ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಗೆ ಶೆಟ್ಟರ್‌ ಬೆಂಬಲಿಗರ ಮರುಸೇರ್ಪಡೆ

Published 28 ಫೆಬ್ರುವರಿ 2024, 11:28 IST
Last Updated 28 ಫೆಬ್ರುವರಿ 2024, 11:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಗದೀಶ ಶೆಟ್ಟರ್‌ ಬಿಜೆಪಿಗೆ ಮರುಸೇರ್ಪಡೆಯಾಗಿ ಒಂದು ತಿಂಗಳ ನಂತರ ಅವರ ಬೆಂಬಲಿಗರ ಮರುಸೇರ್ಪಡೆ ಕಾರ್ಯಕ್ರಮ ಬುಧವಾರ ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ನಡೆಯಿತು. ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವುಕಾರ್‌, ವಿರೂಪಾಕ್ಷ ರಾಯನಗೌಡರ, ಸೇರಿದಂತೆ 90ಕ್ಕೂ ಹೆಚ್ಚು ಜನ ಬೆಂಬಲಿಗರು ಸೇರ್ಪಡೆಯಾದರು.

ಇದಕ್ಕೂ ಮುಂಚೆ ಸಭೆಯನ್ನುದ್ದೇಶಿಸಿ ಮಾತನಾಡಿದ ಜಗದೀಶ ಶೆಟ್ಟರ್‌, ‘ಪಕ್ಷದ ಮೂಲಕಾರ್ಯಕರ್ತರು ಇವತ್ತು ವಾಪಸ್ಸಾಗಿದ್ದಾರೆ. ಹಿಂದೆ ಇವರೆಲ್ಲ ಪಕ್ಷದ ಕಾರ್ಯಕರ್ತರಾಗಿ ದುಡಿದಿದ್ದಾರೆ. ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರ ಆಗಮನದಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ’ ಎಂದು ಹೇಳಿದರು.

ಜನರು ಈಗ ಕಾಂಗ್ರೆಸ್‌ ನಂಬುವ ಸ್ಥಿತಿಯಲ್ಲಿಲ್ಲ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಬರಲಿದ್ದಾರೆ. ಕಾಂಗ್ರೆಸ್‌ ಅಸ್ತಿತ್ವ ಕ್ಷೀಣಿಸುತ್ತಿದ್ದು, ಬಿಜೆಪಿ ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿದೆ ಎಂದು ನುಡಿದರು.

ವಿಧಾನಸಭೆಯ ಆವರಣದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಕಾಂಗ್ರೆಸ್ಸಿಗರು ಘೋಷಣೆ ಕೂಗುತ್ತಾರೆಂದರೆ ಅವರ ಮನಸ್ಥಿತಿ ಎಂತಹದ್ದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನೂ ಅವರು ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಹೊರಬಂದಿಲ್ಲ ಎಂದು ಟೀಕಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗಳಿಸಿದಷ್ಟು ಸ್ಥಾನಗಳನ್ನು ಕೂಡ ಈ ಸಲ ಕಾಂಗ್ರೆಸ್‌ ಗಳಿಸಲ್ಲ. ಈ ಸಲ ಬಿಜೆಪಿ ದೇಶದಲ್ಲಿ 370ಕ್ಕೂ ಹೆಚ್ಚು ಹಾಗೂ ಎನ್‌.ಡಿ.ಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲುವ ವಿಶ್ವಾಸವಿದೆ ಎಂದರು.

‘ಇಡೀ ದೇಶದಲ್ಲಿ ಬಿಜೆಪಿಗೆ ದೊಡ್ಡ ನೆಲೆ, ಶಕ್ತಿ ಇದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕೈಗಾರಿಕೆಯಲ್ಲಿ ಪ್ರಗತಿಯಾಗಿದೆ, ರಸ್ತೆ, ಮೂಲಸೌಕರ್ಯಗಳು ಅಭಿವೃದ್ಧಿಯಾಗಿವೆ. ಮುಂದುವರಿದ ರಾಷ್ಟ್ರಗಳು ನಾಚಿಕೆ ಪಡುವಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ’ ಎಂದು ಪ್ರಶಂಸಿಸಿದರು.

ತೆರಿಗೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಕಾರಣಕ್ಕಾಗಿ ವೃಥಾ ಆರೋಪ ಮಾಡುತ್ತಿದ್ದಾರೆ. ನೀತಿ ಆಯೋಗ ತೀರ್ಮಾನ ಕೈಗೊಂಡಂತೆ ತೆರಿಗೆ ಹಂಚಿಕೆ ಮಾಡಲಾಗುತ್ತಿದೆ. ನೀತಿ ಆಯೋಗದ ಸದಸ್ಯರಾಗಿರುವ ಸಿದ್ದರಾಮಯ್ಯ ಅಲ್ಲಿ ಪ್ರಶ್ನೆ ಮಾಡದೆ ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಶಂಕರ ಪಾಟೀಲ ಮುನೇನಕೊಪ್ಪ, ಎಂ.ನಾಗರಾಜ, ವೀರಣ್ಣ ಸವಡಿ, ರಾಜಣ್ಣ ಕೊರವಿ, ಮಹೇಂದ್ರ ಕೌತಾಳ, ರೂಪಾ ಶೆಟ್ಟಿ, ಸಂತೋಷ ಚವ್ಹಾಣ, ಇತರರು ಉಪಸ್ಥಿತರಿದ್ದರು.

ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಮೂರ್ತಿ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT