ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಮಿಯಾನ ಕಾರ್ಮಿಕರ ಕಲ್ಯಾಣಕ್ಕೆ ಬದ್ಧ

ಶೃಂಗಾರ್‌ –2’ ಸಮಾವೇಶ: ಸಚಿವ ಸಂತೋಷ್ ಲಾಡ್ ಭರವಸೆ
Published 7 ಆಗಸ್ಟ್ 2023, 6:08 IST
Last Updated 7 ಆಗಸ್ಟ್ 2023, 6:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಸಂಘಟಿತ ವಲಯದಲ್ಲಿರುವ ಶಾಮಿಯಾನ ಕಾರ್ಮಿಕ‌ರ ಕಲ್ಯಾಣಕ್ಕಾಗಿ ಶಾಮಿಯಾನ ಕಾರ್ಮಿಕರ ಕಲ್ಯಾಣ ಸಂಘ ಸ್ಥಾಪಿಸುವ ಚಿಂತನೆ ಇದೆ‘ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದರು.

ನಗರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್ಸ್‌, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ  ‘ಶೃಂಗಾರ್‌ –2’ ಸಮಾವೇಶದ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಮಿಯಾನ ಮಾಲೀಕರು ಸೆಸ್‌ ನೀಡಿದರೆ, ಅದಕ್ಕೆ ಸರ್ಕಾರದ ಅನುದಾನ ಸೇರಿಸಿ ಸಂಘ ಸ್ಥಾಪನೆ ಮಾಡಬಹುದು. ಇದರಿಂದ ಕಾರ್ಮಿಕರಿಗೂ ಅನುಕೂಲವಾಗುತ್ತದೆ’ ಎಂದರು. 

‘ಕೆಲಸದ ವೇಳೆ ಸಂಭವಿಸುವ ಅವಘಡಗಳಿಂದ ಕಾರ್ಮಿಕರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಎಲ್ಲರೂ ತಪ್ಪದೆ ಆರೋಗ್ಯ ವಿಮೆ ಮಾಡಿಸಬೇಕು. ಜಿಎಸ್‌ಟಿ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್ ಮಾತನಾಡಿ, ‘ಶಾಮಿಯಾನ ಕಾರ್ಮಿಕರದ್ದು ಪರಿಶ್ರಮದ ಕೆಲಸ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಶಾಮಿಯಾನದವರ ಕೊಡುಗೆ ಇರುತ್ತದೆ. ಆಧುನಿಕ ತಂತ್ರಜ್ಞಾನ, ಪರಿಕರಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು’ ಎಂದರು.

‘ಈ ಹಿಂದೆ ನಾನು ಸಂಘಕ್ಕೆ ಜಾಗ ಮಂಜೂರು ಮಾಡಿಸಿ, ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೆ. ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಆಲ್‌ ಇಂಡಿಯಾ ಟೆಂಟ್‌ ಡೀಲರ್ಸ್ ವೆಲ್ಫೇರ್‌ ಆರ್ಗನೈಸೇಷನ್‌ ಉಪಾಧ್ಯಕ್ಷ ಪೂರ್ಣಚಂದ್ರ ರಾವ್ ಮಾತನಾಡಿ,  ‘ಸಂಘದಲ್ಲಿ 5 ಸಾವಿರ ಸದಸ್ಯರು, ನೋಂದಾಯಿತ 25 ಸಾವಿರ ಕಾರ್ಮಿಕರಿದ್ದಾರೆ. ಇವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಕೆಲಸದ ವೇಳೆ ಅವಘಡ ಸಂಭವಿಸಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ 15ಕ್ಕೂ ಅಧಿಕ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸರ್ಕಾರ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಮುಖರಾದ ಎನ್.ರಾಮರಾವ್, ಕೆ.ನರಸಿಂಹಮೂರ್ತಿ ಅಪ್ಪಣ್ಣ, ಮೋಹನ್ ಎಂ.ಗಜಕೋಶ, ಮನೋಹರ ಶೆಟ್ಟಿ, ಗಂಗಾಧರ ದುಬೆ, ಮಯೂರ ಮೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT