ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಭದ ಆಮಿಷ | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ₹3.50 ಕೋಟಿ ವಂಚನೆ

Published 13 ಆಗಸ್ಟ್ 2024, 5:26 IST
Last Updated 13 ಆಗಸ್ಟ್ 2024, 5:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ನ ಆರ್.ಆರ್. ಈಜಿ ಟ್ರೇಡಿಂಗ್ ಕಂಪನಿ ಹಾಗೂ ಅಕ್ಯೂಮನ್ ಕ್ಯಾಪಿಟಲ್ ಟ್ರೇಡಿಂಗ್ ಲಿ. ಕಂಪನಿಯ ಪಾಲದಾರರಿಬ್ಬರು ಸಾರ್ವಜನಿಕರಿಂದ ₹3.50 ಕೋಟಿ ಹೂಡಿಕೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇ 4ರಿಂದ ಶೇ 5ರಷ್ಟು ಲಾಭ ನೀಡುವುದಾಗಿ ಅನೇಕ ಮಂದಿಯಿಂದ ಹಣ ಹೂಡಿಕೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಸಹದೇವಪ್ಪ ಹಾಗೂ ಇತರರು ದೂರು ನೀಡಿದ್ದಾರೆ. ಕಂಪನಿಯ ಸಂತೋಷ ಮತ್ತು ಆನಂದ ತಮ್ಮ ಪಾಲುದಾರಿಕೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಪಡೆಯಬಹುದೆಂದು ನಂಬಿಸಿ, 2022 ಏಪ್ರಿಲ್‌ನಿಂದ 2024ರ ಜನವರಿ ಮಧ್ಯೆ ಹಣ ಹೂಡಿಕೆ ಮಾಡಿದವರಿಗೆ ಕೆಲವು ತಿಂಗಳು ಲಾಭಾಂಶ ನೀಡಿದ್ದಾರೆ. ನಂತರ ಹೂಡಿಕೆ ಮಾಡಿದವರಿಗೆ ಲಾಭಾಂಶವೂ ನೀಡದೆ, ಅಸಲೂ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

₹62.03 ಲಕ್ರ ವಂಚನೆ: ಧಾರವಾಡ ದಾನೇಶ್ವರಿ ನಗರದ ವಿಜಯಕುಮಾರ ಅವರಿಗೆ ವಾಟ್ಸ್‌ಆ್ಯಪ್‌ ನಂಬರ್‌ನಲ್ಲಿ ಸಂಪರ್ಕಿಸದ ವ್ಯಕ್ತಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸಿ, ₹62.03 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ವಿಜಯಕುಮಾರ ಅವರನ್ನು ಸಂಪರ್ಕಿಸಿದ ವಂಚಕ, ಮಾರುಕಟ್ಟೆ ಹೂಡಿಕೆ ಬಗ್ಗೆ ಹಾಗೂ ಬೇರೆ ಬೇರೆ ಕಂಪನಿಯ ಷೇರಗಳ ಖರೀದಿ ಮತ್ತು ಮಾರಾಟದ ಬಗ್ಗೆ ತಿಳಿಸಿ, ಹಣ ಹೂಡಿಕೆ ಮಾಡಲು ಪ್ರೇರೇಪಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸವಾರ ಸಾವು: ಇಲ್ಲಿನ ಗದಗ ರಸ್ತೆ ರೋಸ್ ಸ್ಟಾರ್ ಹೋಟೆಲ್‌ ಬಳಿ ಶನಿವಾರ ತಡರಾತ್ರಿ ಗೂಡ್ಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಪರಿಣಾಮ, ಬೈಕ್‌ ಸವಾರ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಮಂಜುನಾಥ ಮೈಲಾರೆಪ್ಪ ಮಾಡೊಳ್ಳಿ (35) ಮೃತಪಟ್ಟಿದ್ದಾರೆ. ಗೂಡ್ಸ್ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT