ಭಾನುವಾರ, ಸೆಪ್ಟೆಂಬರ್ 19, 2021
22 °C
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌

ಪೊಲೀಸರ ದುಂಡಾವರ್ತನೆ; ದಂಪತಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಬೈಪಾಸ್‌ನ ‘ರಮ್ಯಾ ರೆಸಿಡೆನ್ಸಿ’ ಬಳಿ ಧಾರವಾಡ ಸಂಚಾರ ಠಾಣೆ ಸಿಬ್ಬಂದಿ ಹಾಗೂ ದಂಪತಿ ನಡುವೆ ನಡುರಸ್ತೆಯಲ್ಲೇ ರಂಪಾಟ ನಡೆದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾರಿನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದು ಅವರ ಬ್ಯಾಗ್‌ಗಳನ್ನು ಕೆಳಗಿಳಿಸಿ ಧಾರವಾಡ ಸಂಚಾರ ಠಾಣೆ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಇದಕ್ಕೆ ದಂಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಗುವನ್ನು ಎತ್ತಿಕೊಂಡಿರುವ ಮಹಿಳೆ ನಡುರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಕಾರಿನ ಮಾಲೀಕ ‘ಚಾಲುಕ್ಯ’ ವಾಹನವನ್ನು ತಡೆದು ವಿರೋಧ ದಾಖಲಿಸಿದ್ದಾರೆ. ಬಳಿಕ ಪೊಲೀಸರೇ ಲಗೇಜ್‌ ಅನ್ನು ಕಾರಿನೊಳಗೆ ಇಟ್ಟು ಅಲ್ಲಿಂದ ತೆರಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಾಖಲೆ ತಪಾಸಣೆ ನೆಪದಲ್ಲಿ ಪೊಲೀಸರು ದಂಪತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಪರ, ವಿರೋಧ ಚರ್ಚೆ ನಡೆದಿದೆ. ದಂಪತಿ ಯಾರೆಂಬುದು ತಿಳಿದುಬಂದಿಲ್ಲ. ಈ ಕುರಿತು ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ್‌, ‘ಘಟನೆ ಏನೆಂಬುದು ತಿಳಿದಿಲ್ಲ. ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ವಿಚಾರಣೆ ನಡೆಸುತ್ತೇನೆ. ಸಾರ್ವಜನಿಕರೊಂದಿಗೆ ಪೊಲೀಸ್‌ ಸಿಬ್ಬಂದಿ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂಬ ಸೂಚನೆ ಇದೆ. ಸಿಬ್ಬಂದಿ ತಪ್ಪಿದ್ದರೆ ಶಿಸ್ತುಕ್ರಮಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.