ಹುಬ್ಬಳ್ಳಿ: ‘ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ವತಿಯಿಂದ ಕುಂದಗೋಳದಲ್ಲಿ ಅಕ್ಟೋಬರ್ 7ಮತ್ತು 8ರಂದು ಸವಾಯಿ ಗಂಧರ್ವರ 71 ಪುಣ್ಯತಿಥಿ ಅಂಗವಾಗಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಅರವಿಂದ ಎಂ.ಕಟಗಿ ಹೇಳಿದರು.
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕುಂದಗೋಳದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಎಂ.ಆರ್.ಪಾಟೀಲ, ಕುಸುಮಾವತಿ ಶಿವಳ್ಳಿ, ಎಸ್.ಐ.ಚಿಕ್ಕನಗೌಡ್ರ, ಎಂ.ಎಸ್.ಅಕ್ಕಿ, ಮಾಜಿ ಸಂಸದ ಐ.ಜಿ.ಸನದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮುಂಬೈನ ಗಾಯಕ ರಾಜಾ ಕಾಳೆ ಅವರಿಗೆ ‘ಸವಾಯಿ ಗಂಧರ್ವ ರಾಷ್ಟ್ರೀಯ ಪ್ರಶಸ್ತಿ’ಯನ್ನು ಶಾಸಕ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಲಿದ್ದಾರೆ’ ಎಂದು ಹೇಳಿದರು.
‘ಅಕ್ಟೋಬರ್ 7ರಂದು ಸಂಜೆ 6 ಗಂಟೆಗೆ ಮುಂಬೈನ ರಾಜಾ ಕಾಳೆ ಅವರಿಂದ ಗಾಯನ, ಬಿ.ಎಸ್.ಮಠ ಮತ್ತು ವೀಣಾ ಶಿವಾನಂದ ಅವರಿಂದ ವಯೋಲಿನ್ ಜುಗಲ್‌ಬಂದಿ, ದೆಹಲಿಯ ಹರೀಶ ತಿವಾರಿ, ರಾಮನಾರಾಯಣ ಝಾ ಅವರಿಂದ ಗಾಯನ, ದೆಹಲಿಯ ಅಸೀಮ ಚೌಧರಿ, ಆಶಿಷ ಸೇನಗುಪ್ತ ಅವರಿಂದ ತಬಲಾವಾದನ ನಡೆಯಲಿದೆ’ ಎಂದರು.
‘ಅಕ್ಟೋಬರ್ 8ರಂದು ಗಣಪತಿ ಭಟ್ ಹಾಸಣಗಿ ಗಾಯನ ಪ್ರಸ್ತುತಪಡಿಸಲಿದ್ದು, ಪುಣೆಯ ರಾಜೇಂದ್ರ ಕುಲಕರ್ಣಿ ಕೊಳಲು ಮತ್ತು ಪ್ರಮೋದ ಗಾಯಕವಾಡ ಅವರಿಂದ ಶಹನಾಯಿ ಜುಗಲ್‌ಬಂದಿ ನಡೆಯಲಿದೆ. ಕೋಲ್ಕತ್ತದ ಮೀನಾಕ್ಷಿ ಮಜುಂದಾರ ಅವರಿಂದ ಗಾಯನ, ಶಿರಾಜ ಅಲಿಖಾನ್ ಅವರಿಂದ ಸರೋದ್ ವಾದನ, ಅಶೋಕ ನಾಡಗೀರ ಅವರಿಂದ ಗಾಯನ, ಚಂದ್ರಿಕಾ ಶ್ರೀಹರ್ಷ ಅವರಿಂದ ವೀಣಾ ವಾದನ ಜರುಗಲಿದೆ’ ಎಂದು ತಿಳಿಸಿದರು.
‘ಮುಂದಿನ ದಿನಗಳಲ್ಲಿ ಸವಾಯಿ ಗಂಧರ್ವರ ಹೆಸರಿನಲ್ಲಿ ಸಂಗೀತ ಶಾಲೆ, ಗ್ರಂಥಾಲಯ ನಿರ್ಮಿಸುವ ಉದ್ದೇಶವಿದೆ’ ಎಂದು ಹೇಳಿದರು.
ಅರ್ಜುನ ನಾಡಿಗೀರ ಮಾತನಾಡಿ, ‘ಈ ಹಿಂದೆ ಕುಂದಗೋಳದಲ್ಲಿ ಎರಡು ಕಡೆ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಈ ವರ್ಷದಿಂದ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಸಹಯೋಗದಲ್ಲಿ ಒಂದೇ ಕಡೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎಂ.ಎನ್.ತಡಸೂರ, ಕಾರ್ಯದರ್ಶಿ ಅಶೋಕ ನಾಡಿಗೀರ, ಖಜಾಂಚಿ ಆರ್.ಐ.ಬ್ಯಾಹಟ್ಟಿ, ಜಿತೇಂದ್ರ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.