ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ: ನವನಗರದ ಒಳಚರಂಡಿ ತ್ಯಾಜ್ಯಕ್ಕೆ ಕೆರೆಯೇ ತಾಣ

ನಮ್‌ ಕೆರಿ ಕಥಿ–3
Last Updated 10 ಫೆಬ್ರುವರಿ 2020, 3:57 IST
ಅಕ್ಷರ ಗಾತ್ರ

ಹೊಸ ಬಡಾವಣೆಗಳು ತಲೆ ಎತ್ತಬೇಕಾದರೆ ಭೂಮಿಯ ಮೂಲಸ್ವರೂಪಕ್ಕೆ ಧಕ್ಕೆ ಆಗಲೇಬೇಕು. ಜನರಿಗೆ ವಸತಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕಾದ ಸಂದರ್ಭದಲ್ಲಿ ಜಲಮೂಲಗಳು ಸೇರಿದಂತೆ ಪ್ರಕೃತಿಗೆ ಸಾಕಷ್ಟು ಕಂಟಕವಾಗುತ್ತದೆ. ನವನಗರ ನಿರ್ಮಾಣದ ಸಂದರ್ಭದಲ್ಲಿ ಆಗಿರುವುದೂ ಇದೆ.

ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳದ ದಾಖಲೆಯಲ್ಲಿ 6 ಆರು ಕೆರೆಗಳಿವೆ. ಇದರಲ್ಲಿ ಮೂರು ಮಾತ್ರ ಜೀವಂತ ಎಂದು ಗುರುತಿಸಲಾಗಿದ್ದರೂ, ಇನ್ನೂ ಒಂದನ್ನು ಉಳಿಸಿಕೊಳ್ಳಬಹುದಾಗಿದೆ. ಎರಡು ಸಂಪೂರ್ಣ ಒತ್ತುವರಿಗೆ ಗುರಿಯಾಗಿವೆ.

ನವನಗರದಲ್ಲಿರುವ ಕೆ.ಎಚ್.ಬಿ. ಬಡಾವಣೆ ಮಾಯಕರ ಕಾಲೊನಿ ರಸ್ತೆಯಲ್ಲಿ ಅಮರಗೋಳ ಕೆರೆ ಇದೆ. ಈ ಕೆರೆಗೆ ಒತ್ತುವರಿ ಸಮಸ್ಯೆ ಇಲ್ಲ. ಸುತ್ತಲೂ ಎತ್ತರ ಪ್ರದೇಶವಿದ್ದು, ಮಳೆನೀರಿನ ಸಂಗ್ರಹಕ್ಕೇನೂ ತೊಂದರೆ ಇಲ್ಲ. ಆದರೆ, ಈ ಕೆರೆಗೆ ಹರಿಯುತ್ತಿರುವುದೆಲ್ಲ ಸುತ್ತಮುತ್ತಲಿನ ಬಡಾವಣೆಗಳ ಕೊಳಚೆ ನೀರು ಮಾತ್ರ. ಇದರಿಂದ ಜಲಕಳೆ ಸಮೃದ್ಧವಾಗಿದೆ. ಎಮ್ಮೆ–ದನಕರುಗಳು ತಮ್ಮ ದಾಹ ಹಾಗೂ ಹಸಿವನ್ನು ಇಲ್ಲೇ ತಣಿಸಿಕೊಳ್ಳುತ್ತವೆ. ಈ ಕೆರೆಯನ್ನು ಉಳಿಸಿಕೊಂಡರೆ ಅತ್ಯದ್ಭುತ ತಾಣವಾಗುವುದರಲ್ಲಿ ಸಂದೇಹವಿಲ್ಲ. ಕೆ.ಎಚ್‌.ಬಿ. ಕಾಲೊನಿ 3ನೇ ಅಡ್ಡರಸ್ತೆ, ಸಹ್ಯಾದ್ರಿ ಕಾಲೊನಿ, ಸಹಸ್ರಾರ್ಜುನ ವೃತ್ತದ ಬಳಿ ಅಮರಗೋಳ–2ನೇ ಕೆರೆ ಅಥವಾ ನಂದೀಶ್ವರ ಕೆರೆ ಇದೆ. ಈ ಕೆರೆ ಬಹುತೇಕ ಮೈದಾನವಾಗಿದೆ. ಒಂದೆಡೆ ಸಣ್ಣಪ್ರಮಾಣದಲ್ಲಿ ನೀರಿದ್ದರೆ ಉಳಿದ ಕಡೆ ತ್ಯಾಜ್ಯದ್ದೇ ದರ್ಬಾರು. ಕೆರೆ ಅಂಗಳದಲ್ಲೇ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಇಲ್ಲಿ ಸಹಜ ಪ್ರಕ್ರಿಯೆ.ಅಮರಗೋಳ ಕುಂಟೆ–4 ಊರಮುಂದಿದ್ದು, ಸಿದ್ಧಪ್ಪಾಜಿ ಮಠದ ಸಮೀಪ ಸಮೃದ್ಧ ಕೆರೆಯಾಗಿದೆ. ನೀರಿನಲ್ಲಿ ಕಲ್ಮಶ ಕಾಣುವುದಿಲ್ಲ. ಮೀನುಹಿಡಿಯುವ ಹವ್ಯಾಸ ಈ ಕೆರೆಯಲ್ಲಿದೆ.ಹುಬ್ಬಳ್ಳಿ–ಧಾರವಾಡ ಹೆದ್ದಾರಿಗೆ ಹೊಂದಿಕೊಂಡಿರುವ ನವನಗರದಲ್ಲಿ ಅಮರಗೋಳ ಕುಂಟೆ–1 ಒಂದು ಎಕರೆಗೂ ಹೆಚ್ಚು ವ್ಯಾಪ್ತಿಯಿದೆ. ರಸ್ತೆ ನೀರನ್ನು ಈ ಕೆರೆಗೆ ಹರಿಸಿ, ಜಲಸಂರಕ್ಷಣೆ ಮಾಡಬಹುದು. ಇನ್ನು ಕುಂಟೆ–2 ಆರ್‌.ಟಿ.ಒ ಕಚೇರಿಯಾಗಿದೆ. ಕುಂಟೆ–3 ಅಶ್ವಮೇಧ ಉದ್ಯಾನದ ಬಳಿ ಬಡಾವಣೆಯಾಗಿದೆ.

ಇನ್ನು ಭೈರಿದೇವರಕೊಪ್ಪದಲ್ಲಿ ಮೂರು ಕೆರೆಗಳಿವೆ. ಭೈರಿದೇವರಕೊಪ್ಪದ ಶಿವಾನಂದ ಮಠ, ಸಿದ್ಧೇಶ್ವರ ದೇವಸ್ಥಾನದ ಹಿಂಭಾಗ ಕುಂಟೆ–1 ಹೆದ್ದಾರಿಗೆ ಹೊಂದಿಕೊಂಡಂತಿದ್ದು, ಬಿಆರ್‌ಟಿಎಸ್‌ ರಸ್ತೆಗಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಳಚರಂಡಿ ನೀರು ಇದಕ್ಕೆ ಬರುವ ಸಾಧ್ಯತೆ ಇಲ್ಲ. ಅದರೆ, ಜಲಕಳೆ ತುಂಬಿದೆ. ಇದಕ್ಕೆ ಸುತ್ತಲೂ ಬೇಲಿ ಇರುವುದು ಸಮಾಧಾನಕರ. ಈ ಕೆರೆಯನ್ನು ಉತ್ತಮ ಮಟ್ಟದಲ್ಲಿ ಉಳಿಸಿಕೊಳ್ಳುವ ಎಲ್ಲ ಸಾಧ್ಯತೆಯೂ ಇದೆ. ಇನ್ನು ಕುಂಟೆ–2 ಮತ್ತು 3 (ಮಾಯಕರ ಕಾಲೊನಿ) ಗಾಮನಗಟ್ಟಿ ಹೋಗುವ ರಸ್ತೆಯಲ್ಲಿದ್ದು, ಎರಡೂ ತಮ್ಮ ಅಸ್ತಿತ್ವದಿಂದ ಮರೆಯಾಗಿವೆ. ಒತ್ತುವರಿಯನ್ನು ತೆರವುಗೊಳಿಸಿದರೆ ಇವುಗಳನ್ನು ಮಳೆಕೊಯ್ಲು ತಾಣದ ಜೊತೆಗೆ ವೃಕ್ಷವನವನ್ನಾಗಿಯೂ ರೂಪಿಸಬಹುದು.

ಭೈರಿದೇರವಕೊಪ್ಪದಿಂದ ಗಾಮನಗಟ್ಟಿ ಕಡೆಗೆ ಹೋದರೆ, ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತಿದೆ ಗಾಮಗಟ್ಟಿ ಕೆರೆ. ಸಿಟಿ ಬಸ್‌ಗಳು ಸಂಚರಿಸುತ್ತವೆ ಎಂಬುದನ್ನು ಬಿಟ್ಟರೆ ಈ ಪ್ರದೇಶ ಮಹಾನಗರ ಪಾಲಿಕೆಗೆ ಸೇರಿದೆ ಎಂಬ ಯಾವ ಕುರಹೂ ಇಲ್ಲಿಲ್ಲ. ಗ್ರಾಮಾಂತರ ಪ್ರದೇಶವಾಗಿಯೇ ಉಳಿದಿದ್ದರೂ ಗಾಮನಗಟ್ಟಿ ಕೆರೆಗೆ ಒಳಚರಂಡಿ ನೀರು ಯಥೇಚ್ಛವಾಗಿ ಬರುತ್ತದೆ. ಕರಿಯಮ್ಮಾ ದೇವಿ ದೇವಾಸ್ಥಾನ ಹಿಂಭಾಗದಲ್ಲಿರುವ ಕೆರೆ ಏಳು ಎಕರೆಗೂ ದೊಡ್ಡ ವಿಸ್ತೀರ್ಣಹೊಂದಿದೆ. ಆದರೆ ಶೇ 15ರಷ್ಟು ಒತ್ತುವರಿಯಾಗಿದೆ. ಪಾಲಿಕೆಯ ಅಭಿವೃದ್ಧಿ ಕಾರ್ಯಗಳು ಇಲ್ಲಿ ಆವರಿಸಿಕೊಳ್ಳುವ ಮುನ್ನ ಕೆರೆಯ ಗಡಿ ಗುರುತಿಸಿ ಸಂರಕ್ಷಿಸಿದರೆ, ಉತ್ತಮ ಪ್ರವಾಸಿತಾಣವಾಗುತ್ತದೆ. ಎಂಪ್ರಿ ಅಧ್ಯಯನ ಪ್ರಕಾರವೇ ಬಳಕೆಯಲ್ಲಿರದ ಕೆರೆಗಳ ಪೈಕಿ, ಅಮರಗೋಳದಲ್ಲಿ ಒಂದು, ಭೈರಿದೇವರಕೊಪ್ಪದೊಲ್ಲಿ ಎರಡು ಎರಡು ಕೆರೆಗಳನ್ನು ಜೀವಂತಗೊಳಿಸುವ ಅವಕಾಶವಿದೆ.

₹4 ಸಾವಿರ ಕೋಟಿ 19 ಕೆರೆಗಳ ಆರ್ಥಿಕ ಮೌಲ್ಯ!

ಕೆರೆಗಳನ್ನು ಉಳಿಸಿಕೊಂಡರೆ ಏನು ಉಪಯೋಗ? ಅದರಲ್ಲಿ ನೀರು ಒಳಚರಂಡಿ ನೀರು ಹಾಗೂ ತ್ಯಾಜ್ಯದಿಂದಲೇ ಕೂಡಿದೆ. ಇದರಿಂದ ಮಾಲಿನ್ಯವೇ ಹೆಚ್ಚು ಎಂದು ಭಾವಿಸುವ ಮನಸ್ಸುಗಳಿಗೇನು ಕಡಿಮೆ ಇಲ್ಲ. ಆದರೆ, ನೆನಪಿರಲಿ– ಜಲಮೂಲಗಳು ಮನುಷ್ಯರಿಗಷ್ಟೇ ಅಲ್ಲ, ನೈಸರ್ಗಿಕವಾಗಿ ಅಸಂಖ್ಯ ಉಪಯೋಗಿ. ಅಷ್ಟೇ ಅಲ್ಲ, ಆರ್ಥಿಕವಾಗಿಯೂ ಅವುಗಳ ಮೌಲ್ಯ ಸಾವಿರಾರು ಕೋಟಿಯಲ್ಲಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿರುವಈ 19 ಕೆರೆಗಳಿಂದಲೇ ಒಟ್ಟಾರೆ ಆರ್ಥಿಕ ಮೌಲ್ಯ ₹4,172 ಕೋಟಿ. ಈ 19 ಕೆರೆಗಳೆಂದರೆ, ಸಾಧನಕೇರಿ, ಹೊಸಕಟ್ಟಿಕೆರೆ, ಕೆಲಗೇರಿ, ಲಕುಮನಹಳ್ಳಿ ಕೆರೆ–2, ನವಲೂರು ಕೆರೆ, ರಾಯಾಪುರ ಕೆರೆ, ಸಪ್ತಾಪುರ ಕೆರೆ, ತಡಸಿನಕೊಪ್ಪ ಕೆರೆ, ಎತ್ತಿನಗುಡ್ಡ ಕೆರೆ, ಅಮರಗೋಳ ಕೆರೆ, ಅಯೋಧ್ಯಾ ಕೆರೆ (ಕೆಂಪೆಕೆರೆ), ಗಾಮನಕಟ್ಟಿ ಕೆರೆ, ಗೋಕುಲ ಊರಕರೆ, ಗೋಕುಲ ಕರೆ, ಉಣಕಲ್‌ ಚಿಕ್ಕ ಕೆರೆ, ಉಣಕಲ್‌ ಕೆರೆ, ತೋಪಾಲಗಟ್ಟಿ ಕೆರೆ (ತೋಳನಕೆರೆ) ಮತ್ತು ರಾಯನಾಳ ಕೆರೆ. ಕೆರೆಗಳ ಪರಿಸರ ವ್ಯವಸ್ಥೆ ಸೇವೆಗಳ ಆಧಾರದ ಮೇಲೆ ಮಿಲೇನಿಯಮ್‌ ಎಕೊಸಿಸ್ಟಮ್‌ ಅಸೆಸ್‌ಮೆಂಟ್‌ ಮಾದರಿಯಲ್ಲಿ ಎಂಪ್ರಿ ಅಧ್ಯಯನದಲ್ಲಿ ಇದನ್ನು ಅಂದಾಜಿಸಲಾಗಿದೆ.

ತಾತ್ಕಾಲಿಕ, ನಿಯಂತ್ರಣ, ಸಾಂಸ್ಕೃತಿಕ ಮತ್ತು ಬೆಂಬಲ ಈ ನಾಲ್ಕು ಪ್ರಮುಖ ಬಳಕೆಯಾಗಿವೆ. ಕೆರೆಗಳು ಒದಗಿಸುವ ‘ಬಳಕೆಯಾಗದ ಮೌಲ್ಯಗಳ ಸೇವೆ’ಗಳನ್ನು ವಿತ್ತೀಯ ಮೌಲ್ಯಮಾಪನ ವಿಧಾನಗಳಾದ ಮಾರುಕಟ್ಟೆ ಬೆಲೆ, ಪ್ರಯಾಣ ವೆಚ್ಚ ಮತ್ತು ಅನಿಶ್ಚಿತ ಮೌಲ್ಯಮಾಪನ ವಿಧಾನಗಳ ಸಹಾಯದಿಂದ ಮೌಲ್ಯೀಕರಿಸಲಾಗುತ್ತದೆ.

2017-2018ರ ಅವಧಿಯಲ್ಲಿ ಎಚ್‌ಡಿಎಂಸಿ ಕೆರೆಗಳು ಒದಗಿಸಿರುವ ಪರಿಸರ ವ್ಯವಸ್ಥೆಯ ಸೇವೆಗಳನ್ನು ಹೀಗೆ ಅಂದಾಜಿಸಲಾಗಿದೆ... ಪ್ರಾಣಿಗಳಿಗೆ ಕುಡಿಯುವ ನೀರು– ₹68.64 ಲಕ್ಷ; ಸ್ನಾನದ ಉದ್ದೇಶಗಳಿಗೆ– ₹57.52 ಲಕ್ಷ; ತೊಳೆಯಲು (ಪ್ರಾಣಿಗಳು, ಬಟ್ಟೆ, ವಾಹನಗಳು)– ₹5.67 ಲಕ್ಷ;ಮೀನುಗಾರಿಕೆ– ₹1.15 ಕೋಟಿ; ₹2,542– ನೀರಾವರಿ; ₹1.36 ಕೋಟಿ– ಮನರಂಜನಾ ಚಟುವಟಿಕೆ; ₹72.21– ಲಕ್ಷ ಕಚ್ಚಾ ಸಾಮಗ್ರಿ; ₹1.31 ಕೋಟಿ– ವಾಯುಗುಣಮಟ್ಟ ನಿಯಂತ್ರಣ; ₹1,493.51 ಲಕ್ಷ– ಸೂಕ್ಷ್ಮ ಹವಾಮಾನ ನಿಯಂತ್ರಣ; ₹4.77 ಕೋಟಿ– ಅಂತರ್ಜಲ ಪುನಶ್ಚೇತನ; ₹11.36 ಕೋಟಿ– ಮನರಂಜನಾ ಪ್ರಯಾಣ ವೆಚ್ಚ; ₹1.02 ಲಕ್ಷ– ಶಿಕ್ಷಣಕ್ಕಾಗಿ ಮತ್ತು ₹1.93 ಕೋಟಿ– ಭವಿಷ್ಯದ ಆಯ್ಕೆ ಮೌಲ್ಯಗಳು; ₹70.42 ಲಕ್ಷ– ಸಾಂಸ್ಕೃತಿಕ ಮೌಲ್ಯ; ₹458.70 ಕೋಟಿ–ಸಾಂಸ್ಕೃತಿಕ ಬಳಕೆಯಾಗದ ಮೌಲ್ಯ ಹಾಗೂ ₹38.59 ಲಕ್ಷ–ಸಂರಕ್ಷಣೆಗಾಗಿ ಜನರು ಪಾವತಿಸಲು ಸಿದ್ಧರಿರುವ ಮೌಲ್ಯ.

ಎಚ್‌ಡಿಎಂಸಿ ವ್ಯಾಪ್ತಿಯಲ್ಲಿ 19 ಕೆರೆಗಳಿಂದಲೇ ಆರ್ಥಿಕ ಮೌಲ್ಯ ನಾಲ್ಕು ಸಾವಿರ ಕೋಟಿ ಇದೆ ಎಂದಾದರೆ, ಇನ್ನು 54 ಜೀವಂತ ಕೆರೆಗಳನ್ನೂ ಸಂರಕ್ಷಿಸಿದರೆ ಇವುಗಳ ಮೌಲ್ಯ ಎಷ್ಟಾದೀತು ಎಂದು ಊಹಿಸಿಕೊಳ್ಳಬಹುದು.

***

ಅಮರಗೋಳ

ಕೆರೆ–1

ವಿಸ್ತಾರ: ಸರ್ವೆ ನಂ. 75;3 ಎಕರೆ 19 ಗುಂಟೆ

ನಿರ್ಮಾಣ: 1972

ಎಲ್ಲಿದೆ?: ಮಾಯಕರ ಕಾಲೊನಿ ರಸ್ತೆ,
ನವನಗರ, ಹುಬ್ಬಳ್ಳಿ

ಕೆರೆ –2 / ನಂದೀಶ್ವರ ಕೆರೆ

ವಿಸ್ತಾರ: ಸರ್ವೆ ನಂ. 79;3 ಎಕರೆ 32 ಗುಂಟೆ

ನಿರ್ಮಾಣ: 1972

ಎಲ್ಲಿದೆ?: 3ನೇ ಅಡ್ಡರಸ್ತೆ,
ಕೆ.ಎಚ್‌.ಬಿ. ಕಾಲೊನಿ ನವನಗರ, ಹುಬ್ಬಳ್ಳಿ

ಕುಂಟೆ –1

ವಿಸ್ತಾರ: ಸರ್ವೆ ನಂ. 24;1 ಎಕರೆ 23 ಗುಂಟೆ

ನಿರ್ಮಾಣ: 1972

ಎಲ್ಲಿದೆ?: ನವನಗರ, ಹುಬ್ಬಳ್ಳಿ

ಕುಂಟೆ –2

ವಿಸ್ತಾರ: ಸರ್ವೆ ನಂ. 89ರಲ್ಲಿ;34 ಗುಂಟೆ

ನಿರ್ಮಾಣ: 1972

ಎಲ್ಲಿದೆ?: ಆರ್‌.ಟಿ.ಒ ಕಚೇರಿ, ನವನಗರ, ಹುಬ್ಬಳ್ಳಿ

ಕುಂಟೆ –3

ವಿಸ್ತಾರ: ಸರ್ವೆ ನಂ. 102;1 ಎಕರೆ 19 ಗುಂಟೆ

ನಿರ್ಮಾಣ: 1972

ಎಲ್ಲಿದೆ?: ಅಶ್ವಮೇಧ ಉದ್ಯಾನದ ಬಳಿ, ಅಮರಗೋಳ, ಹುಬ್ಬಳ್ಳಿ

ಕುಂಟೆ –4

ವಿಸ್ತಾರ: ಸರ್ವೆ ನಂ. 121;2 ಎಕರೆ 36 ಗುಂಟೆ

ನಿರ್ಮಾಣ: 1972

ಎಲ್ಲಿದೆ?: ಸಿದ್ದಪ್ಪಾಜಿ ಮಠದ ಸಮೀಪ, ಅಮರಗೋಳ, ಹುಬ್ಬಳ್ಳಿ.

ಭೈರಿದೇವರಕೊಪ್ಪ

ಕುಂಟೆ –1

ವಿಸ್ತಾರ: ಸರ್ವೆ ನಂ. 328;2 ಎಕರೆ 23 ಗುಂಟೆ

ನಿರ್ಮಾಣ: 1958, 2012ರಲ್ಲಿ ಪುನರುಜ್ಜೀವನ

ಎಲ್ಲಿದೆ?: ಸಿದ್ಧೇಶ್ವರ ದೇವಸ್ಥಾನದ ಹಿಂಭಾಗ, ಭೈರಿದೇವರಕೊಪ್ಪ, ಹುಬ್ಬಳ್ಳಿ

ಕುಂಟೆ –2

ವಿಸ್ತಾರ: ಸರ್ವೆ ನಂ. 361;1 ಎಕರೆ 23 ಗುಂಟೆ

ನಿರ್ಮಾಣ: 1958

ಎಲ್ಲಿದೆ?:ಗಾಮಗಟ್ಟಿ ರಸ್ತೆ, ಭೈರಿದೇವರಕೊಪ್ಪ, ಹುಬ್ಬಳ್ಳಿ

ಕುಂಟೆ –3

ವಿಸ್ತಾರ: ಸರ್ವೆ ನಂ. 358;5 ಗುಂಟೆ

ನಿರ್ಮಾಣ: 1958

ಎಲ್ಲಿದೆ?: ಮಾಯಕರ ಕಾಲೊನಿ,
ಗಾಮನಗಟ್ಟಿ ರಸ್ತೆ, ಭೈರಿದೇವರಕೊಪ್ಪ, ಹುಬ್ಬಳ್ಳಿ

ಗಾಮನಗಟ್ಟಿ ಕೆರೆ

ವಿಸ್ತಾರ: ಸರ್ವೆ ನಂ. 363;7 ಎಕರೆ 31 ಗುಂಟೆ

ನಿರ್ಮಾಣ: 1964

ಎಲ್ಲಿದೆ?: ಗಾಮನಗಟ್ಟಿ, ಹುಬ್ಬಳ್ಳಿ

(ಎಂಪ್ರಿ ಅಧ್ಯಯನದ ಪ್ರಕಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT