ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಪ್ರಕರಣಗಳಲ್ಲಿ ಮುಸ್ಲಿಮರು ಭಾಗಿಯಾಗಿದ್ದರೆ ಬಿಜೆಪಿಗೆ ಹಬ್ಬ: ಸಂತೋಷ ಲಾಡ್

Published 22 ಏಪ್ರಿಲ್ 2024, 16:22 IST
Last Updated 22 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೊಲೆ ಪ್ರಕರಣಗಳಲ್ಲಿ ಮುಸ್ಲಿಮರು ಭಾಗಿಯಾಗಿದ್ದರೆ ಬಿಜೆಪಿಯವರಿಗೆ ಹಬ್ಬ ಇದ್ದಂತೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ವ್ಯಂಗ್ಯವಾಡಿದರು.

‘ಹಿಂದೂ–ಹಿಂದೂಗಳ ನಡುವೆ ಹಲವು ಕೊಲೆ ಪ್ರಕರಣಗಳು ನಡೆಯುತ್ತವೆ. ಆಗ ಬಿಜೆಪಿಯವರು ಮಾತನಾಡಲ್ಲ. ದೇಶದಲ್ಲಿ ಪ್ರತಿದಿನ 13 ಸಾವಿರ ಹೆಣ್ಣುಮಕ್ಕಳು ಕಣ್ಮರೆಯಾಗುತ್ತಾರೆ. ಇದರ ಬಗ್ಗೆ ಕೇಂದ್ರ ಸರ್ಕಾರ ಏನೂ ಹೇಳಲ್ಲ. ಗುಜರಾತ್‌ನಲ್ಲಿ ಪ್ರತಿದಿನ 6 ಯುವತಿಯರ ಮೇಲೆ ಬಲಾತ್ಕಾರ ಪ್ರಕರಣಗಳು ನಡೆಯುತ್ತವೆ. ಇದರ ಬಗ್ಗೆ ಬಿಜೆಪಿ ಚಕಾರ ಎತ್ತಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ಆಡಳಿತ ಅವಧಿಯಲ್ಲಿ ಹಿಂದೂಗಳ ಕೊಲೆಯಾಗಿರಲಿಲ್ಲವೇ? ಭಯೋತ್ಪಾದಕರ ದಾಳಿ ನಡೆದಿಲ್ಲವೇ? ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರ ಮನೆಗೆ ಏಕೆ ಹೋಗಲಿಲ್ಲ? ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕರು ಅವರ ಮನೆಗೆ ಏಕೆ ಹೋಗಲಿಲ್ಲ? ಏಕೆಂದರೆ ಅಲ್ಲಿ ಮುಸ್ಲಿಂ ಆ್ಯಂಗಲ್‌ ಇರಲಿಲ್ಲ’ ಎಂದು ಅವರು ವ್ಯಂಗ್ಯವಾಡಿದರು.

‘ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ನಡೆದಿದ್ದು ದುರದೃಷ್ಟಕರ. ಅವರ ಕುಟುಂಬ  ವರ್ಗದವರಿಗೆ ಆದಷ್ಟೇ ನೋವು ನಮಗೂ ಆಗಿದೆ. ಆದರೆ, ಬಿಜೆಪಿಯವರು ಇದನ್ನು ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ. ಪ್ರಲ್ಹಾದ ಜೋಶಿ, ಜೆ.ಪಿ. ನಡ್ಡಾ ಸೇರಿದಂತೆ ಪ್ರತಿದಿನ ಒಬ್ಬರಲ್ಲ ಒಬ್ಬ ಬಿಜೆಪಿ ನಾಯಕರು ನೇಹಾ ಮನೆಗೆ ಹೋಗಿ, ಮಾಧ್ಯಮದವರಿಗೆ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಬೈಯ್ಯುತ್ತಿದ್ದಾರೆ. ದಯವಿಟ್ಟು ಇದನ್ನು ನಿಲ್ಲಿಸಿ, ರಾಜಕೀಯಗೊಳಿಸಬೇಡಿ’ ಎಂದರು.

'ವಿಜಯೇಂದ್ರ ಕ್ಷಮೆ ಕೇಳಲಿ’

‘ನನಗೆ ನಾಲಾಯಕ್ ಎಂದು ಹೇಳಿರುವುದು ಪರವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಲಾಯಕ್‌ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದು‌‌‌‌ ಖಂಡನೀಯ. ಕೂಡಲೇ ಸಿದ್ದರಾಮಯ್ಯ ಅವರ ಕ್ಷಮೆಕೋರಬೇಕು’ ಎಂದು ಒತ್ತಾಯಿಸಿದರು.

‘ಯಾರದ್ದೂ ಬೇಡ ನಿಮ್ಮ ತಂದೆಯವರ (ಬಿ.ಎಸ್‌. ಯಡಿಯೂರಪ್ಪ) 40 ವರ್ಷಗಳ ರಾಜಕೀಯ ಜೀವನ ನೋಡಿ ಕಲಿಯಿರಿ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. ಇಂತಹ ಹೇಳಿಕೆ ನೀಡಿರುವ ನಿಮ್ಮ ಮನಸ್ಥಿತಿ ಎಂತಹದ್ದು ಎನ್ನುವುದನ್ನು ತೋರಿಸುತ್ತದೆ’ ಎಂದರು.

‘ಇಡೀ ದೇಶದಲ್ಲಿ ಬಿಜೆಪಿ ಒತ್ತಡದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಜೈ ಶ್ರೀರಾಮ ಬಿಟ್ಟರೆ ಬೇರೆ ಏನೂ ಇಲ್ಲ. ಅವರ ಜನಪ್ರಿಯತೆ ಕುಸಿಯುತ್ತಿದೆ. ಮೊದಲ ಹಂತದ  ಚುನಾವಣೆಯಲ್ಲಿ ಬಿಜೆಪಿ ಕುಸಿದಿದೆ’ ಎಂದರು.

ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಬಿಜೆಪಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ‘ನೆರೆಯ ಶ್ರೀಲಂಕಾ ಬಾಂಗ್ಲಾದೇಶದ ಸ್ಥಾನಗಳನ್ನೂ ಸೇರಿಸಿ ಹೇಳಿರಬಹುದು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT