ಗುರುವಾರ , ಮಾರ್ಚ್ 4, 2021
20 °C

ಸಂಭ್ರಮಕ್ಕೆ ಮುನ್ನುಡಿ ಬರೆದ ‘ರೊಟ್ಟಿ ಪಂಚಮಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಗೆ ಒಂದೆಡೆ ಸಿದ್ಧತೆಗಳು ಆರಂಭಗೊಂಡಿದ್ದರೆ, ಇನ್ನೊಂದೆಡೆ ಹಬ್ಬದ ಭಾಗವಾಗಿರುವ ‘ರೊಟ್ಟಿ ಪಂಚಮಿ’ಯನ್ನು ಇಲ್ಲಿನ ಜಾನಪದ ಸಂಶೋಧನಾ ಕೇಂದ್ರದ ವತಿಯಿಂದ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಚೌತಿ ಮುನ್ನಾದಿನ ರೊಟ್ಟಿ ಪಂಚಮಿ ಆಚರಿಸುವ ರೂಢಿ ಇದೆ. ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ಮರೆಯಾಗುತ್ತಿರುವುದನ್ನು ಮನಗಂಡು ಇಲ್ಲಿನ ಜಾನಪದ ಸಂಶೋಧನಾ ಕೇಂದ್ರವು ‘ರೊಟ್ಟಿ ಪಂಚಮಿ’ ಆಚರಿಸಿತು. ಆ ಮೂಲಕ ಮರೆಯಾಗುತ್ತಿರುವ ಸಂಪ್ರದಾಯವೊಂದನ್ನು ಪರಿಚಯಿಸುವ ಪ್ರಯತ್ನ ನಡೆಸಿತು. 

ಇಲ್ಲಿನ ರಂಗಾಯಣ ಆವರಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ, ಮೊದಲು ಮಣ್ಣಿನ ನಾಗದೇವತೆಗೆ ಮಹಿಳೆಯರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಹಿರಿಯ ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ನಾಗ ಪಂಚಮಿ ಹಾಡುಗಳನ್ನು ಪ್ರಸ್ತುತಪಡಿಸಿದರು. 

ಇಳಕಲ್‌ ಸೀರೆ, ಸಾಂಪ್ರದಾಯಿಕ ಆಭರಣಗಳನ್ನು ತೊಟ್ಟ ಮಹಿಳೆಯರು ಹಬ್ಬಕ್ಕಾಗಿ  ಜೋಳ, ಗೋದಿ, ಅಕ್ಕಿ ಹಾಗೂ ಸಜ್ಜಿ ರೊಟ್ಟಿ ಜತೆಗೆ  ಶೇಂಗಾ, ಗುರೆಳ್ಳು, ಅಗಸಿ ಚೆಟ್ನಿ, ಹೆಸರು, ಮಡಕಿ ಕಾಳು, ಬದನೆಕಾಯಿ ಪಲ್ಯೆ, ಉಪ್ಪಿನಕಾಯಿ, ಸಂಡಿಗೆ, ಹಪ್ಪಳ, ಸಿಹಿ ತಿಂಡಿಗಳು ಸೇರಿದಂತೆ ವಿವಿಧ ಭಕ್ಷಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಸ್ನೇಹಿತರು, ಕಲಾವಿದರೊಂದಿಗೆ ಸೇರಿ ಸಾಮೂಹಿಕ ಭೋಜನ ಮಾಡಿ, ರೊಟ್ಟಿ ಪಂಚಮಿ ಆಚರಿಸಿದರು. 

‘ಸಾಮಾನ್ಯವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ರೊಟ್ಟಿ ತಟ್ಟದ ದಿನವೇ ಇಲ್ಲ. ಆದರೆ, ನಾಗರ ಅಮವಾಸ್ಯೆಯಿಂದ ಪಂಚಮಿ ಮುಗಿಯುವವರೆಗೆ ಮನೆಯಲ್ಲಿ ರೊಟ್ಟಿ ಬಡೆಯುವಂತಿಲ್ಲ. ಎಣ್ಣೆಯಲ್ಲಿ ಆಹಾರ ಕರಿಯುವಂತಿಲ್ಲ ಎಂಬ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಆದ್ದರಿಂದ ಪಂಚಮಿ ಮುನ್ನಾ ದಿನಗಳಲ್ಲಿ ಎಲ್ಲರೂ ಹಲವು ರೀತಿ ರೊಟ್ಟಿಗಳನ್ನು ಮಾಡಿ ತಮ್ಮ ಸುತ್ತಲಿನ ಮನೆಯವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾರೆ. ಮರೆಯಾಗುತ್ತಿರುವ ಈ ಪದ್ಧತಿಯನ್ನು ಪರಿಚಯಿಸುವುದು, ಎಲ್ಲರೊಂದಿಗೆ ಸೇರಿ ಊಟ ಮಾಡುವುದು. ಆ ಮೂಲಕ ಬಾಂಧವ್ಯ ವೃದ್ಧಿಯ ಆಶಯದಿಂದ ಜಾನಪದ ಸಂಶೋಧನಾ ಕೇಂದ್ರದಿಂದ ಇದನ್ನು ಏರ್ಪಡಿಸಿದ್ದೆವು’  ಎಂದು ಸಂಸ್ಥೆಯ ಕಾರ್ಯದರ್ಶಿ ವಿಶ್ವೇಶ್ವರಿ ಹಿರೇಮಠ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ, ಹಿರಿಯ ನಿರ್ದೇಶಕ ಚಿದಂಬರರಾವ್ ಜಂಬೆ, ಜಯಶ್ರೀ ಗೌಳಿಯವರ, ಪ್ರಭಾ ನೀರಲಗಿ, ಸುನೀತಾ ಕಾಮರೆಡ್ಡಿ, ಸರಸ್ವತಿ ಭೋಸಲೆ, ಸುಜಾತಾ ಹಡಗಲಿ, ಲಲಿತಾ ಪಾಟೀಲ, ಸುನೀತಾ ತಪಶೆಟ್ಟಿ, ದೀಪಾ ಪಾಟೀಲ, ಖೈರುನ್ನಿಸಾ, ಪುಷ್ಪಾ ಹಾಲಭಾವಿ, ನೀಲಾ ಶಿಗ್ಲಿ, ಸುನಂದಾ ನಿಂಬನಗೌಡರ, ನಂದಾ ಗುಳೇದಗುಡ್ಡ, ಕಲಾ ಕಂಬಾರ ಇದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.