ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಪ್ರಲ್ಹಾದ ಜೋಶಿ ಎದುರು ಶಾಸಕ ವಿನಯ ಕುಲಕರ್ಣಿ ಪತ್ನಿ ಕಣಕ್ಕೆ?

ಮತದಾರರನ್ನು ಸೆಳೆಯಲು ಕಾಂಗ್ರೆಸ್ ಚಿಂತನೆ
Published 25 ಆಗಸ್ಟ್ 2023, 21:16 IST
Last Updated 25 ಆಗಸ್ಟ್ 2023, 21:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

ಈ ಕ್ಷೇತ್ರದಲ್ಲಿ 1996ರಿಂದ ಬಿಜೆಪಿ ನಿರಂತರವಾಗಿ ಗೆಲ್ಲುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಾಲ್ಕು ಅವಧಿಯಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಎದುರು ಅಭ್ಯರ್ಥಿಯಾಗಿ ಶಿವಲೀಲಾ ಅವರನ್ನು ಕಣಕ್ಕಿಳಿಸಲು  ಪಕ್ಷದ ಮುಖಂಡರು ಚರ್ಚೆ ನಡೆಸಿದ್ದಾರೆ.

ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ವಿನಯ ಕುಲಕರ್ಣಿ ಅವರು ಸ್ಪರ್ಧಿಸಿ, ಸೋತಿದ್ದರು. 8 ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಈ ಲೋಕಸಭಾ ಕ್ಷೇತ್ರದಾದ್ಯಂತ ಓಡಾಡಿ, ವಿನಯ ಕುಲಕರ್ಣಿ ಜನಸಂಪರ್ಕ ಬೆಳೆಸಿಕೊಂಡಿದ್ದಾರೆ.

ಧಾರವಾಡ, ಹುಬ್ಬಳ್ಳಿ–ಧಾರವಾಡ ಪೂರ್ವ, ಹುಬ್ಬಳ್ಳಿ–ಧಾರವಾಡ ಪಶ್ಚಿಮ, ಹುಬ್ಬಳ್ಳಿ– ಧಾರವಾಡ ಕೇಂದ್ರ, ನವಲಗುಂದ, ಕಲಘಟಗಿ, ಕುಂದಗೋಳ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ಸೇರಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ. ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾರೆ.

ವಿನಯ ಗೆಲುವಿನ ಹಿಂದಿನ ಶಕ್ತಿ

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯೊಳಗೆ ಪ್ರವೇಶಿಸದಂತೆ  ವಿನಯ ಕುಲಕರ್ಣಿ ನ್ಯಾಯಾಲಯದಿಂದ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಅದರಿಂದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ಒಂದು ದಿನವೂ ಪ್ರಚಾರಕ್ಕೆ ಬರಲು ಆಗಲಿಲ್ಲ. ಆಗ ಅವರ ಪರವಾಗಿ ಪತ್ನಿ ಶಿವಲೀಲಾ  ಪ್ರಚಾರ ಕೈಗೊಂಡರು. ಇಡೀ ಕ್ಷೇತ್ರದ ತುಂಬ ಸುತ್ತಾಡಿ, ಮತದಾರರನ್ನು ಭಾವನಾತ್ಮಕವಾಗಿ ಸೆಳೆದರು. 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ವಿನಯ ಅವರನ್ನು ಗೆಲ್ಲಿಸಿದರು.

ಶಿವಲೀಲಾ ಅವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅವರನ್ನು ಕಣಕ್ಕಿಳಿಸಿ ಸಮುದಾಯದವರನ್ನು ಸೆಳೆಯಬಹುದು ಎಂಬ ಆಲೋಚನೆ ಕಾಂಗ್ರೆಸ್‌ ನಾಯಕರಲ್ಲಿದೆ. ‘ಬಿಜೆಪಿ ತಮ್ಮ ಸಮುದಾಯದ ಮುಖಂಡರನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ಹೊಂದಿರುವವರ ಮತಗಳನ್ನು ಗಳಿಸಬಹುದು’ ಎಂಬ ಲೆಕ್ಕಾಚಾರವೂ ಅವರಲ್ಲಿದೆ.

ಲೋಕಸಭೆ ಚುನಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಈವರೆಗೆ ನನ್ನನ್ನು ಯಾವ ನಾಯಕರೂ ಸಂಪರ್ಕಿಸಿಲ್ಲ.

– ಶಿವಲೀಲಾ ಕುಲಕರ್ಣಿ ವಿನಯ ಕುಲಕರ್ಣಿ ಪತ್ನಿ

ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಆಗಸ್ಟ್ 28 29ರಂದು ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು

–ಅನಿಲಕುಮಾರ ಪಾಟೀಲ ಅಧ್ಯಕ್ಷ ಕಾಂಗ್ರೆಸ್‌ ಧಾರವಾಡ ಜಿಲ್ಲಾ (ಗ್ರಾಮೀಣ) ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT