ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಹಜ ‘ಟ್ರ್ಯಾಕ್‌’ಗೆ ಮರಳದ ರೈಲು

ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾದರೂ ಲಭಿಸದ ಪೂರ್ಣಪ್ರಮಾಣದ ಸೌಲಭ್ಯ
Last Updated 6 ಫೆಬ್ರುವರಿ 2021, 3:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ತೆರವಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಸಾಕಷ್ಟು ಇಳಿಮುಖವಾದರೂ ಪೂರ್ಣ ಪ್ರಮಾಣದಲ್ಲಿ ಹಾಗೂ ಸಾಮಾನ್ಯ ದರದಲ್ಲಿ ರೈಲು ಸಂಚಾರ ಆರಂಭವಾಗದ ಕಾರಣ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.

ಕೃಷಿ ಕೂಲಿ ಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದವರು ಸಂಚಾರಕ್ಕೆ ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಕುಂದಗೋಳ, ಅಣ್ಣಿಗೇರಿ, ಗುಡಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಕೂಲಿ ಅರಸಿ ಹುಬ್ಬಳ್ಳಿಗೆ ಬರುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹುಬ್ಬಳ್ಳಿ–ಧಾರವಾಡದಲ್ಲಿ ಅಂಗಡಿಗಳಲ್ಲಿ ಕೆಲಸ ಮಾಡುವರು, ಕಟ್ಟಡ ಕಾರ್ಮಿಕರು, ಅಕ್ಕಪಕ್ಕದ ಜಿಲ್ಲೆಗಳಿಗೆ ನಿತ್ಯ ನೌಕರಿಗಾಗಿ ಓಡಾಡುವರ ಸಂಖ್ಯೆಯೂ ಹೆಚ್ಚಿದೆ. ಪೂರ್ಣ ಪ್ರಮಾಣದಲ್ಲಿ ರೈಲುಗಳು ಸಂಚರಿಸದ ಕಾರಣ ಕಾರ್ಮಿಕರು, ನೌಕರರು ಬಸ್‌ ಅಥವಾ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಪ್ರಯಾಣ ವೆಚ್ಚ ಭರಿಸಲಾಗದೆ ಕೆಲ ಕೂಲಿ ಕಾರ್ಮಿಕರು ನಗರ ಪ್ರದೇಶದಲ್ಲಿ ಸ್ನೇಹಿತರ ಮನೆಗಳಲ್ಲಿ ವಾಸವಾಗಿದ್ದಾರೆ.

ದಿನಕ್ಕೆ ₹200ರಿಂದ ₹300 ಕೂಲಿ ನೆಚ್ಚಿಕೊಂಡು ನಗರ ಪ್ರದೇಶಕ್ಕೆ ಬರುವ ಕಾರ್ಮಿಕರು ತಮ್ಮ ದುಡಿಮೆಯ ಅರ್ಧದಷ್ಟು ಹಣ ಪ್ರಯಾಣಕ್ಕಾಗಿ ವೆಚ್ಚ ಮಾಡಬೇಕಾಗಿದೆ. ಇದ್ದ ಊರಿನಲ್ಲಿಯೇ ಕೆಲಸದ ಅವಕಾಶ ಕಡಿಮೆ ಎನ್ನುವ ಕಾರಣಕ್ಕೆ ನಗರ ಪ್ರದೇಶಕ್ಕೆ ಬರುತ್ತಾರೆ. ಅವರಿಗೆ ಈಗ ಪ್ರಯಾಣವೇ ಹೊರೆಯಾಗುತ್ತಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿಯಿಂದ ಲಾಕ್‌ಡೌನ್‌ಗಿಂತಲೂ ಮೊದಲು 132 ರೈಲುಗಳು ಸಂಚರಿಸುತ್ತಿದ್ದವು. ಈಗ 50 ರೈಲುಗಳಷ್ಟೇ ಸಂಚರಿಸುತ್ತಿವೆ.

ಬೆರಳೆಣಿಕೆಯಷ್ಟು ಪ್ಯಾಸೆಂಜರ್‌ ರೈಲುಗಳ ಸಂಚಾರ ನಡೆಯುತ್ತಿದ್ದು, ಇವುಗಳಿಗೆ ಮಾತ್ರ ಕೌಂಟರ್‌ನಲ್ಲಿ ಹಣ ಕೊಟ್ಟು ಟಿಕೆಟ್ ಪಡೆದುಕೊಳ್ಳಬಹುದು. ಇವುಗಳಿಗೆ ಸಾಮಾನ್ಯ ದರವಿದೆ. ಬಹುತೇಕ ರೈಲುಗಳಿಗೆ ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿಸಿ ಮತ್ತು ವಿಶೇಷ ದರ ಪಾವತಿಸಿ ಪ್ರಯಾಣಿಸಬೇಕಾಗಿದೆ. ಇದರಿಂದಾಗಿ ಕೂಲಿ ಕಾರ್ಮಿಕರು ಹಾಗೂ ನೌಕರರಿಗೆ ರೈಲು ಪ್ರಯಾಣ ಪ್ರಯಾಸವಾಗುತ್ತಿದೆ.

ಈ ಕುರಿತು ಪ್ರಜಾವಾಣಿ ಜೊತೆ ಅನಿಸಿಕೆ ಹಂಚಿಕೊಂಡ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ‘ರೈಲು ಪ್ರಯಾಣ ಬಡವರು ಹಾಗೂ ಮಧ್ಯಮ ವರ್ಗದವರ ಪಾಲಿಗೆ ಸಂಜೀವಿನಿ ಇದ್ದಂತೆ. ನಗರ ಪ್ರದೇಶಗಳಿಗೆ ದುಡಿಯಲು ಬರುವ ಕಾರ್ಮಿಕರು ರೈಲಿನಲ್ಲಿ ಹೋಗಿ ಬಂದರೆ ಕಡಿಮೆ ಹಣದಲ್ಲಿ ಪ್ರಯಾಣದ ವೆಚ್ಚ ನೀಗಿಸಬಹುದು. ದೇಶದಲ್ಲಿ ಎಲ್ಲ ಚಟುವಟಿಕೆಗಳಿಗೂ ಅವಕಾಶ ಕೊಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಂಚರಿಸಲು ರೈಲುಗಳ ಮೇಲೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಆಗ್ರಹಿಸಿದರು.

***

ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಮೇಲಧಿಕಾರಿಗಳ ಆದೇಶ ಬಂದ ಬಳಿಕ ಹಂತ ಹಂತವಾಗಿ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು.

-ಅರವಿಂದ ಮಾಳಖೇಡಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ

***

ಕೋವಿಡ್‌ ಬಳಿಕ ನೈರುತ್ಯ ರೈಲ್ವೆ ಶೇ 70ರಷ್ಟು ರೈಲುಗಳನ್ನು ಪುನರಾರಂಭಿಸಿದೆ. ಪರಿಸ್ಥಿತಿ ಅವಲೋಕಿಸಿ ಕೇಂದ್ರ ರೈಲ್ವೆ ಸಚಿವಾಲಯ ಯಾವಾಗ ರೈಲುಗಳನ್ನು ಓಡಿಸಬೇಕು ಎನ್ನುವ ಮಾರ್ಗಸೂಚಿ ನೀಡುತ್ತದೆ.

- ಈ. ವಿಜಯಾಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ

***

‘ಅರ್ಧ ಹಣ ಪ್ರಯಾಣಕ್ಕೆ ಖರ್ಚು’

ರೈಲುಗಳ ಸೌಲಭ್ಯ ಪೂರ್ಣಪ್ರಮಾಣದಲ್ಲಿದ್ದಾಗ ತಿಂಗಳಿಗೆ ₹180ಕ್ಕೆ ಪಾಸ್‌ ಸಿಗುತ್ತಿತ್ತು. ಬಿಪಿಎಲ್‌ ಕಾರ್ಡ್‌ ಹೊಂದಿರುವ ಮನೆಯ ಯಜಮಾನನಿಗೆ ಸಿಗುತ್ತಿದ್ದ ಪಾಸ್‌ಗೆ ಗುಡಗೇರಿಯಿಂದ ತಿಂಗಳಿಗೆ ₹20 ನೀಡಿದ್ದರೂ ಸಾಕಿತ್ತು. ಈಗ ಗುಡಗೇರಿಯಿಂದ ಹುಬ್ಬಳ್ಳಿಗೆ ಬಂದು ಹೋಗಲು ದಿನಕ್ಕೆ ₹80 ಖರ್ಚಾಗುತ್ತದೆ. ನಮ್ಮ ದಿನದ ದುಡಿಮೆಯ ಅರ್ಧದಷ್ಟು ಹಣ ಪ್ರಯಾಣಕ್ಕೆ ಖರ್ಚಾಗುತ್ತದೆ. ಈ ಲೆಕ್ಕಾಚಾರ ಹಾಕಿ ಊರಿನಲ್ಲಿ ಉಳಿದರೆ ಕೆಲಸವೂ ಸಿಗುವುದಿಲ್ಲ, ಹೊಟ್ಟೆಪಾಡಿಗೂ ಹಣವಿಲ್ಲದಂತಾಗುತ್ತದೆ ಎಂದು ಗುಡಗೇರಿ ಗ್ರಾಮದ ಕಾರ್ಮಿಕ ಮಂಜುನಾಥ್ ಕುರಹಟ್ಟಿ ಬೇಸರ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT