ಶನಿವಾರ, ಸೆಪ್ಟೆಂಬರ್ 18, 2021
26 °C
ಸಮರ್ಪಕ ನೀರು ಪೂರೈಕೆ ಆಗದಿರುವ ಕಾರಣ ನಿವಾಸಿಗಳ ಆಕ್ರೋಶ

ಧಾರವಾಡ ಮೃತ್ಯುಂಜಯನಗರ: ನೀರಿಗಾಗಿ ಖಾಲಿ ಕೊಡಗಳೊಂದಿಗೆ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ನೀರಿಗಾಗಿ ಪರದಾಡುತ್ತಿರುವ ಇಲ್ಲಿನ ಮೃತ್ಯುಂಜಯ ನಗರದ ನಿವಾಸಿಗಳು ಸೋಮವಾರ ಖಾಲಿ ಕೊಡಗಳೊಂದಿಗೆ ಬೀದಿಗಿಳಿದು ರಸ್ತೆತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 5 ಮತ್ತು 6ನೇ ವಾರ್ಡ್‌ ಸಂಖ್ಯೆಯಲ್ಲಿ ಬರುವ ಈ ಮೃತ್ಯುಂಜಯನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದ್ದರೂ, ಇಲ್ಲಿನ ಜನರಿಗೆ ಅದು ಸಾಕಾಗುತ್ತಿಲ್ಲ. ಈ ಕುರಿತು ಜಲಮಂಡಳಿಗೆ ಹಲವುಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೀದಿಗಿಳಿಯಬೇಕಾಯಿತು ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲು ಹೇಳಿಕೊಂಡರು.

ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಚನ್ನು ನೂಲ್ವಿ, ‘ಟೆಂಡರ್ ಶೂರ್‌ ರಸ್ತೆ ಕಾಮಗಾರಿ ಆರಂಭವಾದಾಗಿನಿಂದ ಈ ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನಿತ್ಯ ಒಂದಲ್ಲಾ ಒಂದು ಕಾಮಗಾರಿ ನಡೆಯುತ್ತಿರುವುದರಿಂದ ಪೈಪ್‌ಗಳು ತುಂಡಾಗುವುದು ಹಾಗೂ ಕಾಮಗಾರಿ ಅಡಚಣೆಯಿಂದ ನೀರು ಪೂರೈಕೆ ಮುಂದೂಡಲಾಗುತ್ತಿದೆ. ಈಗ ಕಳೆದ ಒಂದು ತಿಂಗಳಿನಿಂದ ನೀರು ಪೂರೈಕೆ ಆಗುತ್ತಲೇ ಇಲ್ಲ. ಹೀಗಾದರೆ ಇಲ್ಲಿನ ನಿವಾಸಿಗಳು ಬದುಕುವುದಾದರೂ ಹೇಗೆ?’ ಎಂದು ಖಾರವಾಗಿ ಪ್ರಶ್ನಿಸಿದರು.

‘ಸಾಮಾನ್ಯವಾಗಿ ಈ ಬಡಾವಣೆಗೆ 5ರಿಂದ 6 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ ರಸ್ತೆ ಕಾಮಗಾರಿಯಿಂದ ಅಲ್ಲಲ್ಲಿ ಪೈಪ್ ದುರಸ್ತಿ ನಡೆಯುತ್ತಲೇ ಇದೆ. ನೀರು ಪೂರೈಕೆಯಾಗುವ ವಾಡಿಕೆ ದಿನವೇ ಈ ಸಮಸ್ಯೆಗಳು ಎದುರಾಗುತ್ತಿವೆ. ಇದು ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಡಾವಣೆ ಜನ ಬೀದಿಗೆ ಬರುವಂತಾಗಿದೆ’ ಎಂದರು.

‘ಮೃತ್ಯುಂಜಯನಗರದಲ್ಲಿ ಸುಮಾರು 300 ಮನೆಗಳಿವೆ. ವಾರ್ಡ್‌ 5 ಮತ್ತು 6ರ ಪಾಲಿಕೆ ಸದಸ್ಯರಾದ ಯಾಸೀನ್ ಹಾವೇರಿಪೇಟ ಮತ್ತು ದೀಪಕ ಚಿಂಚೋರೆ ಅವರು ಬಡಾವಣೆಯ ನೀರಿನ ಬವಣೆ ಕುರಿತು ಈವರೆಗೂ ವಿಚಾರಿಸಿ ಸಮಸ್ಯೆ ಪರಿಹರಿಸಲಿಲ್ಲ. ಬಡಾವಣೆಯ ಜನರು ತಮ್ಮ ಗೋಳನ್ನು ಆಗಾಗ ಇವರ ಮುಂದೆ ಹೇಳಿದ್ದುಂಟು. ಆದರೆ ನೀರಿಲ್ಲದೆ ಪರಿತಪಿಸುವ ಗೋಳು ಮಾತ್ರ ತಪ್ಪಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸೋಮವಾರ ನೀರು ಪೂರೈಕೆಯ ಕೊಳವೆ ಮತ್ತೆ ಒಡೆದು ನೀರೆಲ್ಲಾ ಚರಂಡಿ ಪಾಲಾಗುತ್ತಿತ್ತು. ಇದನ್ನು ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದರೂ ಅವರು ಸಮರ್ಪಕವಾಗಿ ಸ್ಪಂದಿಸಲಿಲ್ಲ ಮತ್ತು ನೀರು ನಿಲ್ಲಿಸಲು ಯಾರೂ ಬರಲಿಲ್ಲ. ಹೀಗಾಗಿ ರಸ್ತೆ ತಡೆ ನಡೆಸಿ ನಮ್ಮ ಆಕ್ರೋಶವನ್ನು ಹೊರಹಾಕಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ಖಾಲಿ ಕೊಡಗಳನ್ನು ಹಿಡಿದು, ಪೈಪ್‌ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಘೋಷಣೆ ಕೂಗಿದರು. ಇದರಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಚಾರ ಠಾಣೆ ಪೊಲೀಸರು, ಜಲಮಂಡಳಿ ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ನಡೆಸುತ್ತಿರುವ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಅಹವಾಲು ಆಲಿಸಿದರು. 

ಜಲಮಂಡಳಿಯ ಅಧಿಕಾರಿ ಜಾಫಣ್ಣವರ ಅವರು ಎರಡು ದಿನಗಳ ಒಳಗಾಗಿ ಹೊಸ ಕೊಳವೆ ಜೋಡಿಸಿ, ಇಡೀ ಬಡಾವಣೆಗೆ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು