ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕರ ವೇತನ ಕಡಿತ; ಕರ್ನಾಟಕ ವಿವಿ ನಿರ್ಧಾರ ತಿರಸ್ಕರಿಸಿದ ನ್ಯಾಯಾಲಯ

Published 9 ಜುಲೈ 2023, 15:41 IST
Last Updated 9 ಜುಲೈ 2023, 15:41 IST
ಅಕ್ಷರ ಗಾತ್ರ

ಧಾರವಾಡ: ವಿದ್ಯಾರ್ಹತೆ ಕಾರಣ ನೀಡಿ ನಾಲ್ವರು ಸಹಾಯಕ ಪ್ರಾಧ್ಯಾಪಕರಿಗೆ ವೇತನ ಕಡಿತ ಮಾಡಲು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಕೈಗೊಂಡಿದ್ದ ನಿರ್ಧಾರವನ್ನು ಧಾರವಾಡದ ಹೈಕೋರ್ಟ್‌ ಪೀಠ ತಿರಸ್ಕರಿಸಿದೆ.

ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಈ ಆದೇಶ ನೀಡಿದ್ದಾರೆ. ವಿಶ್ವವಿದ್ಯಾಲಯದ 2022ರ ಏಪ್ರಿಲ್‌ 1ರಂದು ಕೈಗೊಂಡಿದ್ದ ನಿರ್ಧಾರವನ್ನು ವಜಾಗೊಳಿಸಲಾಗಿದೆ. ಅರ್ಹತೆ ಆಧರಿಸಿ ನಾಲ್ಕರು ಸಹಾಯಕ ಪ್ರಾಧ್ಯಾಪಕರನ್ನು ಬಡ್ತಿಗೆ ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅಧಿಸೂಚನೆಯಲ್ಲಿ ನೇಮಕಾತಿಗೆ ನಿಗದಿಪಡಿಸಿದ್ದ ಕನಿಷ್ಠ ವಿದ್ಯಾರ್ಹತೆಯನ್ನು ನಾಲ್ವರೂ ಹೊಂದಿದ್ಧಾರೆ ಎಂದು ಕೋರ್ಟ್‌ ಹೇಳಿದೆ.

ಏನಿದು ಪ್ರಕರಣ: ಕರ್ನಾಟಕ ವಿಶ್ವವಿದ್ಯಾಲಯ, ಸಂಯೋಜಿತ ಕಾಲೇಜುಗಳಲ್ಲಿನ 120 ಬೋಧಕರ ಹುದ್ದೆ ನೇಮಕಾತಿ 2007ರಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಆಗಿನ ನಿಯಮಾವಳಿಯಂತೆ ಸ್ನಾತಕೋತ್ತರ ಪದವಿ, ಎಂ.ಫಿಲ್‌ ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. 2009ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿತ್ತು. 2011ರಲ್ಲಿ ನೇಮಕಾತಿ ಆದೇಶ ನೀಡಲಾಗಿತ್ತು.

ನೇಮಕಗೊಂಡವರ ಪೈಕಿ ನಾಲ್ವರ ವಿದ್ಯಾರ್ಹತೆ ಯುಜಿಸಿ ನಿಯಮಾವಳಿಯಂತೆ ಇಲ್ಲ ಎಂದು ಮಹಾಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದರು. ನಾಲ್ವರಿಗೆ ರಾಜ್ಯ ವೇತನ ನಿಗದಿಪಡಿಸಲು, 2011ರಿಂದ ಪಾವತಿಸಿರುವ ಯುಜಿಸಿ ವೇತನದ ಹೆಚ್ಚಳದ ಮೊತ್ತವನ್ನು ಪ್ರತಿ ತಿಂಗಳ ವೇತನದಲ್ಲಿ ಕಡಿತ ಮಾಡಲು ಸಿಂಡಿಕೇಟ್‌ನಲ್ಲಿ ತೀರ್ಮಾನಿಸಲಾಗಿತ್ತು.

ಸಿಂಡಿಕೇಟ್‌ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ವಿಜ್ಞಾನ ವಿದ್ಯಾಲಯದ ನಾಲ್ವರು ಸಹಾಯಕ ಪ್ರಾಧ್ಯಾಪಕರು ಧಾರವಾಡ ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ಅವರ ಪರವಾಗಿ ವಕೀಲ ಎಸ್‌.ಬಿ.ಹೆಬ್ಬಳ್ಳಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT