ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಯಾಚಿಸಿದ ಪಿಡಿಒ; ಕಣ್ಣೀರು ಹಾಕಿದ ಸಮಾಜಕಲ್ಯಾಣ ಅಧಿಕಾರಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್‌ ತರಾಟೆ
Last Updated 13 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಚೇರಿಗೆ ಬರುವ ಎಸ್‌ಸಿ, ಎಸ್‌ಟಿ ಸಮಾಜದವರಿಗೆ ಕೂರಲು ಆಸನ ನೀಡದೇ ಅವಮಾನ ಮಾಡಿರುವ ಕುಸುಗಲ್‌ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಪಟ್ಟು ಹಿಡಿದರು.

‘ಭಾರೀ ಮಳೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡುವಲ್ಲಿ ಕುಸುಗಲ್‌ ಪಿಡಿಒ ತಾರತಮ್ಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ನಿಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೇ ನಿಮ್ಮ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ. ಪರಿಹಾರ ಹಂಚಿಕೆ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಪಿಡಿಒಗೆ ಎಚ್ಚರಿಕೆ ನೀಡಿದರು.

‘ಇನ್ನು ಮುಂದೆ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತೇನೆ. ದಲಿತ ಮುಖಂಡರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಪಿಡಿಒ ಶಶಿಧರ ಮಂಟೂರ ಹೇಳಿದರು.

ಅಧಿಕಾರಿ ಕಣ್ಣೀರು:

ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ ಅವರನ್ನು ತಹಶೀಲ್ದಾರ್‌ ಮಾಡ್ಯಾಳ ತರಾಟೆಗೆ ತೆಗೆದುಕೊಂಡ ಪರಿಣಾಮ ಅವರು ಸಭೆಯಲ್ಲಿ ಕಣ್ಣೀರು ಸುರಿಸಿದರು.

ಅಸ್ಪೃಶ್ಯತೆ ಜೀವಂತ:

‘ಶಿರಗುಪ್ಪಿ ಮತ್ತು ಉಮಚಗಿ ಗ್ರಾಮಗಳಲ್ಲಿ ಚಹಾ ಮತ್ತು ಕ್ಷೌರದ ಅಂಗಡಿಯಲ್ಲಿ ಅಸ್ಪೃಶ್ಯತೆ ಆಚರಣೆ ಅಸ್ವಿತ್ವದಲ್ಲಿದೆ’ ಎಂದು ದಲಿತ ಮುಖಂಡರಾದ ಕೆಂಚಪ್ಪ ಮಲ್ಲಮ್ಮನವರ, ಪ್ರೇಮನಾಥ ಚಿಕ್ಕತುಂಬಳ ದೂರಿದರು.

‘ಅಸ್ಪೃಶ್ಯತೆ ಆಚರಣೆ ಇರುವ ಕುರಿತು ಖಚಿತ ಮಾಹಿತಿ ನೀಡಿದರೆ ಪರಿಶೀಲಿಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು’ ಎಂದು ಮಾಡ್ಯಾಳ ಹೇಳಿದರು.

‘ಹುಬ್ಬಳ್ಳಿ ವಾಸವಿ ನಗರದಲ್ಲಿ ಇರುವ ಆರ್‌ಎನ್‌ಎಸ್‌ ವಿದ್ಯಾನಿಕೇತನದಲ್ಲಿ ಸಂವಿಧಾನ ದಿನ ಸಂದರ್ಭದಲ್ಲಿ ಅಂಬೇಡ್ಕರ್‌ ಸಂವಿಧಾನ ರಚಿಸಿದವರಲ್ಲ ಎಂದು ಮಕ್ಕಳಿಗೆ ಹೇಳಿಕೊಡಲಾಗಿದ್ದು, ಆ ಶಾಲೆಯ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಚಿಕ್ಕತುಂಬಳ ಒತ್ತಾಯಿಸಿದರು.

‘ಗೋಕುಲ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ದಲಿತೆ ಎಂಬ ಕಾರಣಕ್ಕೆ ಗ್ರಾಮಸ್ಥರು ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಗುರುನಾಥ ಉಳ್ಳಿಕಾಶಿ ದೂರಿದರು.

‌‘ಹುಬ್ಬಳ್ಳಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮಳಿಗೆಗ‌ಳಲ್ಲಿ ಎಸ್‌ಸಿ, ಎಸ್‌ಟಿ ಬೀದಿ ಬದಿ ವ್ಯಾಪಾರಿಗಳಿಗೆ ಮೀಸಲಾತಿ ನೀಡಬೇಕು’ ಎಂದು ಮುಖಂಡ ಬಸವರಾಜ ತೇರದಾಳ ಆಗ್ರಹಿಸಿದರು.

‘ಕುಸುಗಲ್‌ನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮಂಜೂರಾಗಿರುವ 5 ಗುಂಟೆ ಜಾಗದ ಹಕ್ಕುಪತ್ರ ನೀಡಬೇಕು’ ಎಂದು ಮಾರುತಿ ದಾಲಾಯತ್‌, ಗುರುನಾಥ ದಾಲಾಯತ್‌ ಒತ್ತಾಯಿಸಿದರು.

‘ಹಳ್ಯಾಳ ಗ್ರಾಮ ಪಂಚಾಯ್ತಿಯಲ್ಲಿ ಎರಡು ವರ್ಷಗಳಿಂದ ಗ್ರಾಮ ಸಭೆ ನಡೆದಿಲ್ಲ; ಅನುದಾನ ಬಳಕೆಯಾಗುತ್ತಿಲ್ಲ. ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುತ್ತಿಲ್ಲ’ ಎಂದು ಕೆಂಚಪ್ಪ ಮಲ್ಲಮ್ಮನವರ ದೂರಿದರು.

‘ಛಬ್ಬಿ ಗ್ರಾಮದಲ್ಲಿ ದಲಿತ ಸಮಾಜಕ್ಕೆ ಸೇರಿದ ಜಮೀನಿನಲ್ಲಿ ಕೆಎಂಎಫ್‌ ಘಟಕ ಆರಂಭಿಸುತ್ತಿರುವುದನ್ನು ತಕ್ಷಣ ತಡೆಹಿಡಿಯಬೇಕು’ ಎಂದು ಕೆಲವರು ಒತ್ತಾಯಿಸಿದರೆ, ‘ಸುಳ್ಳ ಗ್ರಾಮ ಪಂಚಾಯ್ತಿಯಲ್ಲಿ ಮೂರು ವರ್ಷಗಳಿಂದ ಗ್ರಾಮ ಸಭೆ ನಡೆದಿಲ್ಲ. ಆಶ್ರಯ ಯೋಜನೆ ಫಲಾನುಭವಿಗಳ ಆಯ್ಕೆ ಮಾಡಿಲ್ಲ’ ಎಂದು ಗ್ರಾಮದ ದಲಿತ ಮುಖಂಡರಾದ ಸುರೇಶ ಮಾದರ, ಜಗದೀಶ ಮಾದರ, ಶಂಕ್ರಪ್ಪ ಮಾದರ ದೂರಿದರು.

ತಾ.ಪಂ. ಅಧ್ಯಕ್ಷೆ ಚನ್ನಮ್ಮ ಗೊರ್ಲ, ತಹಶೀಲ್ದಾರ್‌ ಪ್ರಕಾಶ ನಾಶಿ, ತಾ.ಪಂ. ಸಹಾಯಕ ನಿರ್ದೇಶಕ ಗಂಗಾಧರ ಕಂದಕೂರ, ದಲಿತ ಮುಖಂಡರಾದ ಸುರೇಶ ಖಾನಾಪುರ, ಶಂಕರ ಅಜಮನಿ, ಶಿವಶಂಕರ ಭಂಡಾರಿ, ನರಸಿಂಗ ಪಾಮಲೆ, ಗಂಗಾಧರ ಪೆರೂರು, ಲಕ್ಷ್ಮಣ ಕೊಪ್ಪಳ, ಅರುಣ ಹುದಲಿ ಇದ್ದರು.

***

ಸಭೆ ಗಮನಕ್ಕೆ ಬಂದಿರುವ ಸಮಸ್ಯೆಗಳಲ್ಲಿ ಪಾಲಿಕೆ ವ್ಯಾಪ್ತಿಗೆ ಸಂಬಂಧ ಪಟ್ಟ ವಿಷಯಗಳನ್ನು ಆಯುಕ್ತರೊಂದಿಗೆ, ಪೊಲೀಸ್‌ ಇಲಾಖೆ ವ್ಯಾಪ್ತಿಯ ಪ್ರಕರಣಗಳನ್ನು ಕಮಿಷನರ್‌, ಎಸ್‌ಪಿ ಅವರೊಂದಿಗೆ ಚರ್ಚಿಸಿ, ಮೂರು ತಿಂಗಳ ಒಳಗಾಗಿ ಪರಿಹಾರ ಒದಗಿಸಲಾಗುವುದು

–ಶಶಿಧರ ಮಾಡ್ಯಾಳ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT