ಬುಧವಾರ, ಮೇ 25, 2022
29 °C
ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿ: ಅಪಾಯ ಆಹ್ವಾನಿಸುತ್ತಿರುವ ಗುಂಡಿಗಳು

ಹುಬ್ಬಳ್ಳಿ: ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ದುಸ್ತರ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಳೆಯಿಂದಾಗಿ ನಗರದ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಹಲವು ರಸ್ತೆಗಳು ತಗ್ಗು ಮತ್ತು ಗುಂಡಿಗಳಿಂದ ಆವೃತ್ತವಾಗಿವೆ. ಈ ರಸ್ತೆಗಳಲ್ಲಿ ವಾಹನಗಳ ಸಂಚಾರವಿರಲಿ, ಜನ ನಡೆದುಕೊಂಡು ಹೋಗುವುದಕ್ಕೂ ಪರದಾಡುವಂತಹ ಸ್ಥಿತಿ ಇದೆ.

ಪ್ರತಿ ವರ್ಷ ಮಳೆಗಾಲಕ್ಕೂ ಮುಂಚೆ ರಸ್ತೆಗಳ ದುರಸ್ತಿಗೆ ಮುಂದಾಗುತ್ತಿದ್ದ ಪಾಲಿಕೆ, ಈ ಬಾರಿ ಕೋವಿಡ್ ನಿಯಂತ್ರಣ ಕಾರ್ಯದಲ್ಲೇ ಮುಳುಗಿದೆ. ಹದಗೆಟ್ಟ ರಸ್ತೆಗಳ ದುರಸ್ತಿಗೆ ಗಮನ ಹರಿಸದ್ದರಿಂದ, ತಗ್ಗು ಮತ್ತು ಗುಂಡಿಗಳು ಮತ್ತಷ್ಟು ದೊಡ್ಡವಾಗಿ ಅಪಾಯ ಆಹ್ವಾನಿಸುತ್ತಿವೆ.

ಕೊಪ್ಪಿಕರ್ ರಸ್ತೆ, ದಾಜೀಬಾನ ಪೇಟೆ ಮುಖ್ಯ ರಸ್ತೆ, ಸ್ಟೇಷನ್ ರಸ್ತೆ, ಜನತಾ ಬಜಾರ್, ಮೂರುಸಾವಿರ ಮಠ, ಸಹಸ್ರಾರ್ಜುನ ವೃತ್ತ, ದುರ್ಗದ ಬೈಲ್, ಅಕ್ಕಿ ಹೊಂಡ, ವಿಕ್ಟೋರಿಯಾ ರಸ್ತೆ, ಮೇದಾರ ಓಣಿ ರಸ್ತೆ, ಷಾ ಬಜಾರ್, ಹಿರೇಪೇಟೆ ರಸ್ತೆ, ಕೊಯಿನ್ ರಸ್ತೆ, ಅಕ್ಷಯ ಪಾರ್ಕ್ ರಸ್ತೆ, ರವಿ ನಗರ, ಹೆಗ್ಗೇರಿ, ಹಳೇ ಹುಬ್ಬಳ್ಳಿ ಸೇರಿದಂತೆ ಒಳ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.

ಅರೆಬರೆ ಕಾಮಗಾರಿ: ನಗರದ ಕೆಲ ರಸ್ತೆಗಳಲ್ಲಿ ನಡೆದಿರುವ ಒಳ ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳು ಲಾಕ್‌ಡೌನ್‌ನಿಂದಾಗಿ ಅರ್ಧಕ್ಕೆ ನಿಂತಿವೆ. ಇದರಿಂದಾಗಿ ಕಾಮಗಾರಿ ನಿಮಿತ್ತ ಅಗೆದಿದ್ದ ರಸ್ತೆಯಲ್ಲಿ ಮಣ್ಣಿನ ರಾಶಿ ಹಾಗೆಯೇ ಉಳಿದಿದೆ. ಕೆಲವೆಡೆ ಗುಂಡಿಗಳನ್ನೂ ಮುಚ್ಚಿಲ್ಲ. ಕೇಬಲ್ ಅಳವಡಿಕೆಗಾಗಿ ತೋಡಿದ್ದ ಗುಂಡಿ ಮಣ್ಣು ರಸ್ತೆ ತುಂಬಾ ಹರಡಿಕೊಂಡಿದೆ.

‘ಕೆಸರಿನ ರಾಡಿಯಾಗಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೂ ಕಷ್ಟವಾಗಿದೆ. ಕೆಲ ಬೈಕ್ ಸವಾರರು ಕೆಸರಿನಲ್ಲೇ ಬಿದ್ದಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಪ್ರತಿ ವರ್ಷವೂ ಈ ಸಮಸ್ಯೆ ತಪ್ಪಿದ್ದಲ್ಲ. ಕೂಡಲೆ ದುರಸ್ತಿಗೆ ಕ್ರಮಕೈಗೊಳ್ಳಬೇಕು’ ಎಂದು ಗೌಳಿ ಗಲ್ಲಿಯ ಮಹೇಶ ಜರತಾರಘರ ಹೇಳಿದರು.

‘ಆದ್ಯತೆ ಮೇರೆಗೆ ದುರಸ್ತಿ’: ‘ಕೋವಿಡ್ ನಿಯಂತ್ರಣದಲ್ಲೇ ಎಲ್ಲರೂ ಮಗ್ನ ರಾಗಿದ್ದೆವು. ಲಾಕ್‌ಡೌನ್‌ನಿಂದಾಗಿ ರಸ್ತೆ ದುರಸ್ತಿ ಸೇರಿದಂತೆ ಹಲವು ಕೆಲಸಗಳು ನಿಂತಿವೆ. ಮಳೆ ತಗ್ಗಿದಾಗ ರಸ್ತೆ ತಗ್ಗು ಮತ್ತು ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

‘ಲಾಕ್‌ಡೌನ್‌ನಿಂದಾಗಿ ಕಾರ್ಮಿಕರ ಕೊರತೆ ಉಂಟಾಗಿ ನಗರದ ವಿವಿಧೆಡೆ ನಡೆಯುತ್ತಿದ್ದ ರಸ್ತೆ, ಚರಂಡಿ ಸೇರಿದಂತೆ ಹಲವು ಕಾಮಗಾರಿಗಳು ವಿಳಂಬವಾಗಿವೆ. ಈಗ ಎಲ್ಲಾ ಕೆಲಸಗಳೂ ನಿಧಾನವಾಗಿ ಆರಂಭಗೊಳ್ಳುತ್ತಿವೆ. ಕಾಮಗಾರಿ ಮುಗಿದ ತಕ್ಷಣ ಆದ್ಯತೆ ಮೇರೆಗೆ ಗುಂಡಿ ಮತ್ತು ತಗ್ಗು ಮುಚ್ಚಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು