ಗುರುವಾರ , ಏಪ್ರಿಲ್ 22, 2021
27 °C
ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಪೊಲೀಸ್‌ಗೆ ವಾಹನ ಡಿಕ್ಕಿ

ಎಳನೀರು ವ್ಯಾಪಾರಿಗೆ ಚಾಕು ಇರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಹಳೇ ಬಸ್‌ ನಿಲ್ದಾಣದ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಗದಗ ಮೂಲದ ಬಶೀರ್‌ ಅಹ್ಮದ್‌ ಅವರ ಹೊಟ್ಟೆ ಹಾಗೂ ಎದೆ ಭಾಗಕ್ಕೆ ದುಷ್ಕರ್ಮಿಗಳು ಶನಿವಾರ ಚಾಕು ಇರಿದಿದ್ದಾರೆ.

ತೀವ್ರ ಗಾಯಗೊಂಡಿರುವ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಐದಾರು ವರ್ಷಗಳಿಂದ ಬಶೀರ್‌ ಎಳನೀರು ಮಾರಾಟ ಮಾಡುತ್ತಿದ್ದರು. ಕೆಲವರ ಜೊತೆ ಬಶೀರ್‌ ದ್ವೇಷ ಕಟ್ಟಿಕೊಂಡಿದ್ದರು. ಕಲಘಟಗಿ ಬಸ್‌ ನಿಲ್ಲುವ ಸ್ಥಳದಲ್ಲಿ ನಿಂತಿದ್ದಾಗ ಅವರಿಗೆ ಚಾಕು ಇರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಸಿ‌ದ್ದೇಶ್ವರ ಪಾರ್ಕ್‌ನ ಚಂದಸಾಬ್‌ ಅಗಸರ ಅವರ ಮನೆ ಬಾಗಿಲು ಮುರಿದು ಅಲ್ಮೇರಾದಲ್ಲಿ ಇದ್ದ ₹26 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಶೆರೇವಾಡ ಗ್ರಾಮದ ಬೆಟದೂರು ಪ್ಲಾಟ್‌ ನಿವಾಸಿ ಶಿಲ್ಪಾ ಬಾಡದ ಅವರ ಮನೆ ಬಾಗಿಲು ಮುರಿದ ಕಳ್ಳರು ₹4.40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ₹2 ಲಕ್ಷ ನಗದು ಹಾಗೂ ₹2.40 ಲಕ್ಷ ಮೌಲ್ಯದ 64 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್‌ಗೆ ಗಾಯ: ತಾಲ್ಲೂಕಿನ ಅಂಚಟಗೇರಿ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಎದುರಿಗೆ ಬಂದ ಬೈಕ್‌ ಪೊಲೀಸ್‌ ಸಿಬ್ಬಂದಿಗೆ ಡಿಕ್ಕಿ ಹೊಡೆದ ಪರಿಣಾಮ, ಪೊಲೀಸ್‌ ಹಾಗೂ ಬೈಕ್‌ ಸವಾರ ಗಾಯಗೊಂಡಿದ್ದಾರೆ.

ಜಗದೀಶ ಬೆಳಗಾವಿ ಗಾಯಗೊಂಡ ಗ್ರಾಮೀಣ ಠಾಣೆ ಕಾನ್‌ಸ್ಟೆಬಲ್‌ ಆಗಿದ್ದಾರೆ. ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.  ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶವ ಪತ್ತೆ: ಉಣಕಲ್‌ ಕೆರೆ ಬಳಿ ಸ್ಥಳೀಯ ನಿವಾಸಿ ಕಲ್ಲಪ್ಪ ತೋರಗಲ್‌ ಅವರ ಶವ ಪತ್ತೆಯಾಗಿದೆ.

ಶವ ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೆರೆ ನೀರು ಹರಿಯುವ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ವ್ಯಕ್ತಿ ಮೃತಪಟ್ಟು ಎರಡು ಮೂರು ದಿನಗಳಾಗಿರಬಹುದು. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದರು.

ಬಂಧನ: ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಪ್ಯಾಂಟಿನ ಜೇಬಿನಲ್ಲಿದ್ದ ಪರ್ಸ್‌ ಹಾಗೂ ಕೊರಳಲ್ಲಿದ್ದ ಬಂಗಾರದ ಸರ ಕಳವು ಮಾಡಿ ಪರಾರಿಯಾಗಿದ್ದ ಗಿರಣಿಚಾಳದ ಕೃಷ್ಣತಾಯಿ ಮಾದರ ಎಂಬಾತನನ್ನು ಕಮರಿಪೇಟೆ ಪೊಲೀಸರು ಬಂಧಿಸಿ, ₹30ಸಾವಿರ ಮೌಲ್ಯದ ಬಂಗಾರ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್‌ ಶ್ಯಾಮರಾಜ್ ಸಜ್ಜನ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಹಾವೇರಿಯ ಸವಣೂರಿನಿಂದ ಕಳವು ಮಾಡಿಕೊಂಡು ಬಂದ ಬೈಕ್‌ ಅನ್ನು ನಗರದಲ್ಲಿ ಮಾರಾಟ ಮಾಡಲು ಮುಂದಾಗಿದ್ದ ನೇಕಾರನಗರದ ಆರೋಪಿ ಶಿವು ಗುಜಲೂರ ಎಂಬಾತನನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಹುಬ್ಬಳ್ಳಿ: ಖರೀದಿಸಿದ ಟ್ರ್ಯಾಕ್ಟರ್‌ಗೆ ನೀಡಬೇಕಾದ ಶೇ 10ರಷ್ಟು ಹಣ ಬಾಕಿ ಇಟ್ಟುಕೊಂಡಿದ್ದಲ್ಲದೆ, ನಕಲಿ ದಾಖಲೆ ಸೃಷ್ಟಿಸಿ ಟ್ರ್ಯಾಕ್ಟರ್‌ ಅನ್ನು ಕಾಯಂ ನೋಂದಣಿ ಮಾಡಿಕೊಂಡು ವಂಚಿಸುವ ಹುನ್ನಾರ ನಡೆಸಿದ್ದ ಆರು ಮಂದಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಆರೋಪಿ ಮಹಾಂತೇಶ ಗಂಗಣ್ಣವರ, ಚಿದಂಬರ ನಾಡಗೌಡರಿಗೆ ಸಂಬಂಧಿಸಿದ ಬೈರಿದೇವರಕೊಪ್ಪದ ಟಾಫೆ ಮೋಟರ್ಸ್ ಆ್ಯಂಡ್ ಟ್ರ್ಯಾಕ್ಟರ್ಸ್‌ ಕಂಪನಿಯಲ್ಲಿ ವೀರನಗೌಡ ಟಕ್ಕನಗೌಡ ಹಾಗೂ ಸೇಲ್ಸ್‌ಮನ್‌ ವಿಕ್ರಮ ಭೋಪಾಲ ಮೂಲಕ ಟ್ರ್ಯಾಕ್ಟರ್‌ ಖರೀದಿ ಮಾಡಿದ್ದ.

ಇದಕ್ಕೆ ನೀಡಬೇಕಾದ ₹6.70 ಲಕ್ಷದಲ್ಲಿ ₹4.89 ಲಕ್ಷ ನೀಡಿದ್ದ. ಬಳಿಕ ಡೀಲರ್ ಜಗದೀಶಗೌಡ ಅಯ್ಯನಗೌಡರ ಎಂಬಾತ ವೀರನಗೌಡ ಹಾಗೂ ವಿಕ್ರಮ ಜತೆ ಸೇರಿಕೊಂಡು, ಆ ಟ್ರ್ಯಾಕ್ಟರ್‌ ಅನ್ನು ತನ್ನ ಷೋ ರೂಂನಿಂದಲೇ ಮಾರಾಟ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಿ ಕಾಯಂ ನೋಂದಣಿ ಮಾಡಿಸಿಕೊಟ್ಟಿದ್ದಾರೆ. ಇದಕ್ಕೆ ತಮಿಳುನಾಡಿನ ಚೋಳಮಂಡಲಂ ಇನ್ವೆಸ್ಟ್ಮೆಂಟ್‌ ಆ್ಯಂಡ್ ಫೈನಾನ್ಸ್‌ನ ಸಾಲ ವಿಭಾಗದ ಮುಖ್ಯ ವ್ಯವಸ್ಥಾಪಕ ಹಾಗೂ ಇದೇ ಸಂಸ್ಥೆಯ ಹುಬ್ಬಳ್ಳಿ ವ್ಯವಸ್ಥಾಪಕ ಕೂಡ ಸಹಕಾರ ನೀಡಿದ್ದಾರೆ ಎಂದು ಚಿದಂಬರ ನಾಡಗೌಡ ದೂರು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.