ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮ ಸ್ಫೂರ್ತಿಯ ಮಧ್ಯೆ ಮದ್ಯ

Last Updated 25 ಜನವರಿ 2019, 12:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲವಲವಿಕೆ, ಉತ್ಸಾಹ– ಪ್ರೋತ್ಸಾಹ, ಯಶೋಗಾಥೆಯ ಹಿಂದಿನ ಸ್ಫೂರ್ತಿ ನೋವು– ಸವಾಲು. ಛಲ ಬಿಡದೆ ಮುನ್ನುಗ್ಗಿ ಗೆದ್ದ ಹೆಮ್ಮೆ... ಟೈಕಾನ್‌ನ ಪ್ರಮುಖ ಆಕರ್ಷಣೆಯಾಗಿದ್ದು ಮಹಿಳಾ ಸಮಾವೇಶ.

ಶೂನ್ಯದಿಂದ ಆರಂಭಿಸಿ ಯಶಸ್ಸಿನ ಮೆಟ್ಟಿಲೇರಿದ ಮಾನಿನಿಯರು ಸವೆಸಿದ ಹಾದಿ ಸಭಿಕರಲ್ಲಿ ಇನ್ನಿಲ್ಲದ ಪ್ರೇರಣೆ ನೀಡಿತು. ಸಾಧಕರ ಒಂದೊಂದು ಕಥೆಗಳೂ ಗೆಲುವಿಗೆ ಹೊಸ ವ್ಯಾಖ್ಯಾನ ನೀಡಿದವು. ಉನ್ನತ ಉದ್ದೇಶದ ಹಿಂದೆ ಬಿದ್ದಾಗ ಎದುರಾಗು ಅಡೆತಡೆಗಳು ಯಶಸ್ಸಿನ ಹಾದಿ ಪುಟ್ಟ ನಿಲುಗಡೆ ಎಂದು ಮನದಟ್ಟು ಮಾಡಿತು. ‘ಸವಾಲಿನ ಹಾದಿಯಲ್ಲಿ ನಾವೂ ಸಹ ಸಾಗಬಲ್ಲೆವು’ ಎಂಬ ವಿಶ್ವಾಸ ತುಂಬಿತು. ಉದ್ಯಮ ಕ್ಷೇತ್ರಕ್ಕೆ ಮಹಿಳೆಯರನ್ನು ಸೆಳೆಯುವ ಉದ್ದೇಶದಿಂದಲೇ ಆಯೋಜಿಸಿದ್ದ ಈ ಸಮಾವೇಶ ಹೊಸ ಸಾಧ್ಯತೆಗಳ ಹಾದಿಗೆ ಬೆಳಕು ಬೀರಿತು.

ಬಾರ್ ಪರಿಚಾರಕಿಯೊಬ್ಬರು ಭಿನ್ನ ಹಾದಿಯಲ್ಲಿ ಸಾಗಿ ದೇಶವೇ ಗುರುತಿಸುವಂತೆ ಸಾಧನೆ ಮಾಡಬಲ್ಲರೇ? ನಂಬುವುದು ಕಷ್ಟ. ಆದರೆ ಬ್ರಿವಿರೇಜ್ ಕನ್ಸಲ್ಟೆಂಟ್ ಹಾಗೂ ಮಾಸ್ಟರ್ ಮಿಕ್ಸರ್ ಶತ್ಬಿ ಬಸು ಅವರಿಗೆ ಜೀವನದಲ್ಲಿ ಎದುರಾದ ಸವಾಲುಗಳು, ಅದನ್ನು ಮೀರಿ ಅವರು ಸಾಧಿಸಿದ ಪರಿ, ಹೊಸ ಆಲೋಚನೆಗಳಿದ್ದರೆ ಹೇಗೆ ಮಾದರಿಯಾಗಿ ನಿಲ್ಲಬಹುದು ಎಂಬುದಕ್ಕೆ ಉದಾಹರಣೆಯಂತಿತ್ತು.

‘ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿಯಿದ್ದ ಕಾರಣ ಪಶು ವೈದ್ಯಕೀಯ ವಿಜ್ಞಾನ ಓದಬೇಕು ಅಂದೊಕೊಂಡಿದ್ದೆ. ಆದರೆ ಗಣಿತ ಕಬ್ಬಿಣದ ಕಡಲೆಯಾದ ಕಾರಣ ಆ ದಾರಿಯಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಬಾಣಸಿಗಳಾಗು ಎಂದು ಕುಟುಂಬದವರು ಹೇಳಿದರು. ಅದೂ ಸರಿಬೀಳಲಿಲ್ಲ. ಆದರೆ ಹೊಸತನ್ನು ಸಾಧಿಸಬೇಕು, ಕಲಿಯಬೇಕು ಎಂಬ ಉತ್ಸಾಹ ಮಾತ್ರ ಕರಗಲಿಲ್ಲ. ಬಾರ್ ಪರಿಚಾರಕಿಯಾಗಿ ಸೇರಿದೆ. ವಿವಿಧ ಬಗೆಯ ಮದ್ಯಗಳನ್ನು ಬೆರೆಸಿ ಗ್ರಾಹಕರಿಗೆ ವಿನೂತನ ಅನುಭವ ನೀಡವ ಕಲೆ ಕಲಿತೆ. ಗ್ರಾಹಕರ ಮುಖವನ್ನು ಓದುವುದನ್ನು ಕಲಿತೆ’ ಎಂದು ಮಾಸ್ಟರ್ ಮಿಕ್ಸರ್ ಎಂದೇ ಖ್ಯಾತರಾಗಿರುವ ಶತ್ಬಿ ಬಸು ಹೇಳಿದರು.

‘ಆ ವಿಷಯದಲ್ಲಿ ಪರಿಣತಿ ಸಾಧಿಸಿದ ನಂತರ ಬರಹಗಾರ್ತಿಯಾದೆ, ಆದ್ಯಾತ್ಮದ ಒಲವು ಬೆಳೆಸಿಕೊಂಡೆ. ಸಾವಿರಾರು ಯುವಕ– ಯುವತಿಯರಿಗೆ ಈ ವಿಷಯದಲ್ಲಿ (ಮಿಕ್ಸಿಂಗ್) ತರಬೇತಿ ನೀಡಿದೆ. ನನ್ನ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದಾಗ ನಿಜವಾದ ಸಂತೋಷ ಅನುಭವಿಸಿದೆ. ಆಧ್ಯಾತ್ಮದ ಕ್ಷೇತ್ರದಲ್ಲೂ ಒಂದಿಷ್ಟು ಹೆಸರು ಮಾಡಿದೆ. ಏಕೆಂದರೆ ಸ್ಟಿರಿಟ್ (ಮದ್ಯ) ಸ್ಪಿರಿಚುಯಾಲಿಟಿ (ಆಧ್ಯಾತ್ಮದ) ಮಧ್ಯೆ ಇರುವ ಅಂತರ ಕಡಿಮೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿ’ ಚಪ್ಪಾಳೆ ಗಿಟ್ಟಿಸಿದರು.

‘ಯಾವುದೂ ನಮ್ಮನ್ನು ನಿಯಂತ್ರಿಸಬಾರದು, ನಾವೇ ಎಲ್ಲವನ್ನೂ ನಿಯಂತ್ರಿಸಬೇಕು. ಆಗ ಯಾವುದೇ ತೊಂದರೆ ಇರುವುದಿಲ್ಲ. ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬೇಕು, ಒಂದು ವಿಷಯದಲ್ಲಿ ಪರಿಣತಿ ಸಾಧಿಸಬೇಕು ಎಂಬ ಮಾತು ಹಳೆಯದು. ಒಂದಕ್ಕಿಂತ ಹೆಚ್ಚು ವಿಷಗಳಲ್ಲಿ ಪರಿಣತಿ ಸಾಧಿಸಬೇಕು’ ಎಂದು ಅವರು ಹೇಳಿದರು.

‘ವಿಧವೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಕೂರಬೇಕಾದ ಅನಿವಾರ್ಯ ಪ್ರಸಂಗ ಬಂತು. ಮೂರು ಮಕ್ಕಳ ಜವಾಬ್ದಾರಿಯೂ ಇತ್ತು. ಆದರೆ ಸ್ವಾಮಿ ವಿವೇಕಾನಂದ ಅವರ ಆತ್ಮಚರಿತ್ರೆಯಲ್ಲಿ ಬರುವ ಒಂದು ಸನ್ನಿವೇಶ ಸೆಟೆದು ನಿಲ್ಲುವಂತೆ ಹುರಿದುಂಬಿಸಿತು. ಕಣ್ಣು ಇಲ್ಲದಿರುವುದು ಪಾಪವೇ ಎಂದು ಬಾಲಕನೊಬ್ಬ ವಿವೇಕಾನಂದ ಅವರನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸುವ ಅವರು ‘ದೃಷ್ಟಿ ಇಲ್ಲದಿರುವುದ ದೊಡ್ಡ ನಷ್ಟವಲ್ಲ, ಆದರೆ ದೂರು ದೃಷ್ಟಿ ಇಲ್ಲದಿದ್ದರೆ ಕಷ್ಟ’ ಎನ್ನುತ್ತಾರೆ. ಮರು ದಿನವೇ ಏನಾದರೂ ಸಾಧನೆ ಮಾಡಬೇಕು ಎಂದು ಹೊರಟು ನಿಂತೆ’ ಎಂದವರು ಏಷ್ಯಾದ ಮೊದಲ ಮಹಿಳಾ ಕ್ಯಾಬ್ ಸೇವೆ ಆರಂಭಿಸಿದ ರೇವತಿ ರಾಯ್.

‘ಬಂಡವಾಳ ಇರಲಿಲ್ಲ. ಆದರೆ ಕನಸುಗಳಿದ್ದವು. ಹಳೆಯ ನಾಲ್ಕು ಟ್ಯಾಕ್ಸಿ, ಪುಟ್ಟ ಕಚೇರಿಯಿಂದ ಆರಂಭವಾದ ಕ್ಯಾಬ್ ಸೇವೆ ದೊಡ್ಡ ಯಶಸ್ಸು ಗಳಿಸಿತು. ವಿನೂತನ ಪರಿಕಲ್ಪನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಉದ್ಯಮದಲ್ಲಿ ಯಶಸ್ಸೂ ನನ್ನದಾಯಿತು’ ಎಂದು ಅವರು ಹೇಳಿದರು.

‘ಹೆಣ್ಣು ಹೆಣ್ಣೆಂದೇತಕೆ ಹೀಗಳೆವರು ಕಣ್ಣು ಕಾಣದ ಗಾವಿಲರು’ ಎಂಬ ಸಂಚಿ ಹೊನ್ನಮ್ಮ ಅವರ ‘ಹದಿಬದೆಯ ಧರ್ಮದ’ ಕೃತಿಯ ಸಾಲಿನೊಂದಿಗೆ ಮಾತು ಆರಂಭಿಸಿದ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್, ಪುರುಷ ಪ್ರಧಾನ ಸಮಾಜ– ವೃತ್ತಿಯಲ್ಲಿ ಮಹಿಳೆಯೊಬ್ಬಳು ಎದುರಿಸಬೇಕಾದ ಸವಾಲುಗಳೆನು ಎಂಬುದನ್ನು ಅನುಭವದ ಮಾತುಗಳ ಮೂಲಕ ಹೇಳಿದರು.

‘ಐಪಿಎಸ್ ಅಧಿಕಾರಿಯಾಗಿ ನಾನು ಒಂದು ಆದೇಶ ನೀಡಿದರೆ ಅದನ್ನು ಪಾಲಿಸುವಂತಹ ಸೌಜ್ಯನ್ಯವನ್ನು ತೋರದ ಪ್ರಸಂಗಗಳೂ ಇತ್ತು. ಅಧಿಕಾರಿಯಾದರೂ ಆಕೆಗೆ ಅನುಭವ ಇಲ್ಲ ಎಂಬ ವಿತಂಡವಾದ ಅವರದ್ದಾಗಿತ್ತು. ಪುರುಷ ಪಾರಮ್ಯದ ಕ್ಷೇತ್ರಗಳಲ್ಲಿ ಸಾಧಿಸಬೇಕು ಎಂಬ ಮಹಿಳೆಯ ಛಲ ಹೀಗೆಯೇ ಮುಂದುವರೆಯಬೇಕು. ಮಹಿಳಾ ಪ್ರಧಾನ ಕ್ಷೇತ್ರದಲ್ಲಿ ನಾವೂ ಸಾಧಿಸಬೇಕೆಂದು ಪುರುಷರು ಹೇಳುವಂತಾಗಬೇಕು’ ಎಂದರು.

ಕಠಿಣ ಪರಿಶ್ರಮದ ಮೂಲಕ ಹೇಗೆ ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಬಹುದು ಎಂಬುದನ್ನು ಬಂಗ್ಲಾದೇಶದ ರುಬಾಬ ಡೌಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT