ಭಾನುವಾರ, ಆಗಸ್ಟ್ 14, 2022
24 °C
ದೇಹದಾನಕ್ಕೆ ಅಡ್ಡಿಯಾದ ಕೊರೊನಾ; ಮಣ್ಣುಪಾಲಾಗುವ ದೇಹಗಳು

ಅಧ್ಯಯನಕ್ಕೆ ಮೃತದೇಹಗಳ ಕೊರತೆ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದೇಹದಾನಿಗಳು ತಮ್ಮ ಮರಣದ ನಂತರ ದೇಹವನ್ನು ದಾನ ಮಾಡುವುದಾಗಿ ವಾಗ್ದಾನ/ ನೋಂದಣಿ ಮಾಡಿದ್ದರೂ ಅಂಥವರ ದೇಹ ಪಡೆದುಕೊಳ್ಳುವಲ್ಲಿ ಕೋವಿಡ್‌ ಅಡ್ಡಿಯಾಗಿದೆ. ದೇಹದಾನಿಗಳ ಮರಣದ ನಂತರ ದೇಹ ವೈದ್ಯಕೀಯ ಮಹಾವಿದ್ಯಾಲಯವನ್ನು ಸೇರುವ ಬದಲು ಮಣ್ಣುಪಾಲಾಗುವಂತಾಗಿದೆ. ಮುಂದಿನ ಅವಧಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮೃತದೇಹಗಳ ಕೊರತೆ ಕಾಡಲಿದೆ.

ಕೋವಿಡ್‌ ಸೋಂಕು ವ್ಯಾಪಿಸಿರುವ ಈ ಸಂದರ್ಭದಲ್ಲಿ ಮೃಹದೇಹವನ್ನು ಸುಡಬೇಕು ಇಲ್ಲವೇ ಹೂಳಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ದೇಹ ಅಥವಾ ಅಂಗಾಂಗ ದಾನಕ್ಕೆ ಈಗ ಅವಕಾಶ ಇಲ್ಲದಂತಾಗಿದೆ.

ಕೋವಿಡ್‌ ಪೂರ್ವ ಕಾಲದಲ್ಲಿ ಕಿಮ್ಸ್‌ನಲ್ಲಿ ವರ್ಷಕ್ಕೆ 25ರಷ್ಟು ದೇಹದಾನಿಗಳಿಂದ ನೋಂದಣಿ ಆಗುತ್ತಿದ್ದರೂ ಕಾಲೇಜು ಸೇರೋದು 10–12 ದೇಹಗಳು ಮಾತ್ರ. ಬೆಳಗಾವಿ ಜಿಲ್ಲೆಯಲ್ಲಿ ವಾರ್ಷಿಕ ಅಂದಾಜು 35ರಿಂದ 40 ದೇಹಗಳು ಸಿಗುತ್ತಿದ್ದವು.

ದಾನಿಗಳು ಕೋವಿಡ್‌ನಿಂದ ಮೃತಪಟ್ಟಿದ್ದರೆ ಅಂಥವರ ದೇಹವನ್ನು ಸ್ವೀಕರಿಸಲಾಗುತ್ತಿಲ್ಲ. ಸಹಜ ಸಾವು ಸಂಭವಿಸಿದ್ದರೂ ಅಂಥವರ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೋಸ್ಟ್‌ ಡೆತ್‌ ಕೋವಿಡ್‌ ಟೆಸ್ಟ್‌ ನಂತರವೇ ಸ್ವೀಕರಿಸಬೇಕು. ಒಂದೂವರೆ ವರ್ಷಗಳಲ್ಲಿ ನೋಂದಣಿಯೂ ಕಡಿಮೆಯಾಗಿದೆ.

‘ವ್ಯಕ್ತಿ ಮೃತಪಟ್ಟ ನಂತರ 5 ತಾಸಿನೊಳಗೆ ದೇಹವನ್ನು ಪಡೆದು ಅದನ್ನು ಸಂರಕ್ಷಿಸುವ ಪ್ರಕ್ರಿಯೆ ನಡೆಸುವುದು ಕಡ್ಡಾಯ. 5 ತಾಸಿನೊಳಗೆ ಪೋಸ್ಟ್‌ ಡೆತ್‌ ಕೋವಿಡ್‌ ಟೆಸ್ಟ್‌ ರಿಪೋರ್ಟ್‌ ಲಭ್ಯವಾದಲ್ಲಿ ತಕ್ಷಣ ಸ್ವೀಕರಿಸಬಹುದು. ಸದ್ಯಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ದೇಹಗಳ ಕೊರತೆಯಾಗದಿದ್ದರೂ ಮುಂದಿನ ಅವಧಿಗಳಲ್ಲಿ ಕೊರತೆಯಾಗಲಿದೆ’ ಎನ್ನುತ್ತಾರೆ ಕಿಮ್ಸ್‌ನ ಅಂಗರಚನಾ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಎಲಿಗಾರ.

‘ಕೋವಿಡ್ ಆದವರ ಮರಣೋತ್ತರ ಪರೀಕ್ಷೆ ಮಾಡಬಾರದು ಎಂದಿದೆ. ಇತರ ಸಮಸ್ಯೆಗಳಿಂದ ಸಾವಿಗೀಡಾದವರನ್ನು ಆರ್‌ಟಿಪಿಸಿಆರ್‌ ಮಾಡಬೇಕು. ಆದರೆ, ವರದಿ ಬರುವುದಕ್ಕೆ ಮೂರು ದಿನಗಳಾಗುತ್ತದೆ. ಅನುಮಾನ ಇರುವುದರಿಂದ ದೇಹಗಳನ್ನು ಸ್ವೀಕರಿಸುತ್ತಿಲ್ಲ. 52ರಿಂದ 54 ಮಂದಿ ದೇಹದಾನಿಗಳ ಶವ ಸ್ವೀಕರಿಸಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ನ ಡಾ.ಮಹಾಂತೇಶ ರಾಮಣ್ಣವರ.

‘ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಡಿಜಿಎಂ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ ವಾಗ್ದಾನ ಮಾಡಿದವರಿಂದ ದೇಹಗಳನ್ನು ಪೋಸ್ಟ್‌ ಡೆತ್‌ ಕೋವಿಡ್‌ ಟೆಸ್ಟ್‌ ಪ್ರಕ್ರಿಯೆ ನಡೆಸಿಯೇ ಸ್ವೀಕರಿಸಲಾಗುತ್ತಿದೆ’ ಎಂದು ಜಿಮ್ಸ್‌ ನಿರ್ದೇಶಕ ಡಾ. ಪಿ.ಎಸ್‌.ಭೂಸರೆಡ್ಡಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.