ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ನವೀಕೃತ ಈಜುಕೊಳ, ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ

Last Updated 6 ಜನವರಿ 2020, 10:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಂಡ ಪಾಲಿಕೆಯ ಈಜುಕೊಳ, ಚಿಟಗುಪ್ಪಿ ಆಸ್ಪತ್ರೆಯಲ್ಲಿ ಆರಂಭಿಸಿರುವ ಸ್ಮಾರ್ಟ್‌ ಹೆಲ್ತ್‌ ಮತ್ತು ಲ್ಯಾಮಿಂಗ್ಟನ್‌ ಬಾಲಕ ಹಾಗೂ ಬಾಲಕಿಯರ ಶಾಲೆಯಲ್ಲಿ ನಿರ್ಮಿಸಿರುವ ಸ್ಮಾರ್ಟ್‌ ಸ್ಕೂಲ್‌ ಸೌಲಭ್ಯಗಳನ್ನು ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಲೋಕಾರ್ಪಣೆಗೊಳಿಸಿದರು.

ಈಜುಕೊಳದ ಬಳಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೋಶಿ ‘ಹುಬ್ಬಳ್ಳಿಗೆ ಸ್ಮಾರ್ಟ್‌ ಸಿಟಿ ಯೋಜನೆ ಮಂಜೂರಾಗಿ ಮೂರು ವರ್ಷಗಳಾಗಿವೆ. ಆರು ಜನ ವ್ಯವಸ್ಥಾಪಕರು ಬದಲಾಗಿದ್ದಾರೆ. ಬಹಳ ಕಾಯುವಿಕೆಯ ನಂತರ ಮೊದಲ ಸೌಲಭ್ಯ ಉದ್ಘಾಟಿಸುವ ಅವಕಾಶ ಸಿಕ್ಕಿದೆ’ ಎಂದರು.

‘ಈಜುಕೊಳವನ್ನು ಐದು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡುತ್ತಾರೆ. ಇನ್ನು ಕೆಲ ದಿನಗಳಲ್ಲಿ ನಗರದಲ್ಲಿ ರಸ್ತೆ ನಿರ್ಮಾಣ ಆರಂಭವಾಗಲಿವೆ. ಧಾರವಾಡದಲ್ಲಿ ಡಿ.ಸಿ. ಕಾಂಪೌಂಡ್‌ ಬಳಿ ಈಜುಕೊಳ ನಿರ್ಮಾಣಕ್ಕೆ ₹15 ಕೋಟಿ ನೀಡಲಾಗಿದೆ. ಅವಳಿ ನಗರದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಪಾಲಿಕೆ ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪಾಲಿಕೆ ನಗರದಲ್ಲಿ ಸಮರ್ಪಕ ಕಸ ವಿಲೇವಾರಿ ಮಾಡಿಸಬೇಕು. ದೂಳು ಮುಕ್ತ ನಗರ ಮಾಡಬೇಕು’ ಎಂದರು.

ಜಗದೀಶ ಶೆಟ್ಟರ್‌ ಮಾತನಾಡಿ ‘ಫೆ. 14ರಂದು ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಭೆ ನಡೆಯುತ್ತದೆ. ಇದಕ್ಕಾಗಿ ಜ. 29ರಂದು ಹೈದರಾಬಾದ್‌ನಲ್ಲಿ ರೋಡ್‌ ಶೋ ನಡೆಸಲಾಗುವುದು. ಉದ್ಯಮಿಗಳನ್ನು ಸೆಳೆಯಲು ಸ್ಥಳೀಯವಾಗಿಯೂ ಜಾಗೃತಿ ಮೂಡಿಸಲಾಗುವುದು’ ಎಂದರು.

₹6.5 ಕೋಟಿ ವೆಚ್ಚದ ಬೆಂಗೇರಿ ಮಾರುಕಟ್ಟೆ, ₹2.9 ಕೋಟಿ ವೆಚ್ಚದ ಉಣಕಲ್‌ ಮಾರುಕಟ್ಟೆ, ₹4.59 ಕೋಟಿ ವೆಚ್ಚದ ಬಹುವಾಹನ ನಿಲುಗಡೆಗೆ ವ್ಯವಸ್ಥೆ, ಇಂದಿರಾಗ್ಲಾಸ್‌ ಹೌಸ್‌ನಲ್ಲಿ ಪುಟಾಣಿ ರೈಲು, ಸ್ಮಾರ್ಟ್‌ ರಸ್ತೆ ಪ್ಯಾಕೇಜ್‌ ಯೋಜನೆಗಳಿಗೂ ಜೋಶಿ ಹಾಗೂ ಶೆಟ್ಟರ್‌ ಭೂಮಿಪೂಜೆ ನೆರವೇರಿಸಿದರು.

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್‌, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಮಾಜಿ ಸದಸ್ಯರಾದ ವೀರಣ್ಣ ಸವಡಿ, ಮಹೇಶ ಬುರ್ಲಿ, ಸುಧೀರ ಸರಾಫ್‌, ಶಿವಾನಂದ ಮುತ್ತಣ್ಣನವರ, ಡಿ.ಕೆ. ಚವ್ಹಾಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT