ಗುರುವಾರ , ಜೂನ್ 30, 2022
28 °C
ನಾಮಪತ್ರ ಸಲ್ಲಿಸಿದ ಬಳಿಕ ಬಸವರಾಜ ಗುರಿಕಾರ ಹೇಳಿಕೆ

ಶಿಕ್ಷಕರ ಸಮಸ್ಯೆ ಪರಿಹರಿಸಲು ಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಶಿಕ್ಷಕರ ಮತಕ್ಷೇತ್ರ ರಚನೆಯಾಗಿರುವುದು ಅವರ ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ಹೊರತು, ವಿಶ್ವದಾಖಲೆ ನಿರ್ಮಿಸಲು ಅಲ್ಲ’ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.

ಸಹಾಯಕ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಬುಧವಾರ ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಹಲವಾರು ದಶಕಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ಮುಖ್ಯವಾಗಿ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದೇ ಇರುವುದು, ವೇತನ ತಾರತಮ್ಯ, 2015ರಿಂದ ಇಲ್ಲಿಯವರೆಗೆ ಖಾಲಿ ಹುದ್ದೆ ಭರ್ತಿಗೆ ಅವಕಾಶ ಕಲ್ಪಿಸದೇ ಇರುವುದು, ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಶಿಕ್ಷಣ ವಲಯ ಹಾಗೂ ಶಿಕ್ಷಕರು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ಶಿಕ್ಷಕರ ಬಗ್ಗೆ ಕಾಳಜಿಯುಳ್ಳ ನೈಜ ಹೋರಾಟಗಾರರಿಂದ ಮಾತ್ರ ಸಾಧ್ಯ ಎಂಬುದು ಶಿಕ್ಷಕರಿಗೆ ಗೊತ್ತಿದೆ. ಹೀಗಾಗಿ ಈ ಬಾರಿ ಶಿಕ್ಷಕರು ನನ್ನನ್ನು ಬೆಂಬಲಿಸಲಿದ್ದಾರೆ’ ಎಂದರು.

‘ಶಿಕ್ಷಕರ ಆಶೀರ್ವಾದ ಬಲದಿಂದಾಗಿಯೇ 40 ವರ್ಷಗಳಿಂದ ಶಿಕ್ಷಕರ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದೇನೆ. ಅವರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ದುಡಿದಿದ್ದೇನೆ. ಈ ಚುನಾವಣೆಯಲ್ಲಿ ಶಿಕ್ಷಕರು ಮತ ರೂಪದ ಆಶೀರ್ವಾದ ಕರುಣಿಸಿ ಸೇವೆ ಮಾಡುವ ಭಾಗ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ಎಚ್.ಕೆ.ಪಾಟೀಲ ಮಾತನಾಡಿ, ‘ಜಾತ್ಯತೀತ ನಿಲುವಿನ ಪಕ್ಷದಲ್ಲಿದ್ದ ಬಸವರಾಜ ಹೊರಟ್ಟಿ ಅವರಿಗೆ ಜಾತ್ಯತೀತರ ಮತಗಳು ಲಭಿಸುತ್ತಿದ್ದವು. ಆದರೆ ಈಗ ಅವರು ಕೋಮುವಾದಿ ಬಿಜೆಪಿ ಸೇರಿದ್ದು, ಶಿಕ್ಷಕರು ಅವರನ್ನು ತಿರಸ್ಕರಿಸುವುದು ಶತಸಿದ್ಧ. ಶಿಕ್ಷಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಗುರಿಕಾರ ಅವರ ಗೆಲುವು ಸುಲಭವಾಗಲಿದೆ. ಶಿಕ್ಷಕರು ಮತ ಹಾಕುವ ಮುನ್ನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ಖಂಡಿತವಾಗಿಯೂ ಯೋಚಿಸುತ್ತಾರೆ. ಜನವಿರೋಧಿ ಬಿಜೆಪಿಗೆ ಅವರು ಮತ ಹಾಕುವುದಿಲ್ಲ’ ಎಂದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕೆಸಿಡಿ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಗುರಿಕಾರ ಹಾಗೂ ಕಾಂಗ್ರೆಸ್ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದರು. 

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಶಾಕೀರ ಸನದಿ, ಪ್ರೊ. ಐ.ಜಿ. ಸನದಿ, ಜಿ.ಎಸ್. ಪಾಟೀಲ, ಬಸವರಾಜ ಶಿವಣ್ಣವರ, ರಾಮಕೃಷ್ಣ ದೊಡ್ಡಮನಿ, ಸದಾನಂದ ಡಂಗನವರ, ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಎಸ್.ಎಫ್.ಎನ್. ಗಾಜಿಗೌಡರ, ನಾಗರಾಜ ಗೌರಿ, ಬಸವರಾಜ ಕಿತ್ತೂರ, ದೀಪಕ ಚಿಂಚೋರೆ, ರಾಬರ್ಟ್ ದದ್ದಾಪೂರಿ, ಆನಂದ ಜಾಧವ, ಶಿವಾನಂದ ಕರಿಗಾರ, ಜೇಮ್ಸ್ ಯಾಮಾ, ಶಾಂತವ್ವ ಗುಜ್ಜಳ, ದೀಪಾ ಗೌರಿ, ನಿರ್ಮಲಾ ಹೊಂಗಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.