ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಎಲ್ಲೆಡೆ ರಾಮಮಯ; ಗುಡಿ–ಮಂದಿರ ಕೇಸರಿಮಯ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ; ಸಂಭ್ರಮಕ್ಕೆ ಸಿದ್ಧಗೊಂಡ ಹುಬ್ಬಳ್ಳಿ
Published 21 ಜನವರಿ 2024, 6:17 IST
Last Updated 21 ಜನವರಿ 2024, 6:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕೆ ಪೂರಕವಾಗಿ  ವಾಣಿಜ್ಯ ನಗರಿಯೂ ಸಂಭ್ರಮದಿಂದ ಸಿದ್ಧಗೊಂಡಿದೆ. ನಗರದ ಪ್ರಮುಖ ವೃತ್ತ ಸೇರಿದಂತೆ ಗಲ್ಲಿಗಲ್ಲಿಯೂ ಕೇಸರಿ ಬಾವುಟಗಳಿಂದ ಸಿಂಗಾರಗೊಂಡಿದೆ.

ನಗರದ ದೇವಸ್ಥಾನಗಳು, ಮಠ–ಮಂದಿರಗಳು ರಾಮಧ್ವಜ, ಕೇಸರಿ ಬಾವುಟ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿವೆ. ಗ್ರಾಮೀಣ ಭಾಗದ ಗುಡಿ, ಮಂದಿರಗಳನ್ನು ಸಹ ತಳಿರು–ತೋರಣಗಳಿಂದ ಸಿಂಗರಿಸಲಾಗಿದೆ. ವಿವಿಧ ಸಂಘ– ಸಂಸ್ಥೆಗಳು ಬಡಾವಣೆಗಳಲ್ಲಿ ರಾಮೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿವೆ.

ದುರ್ಗದಬೈಲ್‌, ಗಣೇಶಪೇಟೆ, ತುಳಜಾಭವಾನಿ ವೃತ್ತ, ಮೇದಾರ ಓಣಿ, ಗೋಪನಕೊಪ್ಪ ವೃತ್ತ, ದೇವಾಂಗಪೇಟೆ, ಮರಾಠಗಲ್ಲಿ, ವಿಜಯನಗರ, ಗೋಕುಲ ರಸ್ತೆ, ಕೇಶ್ವಾಪುರ ವೃತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಿ, ಬಣ್ಣದ ಪೇಪರ್‌ಗಳಿಂದ ಅಲಂಕರಿಸಲಾಗಿದೆ. ಕೆಲವೆಡೆ ಎಲ್‌ಇಡಿ ದೀಪಗಳನ್ನು ಇಟ್ಟು, ರಂಗು ಹೆಚ್ಚಿಸಲಾಗಿದೆ.

ಬ್ರಾಡ್‌ವೇ, ಕೊಪ್ಪಿಕರ ರಸ್ತೆ, ದೇಸಾಯಿ ವೃತ್ತ, ದೇವಾಂಗಪೇಟೆ, ದಾಜೀಬಾನ್‌ ಪೇಟೆಗಳ ವಾಣಿಜ್ಯ ಕಟ್ಟಡಗಳಿಗೆ ಶ್ರೀರಾಮನ ಬೃಹತ್‌ ಬ್ಯಾನರ್‌ ಅಳವಡಿಸಲಾಗಿದೆ. ದೇಶಪಾಂಡೆನಗರದ ಸುತ್ತಲಿನ ವಸತಿಗೃಹಗಳ ತಡೆಗೋಡೆಗಳಿಗೆ ರಾಮಧ್ವಜಗಳನ್ನು ಅಳವಡಿಸಿ, ಸಂಪೂರ್ಣ ಕೇಸರಿಮಯವನ್ನಾಗಿ ಮಾಡಲಾಗಿದೆ. ಕೆಲವರು ದ್ವಿಚಕ್ರಗಳಿಗೆ ರಾಮಧ್ವಜಗಳನ್ನು ಸಿಕ್ಕಿಸಿಕೊಂಡು ಸಂಚರಿಸುವ ದೃಶ್ಯಗಳು ಸಾಮಾನ್ಯವಾಗಿ ಕಾಣಬಹುದು.

ರಾಮಧ್ವಜ ಭರ್ಜರಿ ಮಾರಾಟ: ಮರಾಠ ಗಲ್ಲಿಯ ಶಿವಾಜಿ ಚೌಕದ ಬಳಿ ಸಂಜಯ ಹಿಂದ್ರೆ ನೇತೃತ್ವದಲ್ಲಿ ಐವರ ತಂಡ ಒಂದು ತಿಂಗಳಿನಿಂದ ರಾಮಧ್ವಜ ತಯಾರಿಯಲ್ಲಿ ನಿರತವಾಗಿದೆ. ಧ್ವಜಗಳ ಮಾರಾಟ ಭರ್ಜರಿಯಾಗಿ ನಡೆದಿದೆ.

ಈ ಕುರಿತು ಮಾಹಿತಿ ನೀಡಿದ ಸಂಜಯ ಹಿಂದ್ರೆ, ‘ಗೋವಾ, ಮಹಾರಾಷ್ಟ್ರ ಸೇರಿದಂತೆ ಗದಗ, ಬೆಳಗಾವಿ ಹಾಗೂ ಧಾರವಾಡ ಸುತ್ತಮುತ್ತಲಿನ ಗ್ರಾಮಗಳಿಂದ ಧ್ವಜಕ್ಕೆ ಸಾಕಷ್ಟು ಬೇಡಿಕೆಯಿದೆ. ಹದಿನೈದು ದಿನಗಳಿಂದ ಹಗಲು ರಾತ್ರಿ ರಾಮಧ್ವಜ ತಯಾರಿಯಲ್ಲಿಯೇ ನಿರತರಾಗಿದ್ದೇವೆ. ಈಗಾಗಲೇ ಕೆಲವರು ಒಂದು ಸಾವಿರ, ಎರಡು ಸಾವಿರ ಧ್ವಜಕ್ಕೆ ಮುಂಗಡ ಹಣ ನೀಡಿದ್ದಾರೆ’ ಎಂದರು.

‘ಪ್ರತಿದಿನ 1,500 ರಿಂದ 2,000ದಷ್ಟು ರಾಮಧ್ವಜ ಅಚ್ಚು ಹಾಕುತ್ತೇವೆ. ಒಂದು ಅಡಿ ಉದ್ದ–ಅಗಲದ ಧ್ವಜದಿಂದ 10*18 ಉದ್ದ–ಅಗಲದ ಧ್ವಜ ತಯಾರಿಸುತ್ತಿದ್ದೇವೆ. ವಿವಿಧ ಅಳತೆಯ ನೈಲಾನ್‌ ಮತ್ತು ಕಾಟನ್‌ ಧ್ವಜಗಳು ₹10ನಿಂದ ₹450ಕ್ಕೆ ಮಾರಾಟ ಮಾಡುತ್ತಿದ್ದೇವೆ. ಕೆಲವು ಸಂಘ–ಸಂಸ್ಥೆಯವರು, ಯುವಕರು ಇಲ್ಲಿಗೇ ಬಂದು ತಮಗೆ ಬೇಕಾದಷ್ಟು ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ವಿವಿಧ ಅಳತೆಯ 50 ಸಾವಿರಕ್ಕೂ ಹೆಚ್ಚು ಧ್ವಜಗಳು ಮಾರಾಟವಾಗಿವೆ’ ಎಂದು ತಿಳಿಸಿದರು.

ಸೂಕ್ಷ್ಮಪ್ರದೇಶದಲ್ಲಿ ಹದ್ದಿನಕಣ್ಣು; ಬಿಗಿ ಬಂದೋಬಸ್ತ್‌

ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ನಗರದ ಪ್ರಮುಖ ಪ್ರದೇಶ ಹಾಗೂ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಜೊತೆ ಕೆಎಸ್‌ಆರ್‌ಪಿ ತುಕ್ಕಡಿ ಹಾಗೂ 100 ಮಂದಿ ಗೃಹರಕ್ಷಕ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ನಗರದ ಚನ್ನಮ್ಮ ವೃತ್ತ ದುರ್ಗದ ಬೈಲ್‌ ಇಂಡಿಪಂಪ್‌ ವೃತ್ತ ಮಾರುಕಟ್ಟೆ ಪ್ರದೇಶ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಅತಿಸೂಕ್ಷ್ಮ ಪ್ರದೇಶಗಳಾದ ಬೆಂಡಿಗೇರಿ ಶಹರ ಕಸಬಾ ಹಳೇಹುಬ್ಬಳ್ಳಿ ಘಂಟಿಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎಲ್ಲ ಧಾರ್ಮಿಕ ಕೇಂದ್ರದ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ದಿನದ ಇಪ್ಪತ್ನಾಲ್ಕು ಗಂಟೆಯೂ ಕರ್ತವ್ಯದಲ್ಲಿ ಇರುವಂತೆ ಪೊಲೀಸ್‌ ಕಮಿಷನರ್‌ ಸೂಚಿಸಿದ್ದಾರೆ. ಕೆಲವು ಧಾರ್ಮಿಕ ಕೇಂದ್ರದ ಸುತ್ತಮುತ್ತ ಹಾಗೂ ವೃತ್ತದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರ ಚಲನ–ವಲನದ ಮೇಲೆ ಗಮನ ಇಡಲಾಗಿದೆ.

‘ನಗರದ ಬಹುತೇಕ ಬಡಾವಣೆ ಹಾಗೂ ಬೀದಿಗಳಲ್ಲಿ ಜ. 22ರಂದು ರಾಮೋತ್ಸವ ಆಚರಣೆ ನಡೆಯಲಿದ್ದು ಕೆಲವು ಸಂಘ–ಸಂಸ್ಥೆಗಳು ಮೆರವಣಿಗೆ ಶೋಭಾಯಾತ್ರೆ ನಡೆಸಲು ನಿರ್ಧರಿಸಿವೆ. ಸುಮಾರು 200ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಉತ್ಸವ ನಡೆಯುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹೊರಗಡೆಯಿಂದ ಮೂರು ಕೆಎಸ್‌ಆರ್‌ಪಿ ತುಕ್ಕಡಿಗಳನ್ನು ತರಸಿಕೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಪೋಸ್ಟ್‌ ಬಗ್ಗೆ ನಿಗಾ ಇಡಲು ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT