ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಮುನೇನಕೊಪ್ಪ ಭೇಟಿ, ಹಾನಿ ಪರಿಶೀಲನೆ

ನಸುಕಿನಲ್ಲಿ ನುಗ್ಗಿದ ನೀರು; ನಿದ್ದೆಯಿಂದೆದ್ದ ಗ್ರಾಮ
Last Updated 7 ಸೆಪ್ಟೆಂಬರ್ 2022, 2:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಣ್ಣೆಹಳ್ಳವು ಮಂಗಳವಾರ ಉಕ್ಕಿ ಹರಿದಿದೆ. ನಸುಕಿನಲ್ಲಿ ಬೆಳಿಗ್ಗೆ 3ರ ಹೊತ್ತಿಗೆ ತಾಲ್ಲೂಕಿನ ಕಿರೇಸೂರು, ಹೆಬಸೂರು, ಇಂಗಳಹಳ್ಳಿ, ನಾಗರಹಳ್ಳಿ, ಮಂಟೂರು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನರ ಬದುಕು ಅಸ್ತವ್ಯಸ್ತಗೊಂಡಿದೆ.

ಪ್ರವಾಹದಿಂದ ಎಚ್ಚೆತ್ತ ಜನ ತಕ್ಷಣ ತಮ್ಮ ಕುಟುಂಬದವರೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ವಿಷಯ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತವು ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ತೆರೆದು, ಸಂತ್ರಸ್ತರಿಗೆ ಆಹಾರ ವ್ಯವಸ್ಥೆ ಮಾಡಿದೆ. ತಾಸುಗಟ್ಟಲೆ ನಿಂತ ನೀರಿನಿಂದಾಗಿ ಹಲವು ಮನೆಗಳ ಗೋಡೆ ಕುಸಿದಿದೆ.

‘ಪಕ್ಕದ ಮನೆಯವರು ಬಾಗಿಲು ಬಡಿದಾಗಲೇ ಪ್ರವಾಹ ಬಂದಿರುವುದು ಗೊತ್ತಾಯಿತು. ಅಷ್ಟೊತ್ತಿಗೆ ಇಡೀ ಊರೇ ಎಚ್ಚರಗೊಂಡಿತ್ತು. ಸರಕು–ಸಾಮಾನುಗಳನ್ನು ಮೇಲಕ್ಕಿಟ್ಟು, ಸುರಕ್ಷಿತ ಸ್ಥಳಕ್ಕೆ ತೆರಳಿದವು’ ಎಂದು ಕಿರೇಸೂರಿನ ಶಿವಾನಂದ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವಾಹದಿಂದಾಗಿ ವಿವಿಧ ಗ್ರಾಮಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ಕೆಲವೆಡೆ ಕಾಳಜಿ ಕೇಂದ್ರಗಳನ್ನು ತೆರೆದು ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ. ಯಾವುದೇ ಜೀವಹಾನಿಯ ವರದಿಯಾಗಿಲ್ಲ’ ಎಂದು ತಹಶೀಲ್ದಾರ್ ಪ್ರಕಾಶ ನಾಶಿ ತಿಳಿಸಿದರು.

ಕುಸಿದ ಮನೆ: ಮಳೆಗೆ ಹುಬ್ಬಳ್ಳಿಯ ಕಮರಿಪೇಟೆಯ ಅಬಿದಾ ಬೇಗಂ ಸಿಂಗೋಟಿ ಅವರ ಮನೆ ಭಾಗಶಃ ಕುಸಿದಿದೆ. ತಾಲ್ಲೂಕಿನ ಅದರಗುಂಚಿಯಲ್ಲಿ ಹಟೇಲಸಾಬ ಛಬ್ಬಿ ಅವರ ಮನೆ ಮುಂಭಾಗ ಬಿದ್ದು ಹೋಗಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಸ್ಥಳಕ್ಕೆ ತಾಲ್ಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಳ್ಳಗಳ ಪಥ ಬದಲಾವಣೆಯಿಂದ ಪ್ರವಾಹ: ಸಚಿವ

‘ಬೆಣ್ಣೆಹಳ್ಳ, ತುಪ್ಪರಿಹಳ್ಳ, ನಿಗದಿ ಹಳ್ಳಗಳು ತಮ್ಮ ಪಥ ಬದಲಾಯಿಸಿದ್ದರಿಂದ ಗ್ರಾಮಗಳು ಪ್ರವಾಹ ಭೀತಿ ಎದುರಿಸುವಂತಾಗಿದೆ. ಹಳ್ಳಗಳ ಪಾತ್ರದ ಒತ್ತುವರಿ ಹಾಗೂ ತೋಟ ನಿರ್ಮಾಣವೂ ಇದಕ್ಕೆ ಕಾರಣ’ ಎಂದು ವಸತಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ತಾಲ್ಲೂಕಿನ ಪ್ರವಾಹಪೀಡಿತ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರವಾಹ ಬಾರದಂತೆ ಹಳ್ಳಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ತುಪ್ಪರಿಹಳ್ಳ ಅಭಿವೃದ್ಧಿಗೆ ₹312 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ಬೆಣ್ಣೆಹಳ್ಳಕ್ಕೂ ಯೋಜನೆ ರೂಪಿಸಲಾಗುತ್ತಿದೆ. ಮಳೆಹಾನಿ ಸಮೀಕ್ಷೆ ನಡೆಸಿ ಶೀಘ್ರ ಪರಿಹಾರ ವಿತರಿಸಲಾಗುವುದು’ ಎಂದರು.

‘ಹೆಬಸೂರು, ಇಂಗಳಹಳ್ಳಿ ಗ್ರಾಮಗಳ ಶಾಲೆಗಳು ಸೇರಿದಂತೆ ಹಳ್ಳದ ಪಕ್ಕದಲ್ಲಿರುವ ಶಾಲೆಗಳನ್ನು ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ತಾಲೂಕು ಪಂಚಾಯಿತಿ ಗಂಗಾಧರ ಕಂದಕೂರ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ ಗೋಕಾಕ, ಕಿರೇಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ‌ಸಂಜುರೆಡ್ಡಿ ನೀಲರೆಡ್ಡಿ, ಹೆಬಸೂರು ಪಂಚಾಯಿತಿ ಅಧ್ಯಕ್ಷೆ ಮಲ್ಲವ್ವ ಕುರುಡಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT