ್ತರಿಗೆ ದಾನ ಧರ್ಮ ನೀಡಲಾಗುತ್ತದೆ. ಈ ತಿಂಗಳಲ್ಲಿ ದಾನ ಧರ್ಮ ನೀಡಿದರೆ ಹೆಚ್ಚಿನ ಪುಣ್ಯ ಲಭಿಸುತ್ತದೆ ಎನ್ನುವುದು ಸಮುದಾಯದವರ ನಂಬಿಕೆಯಾಗಿದೆ ಎಂದು ಸಮುದಾಯದ ಮುಖಂಡ ಕೆ.ಚಮನ್‌ಸಾಬ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT