ಶನಿವಾರ, ಮೇ 15, 2021
25 °C
ಸೇವಾ ಭಾರತಿ ಟ್ರಸ್ಟ್– ಕೆಎಲ್‌ಇ ಸಂಸ್ಥೆ ಸಹಯೋಗದಲ್ಲಿ ಆರಂಭ; 80 ಹಾಸಿಗೆಗಳ ಸಾಮರ್ಥ್ಯ

ಆಮ್ಲಜನಕ ಸಹಿತ ಉಚಿತ ಕೋವಿಡ್ ಕೇರ್‌ ಸೆಂಟರ್

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕಿತರ ಆರೈಕೆಗಾಗಿ ಸೇವಾ ಭಾರತಿ ಟ್ರಸ್ಟ್ ಮತ್ತು ಕೆಎಎಲ್‌ಇ ಸಂಸ್ಥೆ ಸಹಯೋಗದಲ್ಲಿ, 80 ಹಾಸಿಗೆಗಳ ಸಾಮರ್ಥ್ಯದ ಆಮ್ಲಜನಕ ಸಹಿತ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿದೆ. ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮೈದಾನದ ಬಳಿ, ಬಿವಿಬಿ ದೇಶಪಾಂಡೆ ಸ್ಕಾಲರ್ಸ್ ಹೌಸ್ ಕಟ್ಟಡದಲ್ಲಿ ಸೆಂಟರ್‌ ಇದ್ದು, ಉಚಿತವಾಗಿ ವೈದ್ಯಕೀಯ ಆರೈಕೆ ಸಿಗಲಿದೆ.

ಸೋಂಕಿನ ಲಕ್ಷಣ ಇರುವವವರು ಹಾಗೂ ಇಲ್ಲದವರೂ ಸೆಂಟರ್‌ಗೆ ದಾಖಲಾಗಬಹುದು. ರೋಗಿಗಳ ಆಮ್ಲಜನಕದ ಮಟ್ಟ ಕನಿಷ್ಠ 93 ಇರಬೇಕು. ಆರ್‌ಟಿಪಿಆರ್‌ ಕೋವಿಡ್ ಪರೀಕ್ಷೆಯ ವರದಿ ಮತ್ತು ಸಿಟಿ ಸ್ಕ್ಯಾನ್ ವರದಿಯನ್ನು ಕಡ್ಡಾಯವಾಗಿ ತರಬೇಕು.

ವೃತ್ತಿಪರರ ತಂಡದಿಂದ ನಿಗಾ

‘ಡಾ.ಮಹೇಶ ನಾಲವಾಡ, ಡಾ.ಎಸ್‌.ಎ.ಪಾಟೀಲ, ಡಾ.ಮಧುಸೂದನ ಕುಲಕರ್ಣಿ, ಕೆಎಲ್‌ಇ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಡಾ.ಸಂಜಯ ಪೀರಾಪುರ ನೇತೃತ್ವದ ವೈದ್ಯಕೀಯ ತಂಡದ ನೇತೃತ್ವದಲ್ಲಿ 7 ವೈದ್ಯರು, 15 ಶುಶ್ರೂಷಕರು, 20 ಮಂದಿ ಸಿಬ್ಬಂದಿಯ ವೃತ್ತಿಪರರ ತಂಡವು ದಿನದ 24 ತಾಸು ಕೇಂದ್ರದಲ್ಲಿ ಕೆಲಸ ಮಾಡಲಿದೆ’ ಎಂದು ಸೇವಾ ಭಾರತಿ ಟ್ರಸ್ಟ್‌ನ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ರಘು ಅಕಮಂಚಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗಿಗಳ ಸ್ಥಿತಿ ಗಂಭೀರವಾದರೆ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಒಂದು ಆಂಬುಲೆನ್ಸ್‌ ಸದಾ ಸನ್ನದ್ಧವಾಗಿರಲಿದೆ. ಜಿಲ್ಲಾಡಳಿತವು ರೋಗಿಗಳಿಗೆ ಬೇಕಾದ ಆಮ್ಲಜನಕ ಸಿಲಿಂಡರ್, ಪೌಷ್ಟಿಕ ಆಹಾರ ಹಾಗೂ ಅಗತ್ಯವಿರುವ ಔಷಧ ಪೂರೈಸಲಿದೆ. ಉಳಿದ ವ್ಯವಸ್ಥೆಯನ್ನು ಟ್ರಸ್ಟ್ ಮತ್ತು ಕೆಎಲ್ಇ ಸಂಸ್ಥೆಯಿಂದ ಮಾಡಿಕೊಳ್ಳಲಾಗಿದೆ. ಸೋಂಕಿತರು ಕೇಂದ್ರದ ಸಹಾಯವಾಣಿಯನ್ನು ಸಂಪರ್ಕಿಸಿ, ಅಗತ್ಯ ವರದಿಗಳೊಂದಿಗೆ ಇಲ್ಲಿಗೆ ಬಂದು ದಾಖಲಾಗಬಹುದು’ ಎಂದರು.

ಸ್ವಯಂಸೇವಕರ ಸೇವೆ

‘ಕೇಂದ್ರದಲ್ಲಿ ಟ್ರಸ್ಟ್‌ನ 20 ಮಂದಿಯ ಸ್ವಯಂಸೇವಕರ ತಂಡವೂ ದಿನವಿಡೀ ಕೆಲಸ ಮಾಡಲಿದೆ. ರೋಗಿಗಳ ಕಡೆಯವರಿಗೆ ಮಾಹಿತಿ ಒದಗಿಸುವುದು, ಹೊರಗಿನಿಂದ ಅಗತ್ಯವಸ್ತುಗಳನ್ನು ತರಿಸಿಕೊಡುವುದು ಸೇರಿದಂತೆ, ಇತರ ಕಾರ್ಯಗಳನ್ನೂ ತಂಡ ನಿರ್ವಹಿಸಲಿದೆ. ತಂಡದ ಸದಸ್ಯರ ಪ್ರತ್ಯೇಕವಾಗಿರಲು ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದು ಕೇಂದ್ರದ ಮೇಲ್ವಿಚಾರಕ ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಡಾ. ಸಂದೀಪ ಬೂದಿಹಾಳ ತಿಳಿಸಿದರು.

5ರಂದು ಉದ್ಘಾಟನೆ

‘ಕೇಂದ್ರದ ಉದ್ಘಾಟನೆ ಮೇ 5ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ. ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ’ ಎಂದು ರಘು ಅಕಮಂಚಿ ತಿಳಿಸಿದರು.

ಕೇಂದ್ರದ ಸಹಾಯವಾಣಿ

* 74117 34247

* 74117 44247

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು