ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಿಗೇರಿ | ಹದಗೆಟ್ಟ ರಸ್ತೆ: ಸುತ್ತಮುತ್ತ ಧೂಳು

ಜಗದೀಶ ಗಾಣಗೇರ
Published 7 ಡಿಸೆಂಬರ್ 2023, 3:26 IST
Last Updated 7 ಡಿಸೆಂಬರ್ 2023, 3:26 IST
ಅಕ್ಷರ ಗಾತ್ರ

ಅಣ್ಣಿಗೇರಿ: ಪಟ್ಟಣ ತಾಲ್ಲೂಕು ಆಗಿ ಪರಿವರ್ತನೆಗೊಂಡರೂ ಅಭಿವೃದ್ಧಿಯ ವಿಷಯದಲ್ಲಿ ಮಾತ್ರ ಕಿಂಚಿತ್ತೂ ಬದಲಾವಣೆ ಆಗದಿರುವುದು ಶೋಚನೀಯ ಸಂಗತಿ. ಪಟ್ಟಣ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಬಹುತೇಕ ಇಲ್ಲಿನ ರಸ್ತೆಗಳು ಗುಂಡಿಮಯವಾಗಿವೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ 67ರ ಹುಬ್ಬಳ್ಳಿ–ಗದಗ ರಸ್ತೆಗೆ ಅಂಟಿಕೊಂಡಿರುವ ಅಂಬಿಗೇರಿ ಕ್ರಾಸ್ 2-3 ಕಿ.ಮೀ ಗದಗ– ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ಗುಂಡಿಗಳಿಂದ ಕೂಡಿದೆ. ಡಾಂಬರ್ ಕಿತ್ತು ಹೋಗಿ ಎಲ್ಲಿ ನೋಡಿದರೂ ಧೂಳೇ ಧೂಳು. ಇದರಿಂದ ಇಲ್ಲಿನ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ವಾಣವಾಗಿದೆ.

ಬಳ್ಳಾರಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಅಣ್ಣಿಗೇರಿಯಿಂದ ಹೊರ ಹೋಗುವ ಗದಗ ನವಲಗುಂದ ಹುಬ್ಬಳ್ಳಿ ಮಾರ್ಗವಾಗಿ ಸುಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಸಾವಿರಾರು ಜನರು ಇದೇ ರಸ್ತೆ ಮೂಲಕ ತೆರಳುತ್ತಾರೆ. ಪ್ರಯಾಣಿಕರು ಶಾಲೆ, ಕಾಲೇಜುಗಳು ಮತ್ತು ಅಗ್ನಿಶಾಮಕ ದಳ ಎಪಿಎಂಸಿ ಮಾರುಕಟ್ಟೆ, ಅಂಗಡಿ-ಮುಂಗಟ್ಟುಗಳಿಗೆ ನಿತ್ಯ ಧೂಳಿನ ಮಜ್ಜನವಾಗುತ್ತಿದೆ. ಇದರಿಂದ ಜನರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಲ್ಲೂಕಾಗಿ ಐದು ವರ್ಷ ಕಳೆದರೂ ರಸ್ತೆ ದುರಸ್ತಿಯಾಗಿಲ್ಲ. ಧೂಳಿನಿಂದ ಚರ್ಮರೋಗ, ಶ್ವಾಸಕೋಶ, ಅಸ್ತಮಾ, ಕೆಮ್ಮು, ನೆಗಡಿ ಮುಂತಾದ ರೋಗಗಳಿಂದ ಜನರು ಪ್ರತಿದಿನ ಆಸ್ಪತ್ರೆಗೆ ಹೋಗುವಂತಾಗಿದೆ. ರಸ್ತೆ ದುರಸ್ತಿ ಆಗುವವರೆಗೂ ಪುರಸಭೆಯವರು ನಿತ್ಯ ರಸ್ತೆಗೆ ನೀರು ಹೊಡೆದರೆ ಸ್ವಲ್ಪ ಮಟ್ಟಿಗಾದರೂ ಧೂಳನ್ನು ತಡೆ ಹಿಡಿಯಬಹುದು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಮುಂದಾಗುತ್ತಾರೆ ಇಲ್ಲವೋ ಎಂದು ಕಾದು ನೋಡಬೇಕಿದೆ.

‘ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ರಸ್ತೆಗೆ ತಾತ್ಕಾಲಿಕವಾಗಿ ಪುರಸಭೆ ವತಿಯಿಂದ ಮುರುಂ ಹಾಕಿ ಸುಧಾರಿಸಲಾಗಿತ್ತು. ಆದರೆ ವಾಹನಗಳ ದಟ್ಟಣೆಯಿಂದ ಹಾಕಿದ ಮಣ್ಣು ಮತ್ತು ಮುರುಂ ಕಿತ್ತುಹೋಗಿದೆ. ಈ ರಸ್ತೆಗೆ ತಾತ್ಕಾಲಿಕವಾಗಿ ನೀರು ಸಿಂಪಡಣೆ ಮಾಡುವ ಮೂಲಕ ಧೂಳು ತಡೆಯಲಾಗುವುದು’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ.

ರಸ್ತೆ ಸುಧಾರಣೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಹದಗೆಟ್ಟ ರಸ್ತೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಶಿವಾನಂದ ಹೆಬ್ಬಳ್ಳಿ, ತಹಶೀಲ್ದಾರ ಅಣ್ಣಿಗೇರಿ
ರಸ್ತೆ ಗುಂಡಿಗಳನ್ನು ಜಲ್ಲಿ ಕಲ್ಲು ಮತ್ತು ಮುರುಮ್ ಹಾಕಿ ಮುಚ್ಚಲಾಗಿದೆ. ಆದರೆ ಡಾಂಬರ್ ಹಾಕದ ಕಾರಣ ಜಲ್ಲಿ ಕಲ್ಲು ರಸ್ತೆ ತುಂಬೆಲ್ಲ ಹರಡಿ ಪಾದಚಾರಿಗಳಿಗೆ  ತೊಂದರೆಯಾಗಿದೆ
ಮಹಾಂತೇಶ ನಾವಳ್ಳಿ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT