ಬುಧವಾರ, ಸೆಪ್ಟೆಂಬರ್ 22, 2021
23 °C
ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ₹14.83 ಕೋಟಿ ವೆಚ್ಚದ ಕಾರ್ಯ ಆರಂಭ

ಹುಬ್ಬಳ್ಳಿ: ಎಂಟು ತಿಂಗಳಲ್ಲಿ ಉಣಕಲ್‌ ಕೆರೆ ಸ್ವಚ್ಛ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಪ್ರಮುಖ ಆಕರ್ಷಣೆ ಉಣಕಲ್‌ ಕೆರೆಯ ದಂಡೆಯಲ್ಲಿ ಪ್ರತಿವರ್ಷವೂ ಅಂತರಗಂಗೆ ಕಳೆ ಬೆಳೆಯುತ್ತಿರುವ ಕಾರಣ ಕೆರೆಯ ಸೌಂದರ್ಯ ಹಾಳಾಗುತ್ತಿದೆ. ಇದನ್ನು ತಡೆಯಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ರೂಪಿಸಲಾಗಿದ್ದ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಕೆರೆಯ ನೀರನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿದೆ.

₹14.83 ಕೋಟಿ ವೆಚ್ಚದಲ್ಲಿ ಆಗಸ್ಟ್‌ ಅಂತ್ಯದಲ್ಲಿ ಆರಂಭವಾಗಿರುವ ಈ ಕಾರ್ಯ ಎಂಟು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮೈಸೂರು ಮೂಲದ ಜೆಎಂಎಸ್‌ ಬಯೊಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮತ್ತು ನಾಗೇಂದ್ರ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದಾರೆ.

ಉಣಕಲ್‌ ಕೆರೆಗೆ 110 ವರ್ಷಗಳ ಇತಿಹಾಸವಿದೆ. 200 ಎಕರೆಯಷ್ಟು ವಿಶಾಲವಾಗಿ ಹರಡಿರುವ ಕೆರೆಗೆ ನಿತ್ಯ ಪ್ಲಾಸ್ಟಿಕ್‌ ಹಾಗೂ ಇನ್ನಿತರ ತ್ಯಾಜ್ಯ ಮಿಶ್ರಿತ ನೀರು ಸೇರುತ್ತಿದೆ. ಅಮರಗೋಳ, ಗಾಮನಗಟ್ಟಿ, ಎಪಿಎಂಸಿ, ನವೀನ್‌ ಹೋಟೆಲ್‌ ಹಿಂಭಾಗದ ಪ್ರದೇಶ ಮತ್ತು ಕೆರೆಯ ಮುಂಭಾಗದ ಬಿಆರ್‌ಟಿಎಸ್‌ ರಸ್ತೆಯ ಭಾಗದಿಂದ ಮಳೆಯ ಬಹಳಷ್ಟು ನೀರು ಕೆರೆ ಸೇರುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಅಂತರಗಂಗೆ ಹೆಚ್ಚಾಗಿ ಬೆಳೆಯುತ್ತಿದೆ. ಇದನ್ನು ಸ್ವಚ್ಛಗೊಳಿಸಲು ಮಹಾನಗರ ಪಾಲಿಕೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಆದ್ದರಿಂದ ಕೊಳಚೆ ನೀರು ಕೆರೆ ಪ್ರವೇಶಿಸುವ ಮೊದಲೇ ಅದನ್ನು ಸ್ವಚ್ಘಗೊಳಿಸುವ ಕಾರ್ಯ ಈಗ ನಡೆಯಲಿದೆ. ಕೆರೆಗೆ ನೀರು ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಯಂತ್ರಗಳ ಸಹಾಯದಿಂದ ನೀರನ್ನು ಸ್ವಚ್ಛಗೊಳಿಸಿದ ಬಳಿಕ ಕೆರೆಗೆ ಬಿಡಲಾಗುತ್ತಿದೆ. ಕೆರೆಯಲ್ಲಿ ತೇಲುವ ಯಂತ್ರದ ನೆರವಿನಿಂದ ಅನುಪಯುಕ್ತ ವಸ್ತುಗಳನ್ನು ಮೇಲಕ್ಕೆ ತೆಗೆಯಲಾಗುತ್ತದೆ. ಆಗ ನೀರಿನ ಮೇಲೆ ಬರುವ ತ್ಯಾಜ್ಯವನ್ನು ಹೊರಗಡೆ ಹಾಕಿದರೆ ಕೆರೆ ಸ್ವಚ್ಛವಾಗುತ್ತದೆ ಎನ್ನುತ್ತಾರೆ ಗುತ್ತಿಗೆ ಪಡೆದ ಸಿಬ್ಬಂದಿ.

ಜೆಎಂಎಸ್‌ ಬಯೊಟೆಕ್‌ ಕಂಪನಿ ನಿರ್ದೇಶಕ ನವೀನ ದೊಡ್ಡಮನಿ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಅಂತರಗಂಗೆ ಕಳೆ ಕೊಳಚೆ ನೀರಿನಲ್ಲಿ ವೇಗವಾಗಿ ಬೆಳೆಯುತ್ತದೆ. ಆ ಕಳೆಗೆ ತ್ಯಾಜ್ಯಯುಕ್ತ ನೀರು ಪೌಷ್ಟಿಕ ಆಹಾರವಿದ್ದಂತೆ. ಆದ್ದರಿಂದ ಮೊದಲು ತ್ಯಾಜ್ಯದ ನೀರು ಕೆರೆ ಸೇರದಂತೆ ಮಾಡಲು ಪ್ರಮುಖ ಸ್ಥಳಗಳಲ್ಲಿ ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಇದಕ್ಕೂ ಮೊದಲು ಕೆರೆ ನೀರು ಸ್ವಚ್ಛತೆಗೊಳಿಸಲಾಗುತ್ತಿದೆ. ಬಯೊಕಾನ್‌ ಸಹಯೋಗದಲ್ಲಿ ಬೆಂಗಳೂರಿನ ಹೆಬ್ಬಗೋಡಿ ಕೆರೆಯಲ್ಲಿ ಇದೇ ರೀತಿ ನೀರು ಸ್ವಚ್ಛಗೊಳಿಸಿದ್ದೆವು. ಈಗ ಅದು ಪ್ರವಾಸಿ ತಾಣವಾಗಿ ರೂಪಗೊಂಡಿದ್ದು, ಉಣಕಲ್‌ ಕೆರೆ ಕೂಡ ಅದೇ ರೀತಿ ಆಗುತ್ತದೆ’ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ಪ್ರತಿಕ್ರಿಯಿಸಿ, ‘ಉಣಕಲ್‌ ಕೆರೆ ಸ್ವಚ್ಛಗೊಳಿಸುವ ಗುತ್ತಿಗೆ ಪಡೆದಿರುವ ಕಂಪನಿಯೇ ಐದು ವರ್ಷ ನಿರ್ವಹಣೆ ಮಾಡಲಿದೆ. ಮುಂದೆ ಅಲ್ಲಿ ಮತ್ತೆ ಕಳೆ ಬೆಳೆಯುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು