‘ಸಹಜ’ ಮೇಳದಲ್ಲಿ ಸಮೃದ್ಧ ಅಕ್ಕಿ...

7

‘ಸಹಜ’ ಮೇಳದಲ್ಲಿ ಸಮೃದ್ಧ ಅಕ್ಕಿ...

Published:
Updated:

ಅಲ್ಲಿ ಎಲ್ಲಿ ನೋಡಿದರಲ್ಲೂ ಅಕ್ಕಿಗಳದ್ದೇ ಸುದ್ದಿ. ಎಷ್ಟೊಂದು ನಮೂನೆ, ಎಷ್ಟೊಂದು ತಳಿ? ನೋಡಿದರೆ ನೋಡುತ್ತಲೇ ಇರಬೇಕು ಎನ್ನುವ ಆಸೆ. ಇನ್ನಷ್ಟು ಹೊಸ ತಳಿಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ.

ಸಹಜ ಸಮೃದ್ಧಿ, ಭತ್ತ ಉಳಿಸಿ ಆಂದೋಲನ, ಕರ್ನಾಟಕ ಮತ್ತು ಸಂಜೀವಿನಿ ಕೃಷಿಕರ ಸಹಯೋಗದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜನೆಯಾಗಿರುವ ಮೂರು ದಿನಗಳ ದೇಸಿ ಅಕ್ಕಿ ಮೇಳದಲ್ಲಿ ಕಂಡುಬಂದ ಚಿತ್ರಣವಿದು. ಅಲ್ಲಿ 100ಕ್ಕೂ ಹೆಚ್ಚು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 30 ನಮೂನೆಯ ಅಕ್ಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ಜೆ.ಸಿ. ನಗರದಲ್ಲಿರುವ ಭಗಿನಿ ಮಂಡಳದಲ್ಲಿ ಮೇಳ ನಡೆಯುತ್ತಿದೆ.

ನವರಾ, ಬಾಸುಮತಿ, ಅಂಬೆಮು, ದೊಡಿಗ್ಯಾ, ಕರಿಗಿಜವಿಲಿ, ಬಂಗಾರ ಕಡ್ಡಿ, ಮೈಸೂರ ಸಣ್ಣ, ರಾಜಮುಡಿ, ಇಂದ್ರಾಣಿ, ನವಲಿ, ಆಲೂರು ಸಣ್ಣ, ಬರ್ಮಾಬ್ಲಾಕ್‌ ಕಪ್ಪು ಅಕ್ಕಿ ಹೀಗೆ ದೇಸಿ ಅಕ್ಕಿಗಳ ದಂಡೇ ಅಲ್ಲಿದೆ. ಬಾಣಂತಿಯರು ಊಟಕ್ಕಾಗಿ ಬಳಸುವ ಕರಗಜವಿಲಿ, ಅಂಬೆಮೋರ, ಕೆಂಪು ಅಕ್ಕಿ ಮಾರಾಟಕ್ಕಿವೆ. ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೆಚ್ಚು ಬೆಳೆಯುವ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಸಾಮಾನ್ಯವಾಗಿ ದಿನನಿತ್ಯದ ಬಳಕೆಗೆ ರಾಜಮುಡಿ ಅಕ್ಕಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ ಇರುವವರು ಕೆಂಪಕ್ಕಿ, ಪಾಯಸ, ಬಿರಿಯಾನಿ, ಫಲಾವ್‌ ಮಾಡಲು ಗಂಧಸಾಲಿ ಸೇವಿಸುತ್ತಾರೆ. ಔಷಧಿಗಾಗಿ ಬಳಸುವ ನವರ ತಳಿಯೂ ಇದೆ.

ಮಾಹಿತಿಯ ಹೂರಣ

ಅಕ್ಕಿ ಮಾರಾಟದ ಜೊತೆಗೆ ಸಿರಿಧಾನ್ಯಗಳು, ರೈತರಿಗೆ ಬೇಕಾದ ಕೃಷಿ ಪುಸ್ತಕಗಳು, ಬಿತ್ತನೆ ಬೀಜಗಳು, ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೆಂಪು ಅಕ್ಕಿಯ ದೋಸೆ, ಇಡ್ಲಿ, ಕಜ್ಜಾಯ, ರಾಗಿ ದೋಸೆ, ರಾಗಿಯಿಂದ ಮಾಡಿದ ತಿನಿಸುಗಳನ್ನೂ ಮಾರಾಟಕ್ಕೆ ಇಡಲಾಗಿದೆ.

‘ಸಹಜ ಸಮೃದ್ಧಿ ಸಂಸ್ಥೆ 15 ವರ್ಷಗಳಿಂದ ದೇಸಿ ಅಕ್ಕಿ ಮೇಳ ಆಯೋಜಿಸುತ್ತಿದೆ. ಅಕ್ಕಿ ಎಂದಾಕ್ಷಣ ಬಿಳಿ ಬಣ್ಣದ್ದು ಎನ್ನುವ ಕಲ್ಪನೆಯೇ ಬಹಳಷ್ಟು ಜನರಲ್ಲಿದೆ. ಆದರೆ, ಅಕ್ಕಿಯಲ್ಲಿ ನೂರಾರು ನಮೂನೆಯಿವೆ. ದೇಸಿ ತಳಿಯಲ್ಲಿ ಕಾಯಿಲೆ ಗುಣಪಡಿಸುವ ಪೌಷ್ಠಿಕಾಂಶ, ಕಬ್ಬಿಣದ ಅಂಶ ಹೆಚ್ಚಿರುವ ಗುಣ ಇದೆ. ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ರೊಟ್ಟಿ ಪ್ರಮುಖ ಆಹಾರವಾದರೂ, ಸಾಕಷ್ಟು ಜನ ಅನ್ನ ತಿನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿಯೂ ಮಳೆಯಾಧಾರಿತ ದೇಸಿ ಅಕ್ಕಿ ಬೆಳೆಯುವವರ ಸಂಖ್ಯೆ ದೊಡ್ಡದಿದೆ’ ಎನ್ನುತ್ತಾರೆ ಸಹಜ ಸಮೃದ್ಧಿ ಕಾರ್ಯಕ್ರಮ ಸಂಯೋಜಕ ಸಿ. ಶಾಂತಕುಮಾರ್‌. ಇನ್ನು ಎರಡು ದಿನ ಬೆಳಿಗ್ಗೆ 10ರಿಂದ ರಾತ್ರಿ 9ರ ತನಕ ಪ್ರದರ್ಶನ ಮತ್ತು ಮಾರಾಟ ಇರುತ್ತದೆ.

‘ಅಕ್ಕಿಯನ್ನು ಪಾಲಿಷ್‌ ಮಾಡುವುದರಿಂದ ಅದರಲ್ಲಿರುವ ಖನಿಜಾಂಶ, ರಬ್ಬರ್ ಅಂಶ ಮತ್ತು ಪೌಷ್ಠಿಕಾಂಶ ಸತ್ವಗಳು ಹೋಗಿ ಬಿಡುತ್ತವೆ. ಇದರಿಂದ ಸಕ್ಕರೆ ಖಾಯಿಲೆ ಬರುತ್ತದೆ. ಆದ್ದರಿಂದ ದೇಸಿ ಅಕ್ಕಿಯನ್ನೇ ಬಳಸುವುದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ’ ಖಾನಾಪುರ ತಾಲ್ಲೂಕಿನ ರೈತ ಶಿವಾನಂದ ಶಂಕರ ಲಂಗಟಿ. ಶಿವಾನಂದ 20 ತಳಿಗಳ ಅಕ್ಕಿಗಳನ್ನು ಮಾರಾಟಕ್ಕೆ ತಂದಿದ್ದರು.

‘ದೇಸಿ ಅಕ್ಕಿಯಿಂದ ರುಚಿಕರವಾದ ಸಂಡಿಗೆ, ಶಾವಿಗೆ, ಹಪ್ಪಳ ಮಾಡಬಹುದು. ದೇಸಿ ಬೆಳೆಗಳಿಂದ ಮಾಡಿದ ತಿನಿಸುಗಳು ಕೂಡ ನಮ್ಮಲ್ಲಿ ಸಿಗುತ್ತವೆ. ಅವುಗಳ ರುಚಿ ನೋಡಿದ ಬಳಿಕ ಅಕ್ಕಿ ಖರೀದಿಸಬಹುದು’ ಎನ್ನುತ್ತಾರೆ ಮಂಡ್ಯದಿಂದ ಬಂದಿರುವ ಗೆಳೆಯರ ಬಳಗದ ಸದಸ್ಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !