ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಕೆಸಿಸಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

Published 23 ನವೆಂಬರ್ 2023, 13:32 IST
Last Updated 23 ನವೆಂಬರ್ 2023, 13:32 IST
ಅಕ್ಷರ ಗಾತ್ರ

ಧಾರವಾಡ: ನಗರದ ಕರ್ನಾಟಕ ಸೆಂಟ್ರಲ್‌ ಕೋಆಪರೇಟಿವ್‌ (ಕೆಸಿಸಿ) ಬ್ಯಾಂಕ್‌ ಅಧ್ಯಕ್ಷರಾಗಿ ಶಿವಕುಮಾರಗೌಡ ಸಿದ್ದಲಿಂಗನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ನಿಂಗನಗೌಡ ಮುದಿಗೌಡ ಮರಿಗೌಡ್ರ ಅವರು ಅವಿರೋಧವಾಗಿ ಗುರುವಾರ ಆಯ್ಕೆಯಾದರು.

ನಗರದ ಸುಭಾಸ ರಸ್ತೆಯಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಚುನಾಣಾಧಿಕಾರಿ ಷಾ ಅಲಂ ಹುಸೇನ್‌ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಶಿವಕುಮಾರಗೌಡ ಅವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಲಕೇರಿಯ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ ಸದಸ್ಯ. ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ನಿಂಗನಗೌಡ ಅವರು ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ಧಾರೆ. ಪಟ್ಟಣ ಸಹಕಾರ ಬ್ಯಾಂಕ್‌ ಹಾಗೂ ಪತ್ತಿನ ಸಹಕಾರ ಸಂಘದ ಸದಸ್ಯ. ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ನೂತನ ಅಧ್ಯಕ್ಷ ಶಿವಕುಮಾರಗೌಡ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ಹಿಂದೆ ಮೂರು ಬಾರಿ ಅಧ್ಯಕ್ಷ ಸ್ಥಾನ ನಿರ್ವಹಿಸಿದ ಅನುಭವ ಇದೆ. ಸಹಕಾರ ಸಂಘಗಳ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಲು ಒತ್ತು ನೀಡುತ್ತೇನೆ. ರೈತರು ಮತ್ತು ಬ್ಯಾಂಕ್‌ ಏಳಿಗೆಗೆ ಶ್ರಮಿಸುತ್ತೇವೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ನಿಂಗನಗೌಡ ಮಾತನಾಡಿ, ‘ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಒದಗಿಸಲು ಗಮನ ಹರಿಸುತ್ತೇವೆ. ಠೇವಣಿ ಸಂಗ್ರಹ ಮತ್ತು ಬ್ಯಾಂಕ್‌ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ’ ಎಂದು ತಿಳಿಸಿದರು.

ಈ ಬ್ಯಾಂಕ್‌ ಅವಿಭಜಿತ ಧಾರವಾಡ ಜಿಲ್ಲೆ(ಗದಗ, ಹಾವೇರಿ) ವ್ಯಾಪ್ತಿ ಹೊಂದಿದೆ. ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಸಹಿತ 21 ಸದಸ್ಯರು ಇದ್ಧಾರೆ.

ಬ್ಯಾಂಕ್‌ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಸಹಾಯಕ‌ ಚುನಾವಣಾಧಿಕಾರಿ ತಹಶೀಲ್ದಾರ್‌ ದೊಡ್ಡಪ್ಪ ಹೂಗಾರ, ಬ್ಯಾಂಕ್ ‌ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT